ಸಂವಿಧಾನ ಉಳಿಯಬೇಕಾದರೆ ಯಶವಂತ ಸಿನ್ಹಾ ರಾಷ್ಟ್ರಪತಿ ಆಗಬೇಕಿದೆ: ಮಾಜಿ ಸಿಎಂ ಸಿದ್ದರಾಮಯ್ಯ
ದೇಶದ ಸಂವಿಧಾನ ಉಳಿಯಬೇಕಾದರೆ ಯಶವಂತ ಸಿನ್ಹಾ ಅವರು ಮುಂದಿನ ರಾಷ್ಟ್ರಪತಿ ಆಗಬೇಕಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು: ದೇಶದ ಸಂವಿಧಾನ ಉಳಿಯಬೇಕಾದರೆ ಯಶವಂತ ಸಿನ್ಹಾ ಅವರು ಮುಂದಿನ ರಾಷ್ಟ್ರಪತಿ ಆಗಬೇಕಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ಶಾಂಗ್ರಿಲಾ ಹೊಟೇಲ್ ನಲ್ಲಿ ಮಾತನಾಡಿದ ಅವರು, ಯಶವಂತ ಸಿನ್ಹಾ ಅವರು ಸಿವಿಲ್ ಸರ್ವಿಸ್ ನಲ್ಲಿದ್ದವರು. ರಾಜಕಾರಣಿಯಾಗಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಒಬ್ಬ ಮುತ್ಸದ್ದಿ ರಾಜಕಾರಣಿಯಾಗಿದ್ದಾರೆ.
ಪ್ರಮುಖವಾಗಿ ದೇಶದ ಸಂವಿಧಾನ ಅಪಾಯದಲ್ಲಿದೆ. ದೇಶದ ಸಂವಿಧಾನ ಉಳಿಯಬೇಕಾದರೆ ಯಶವಂತ ಸಿನ್ಹಾ ಅವರು ರಾಷ್ಟ್ರಪತಿ ಆಗಬೇಕಿದೆ. ಅವರು ನಮ್ಮ ಶಾಸಕಾಂಗ ಸಭೆಯಲ್ಲಿ ಬಂದು ಮತ ಕೇಳಿದ್ದಾರೆ. ನಾವು ಎಲ್ಲ ಮತಗಳನ್ನು ಅವರಿಗೆ ಹಾಕುವ ಭರವಸೆ ನೀಡಿದ್ದೇವೆ. ಅವರು ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರು ಮತ್ತು ಶಾಸಕರನ್ನು ಭೇಟಿ ಮಾಡಿದ ನಂತರ ಬೆಂಗಳೂರಿನಲ್ಲಿ ಮಾತನಾಡಿದ ಸಿನ್ಹಾ, ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡೆದುಕೊಳ್ಳುವ ಕೆಲಸ ಮಾಡುತ್ತಿದೆ. ಇಡಿ, ಸಿಬಿಐಗಳ ಮೂಲಕ ಪ್ರತಿಪಕ್ಷಗಳ ನಾಯಕರನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಪ್ರತಿಪಕ್ಷಗಳ ಗೌರವಾನ್ವಿತ ನಾಯಕರನ್ನು ಅವಮಾನ ಮಾಡುವ ದೃಷ್ಟಿಯಿಂದ ಇಡಿ ವಿಚಾರಣೆಗೆ ಕರೆಯಲಾಗುತ್ತಿದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ಬೆಳವಣಿಗೆ, ಮಧ್ಯಪ್ರದೇಶ, ಕರ್ನಾಟಕ, ರಾಜ್ಯಗಳಲ್ಲಿ ಆಗಿರುವ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದರು.
ನಾನು ಆಯ್ಕೆಯಾದರೆ ಸಂವಿಧಾನಕ್ಕೆ ಉತ್ತರದಾಯಿತ್ವ ಆಗಲಿದ್ದೇನೆ. ಸಂವಿಧಾನಕ್ಕೆ ಮಾತ್ರ ಉತ್ತರದಾಯಿತ್ವ ಆಗಲಿದ್ದೇನೆ. ಆಡಳಿತ ಪಕ್ಷದ ಅಭ್ಯರ್ಥಿಯೂ ಹಾಗೆಯೇ ಇರಬೇಕು ಎಂದು ಬಯಸುತ್ತಿದ್ದೇನೆ. ರಾಷ್ಟ್ರಪತಿ ರಬ್ಬರ್ ಸ್ಟಾಂಪ್ ಆಗಬಾರದು. ಆಡಳಿತ ಪಕ್ಷದ ಅಭ್ಯರ್ಥಿ ಇದನ್ನು ಗಮನಿಸಲಿ. ರಾಜ್ಯಗಳಲ್ಲಿ ನಡೆಯುತ್ತಿರುವ ಆಪರೇಷನ್ ಕಮಲ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ. ಆಡಳಿತ ಪಕ್ಷದ ಅಭ್ಯರ್ಥಿ ಅದನ್ನು ಪರಿಪಾಲಿಸಲಿ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


