'ವಯಸ್ಸಾಯ್ತು ಮನೆಯಲ್ಲಿರಿ, ಕಿರಿಯರಿಗೆ ಅವಕಾಶ ಕೊಡಿ': ಚುನಾವಣೆಯಲ್ಲಿ ಸ್ಪರ್ಧಿಸದಂತೆ ಹಿರಿಯ ನಾಯಕರ ಮನವೊಲಿಕೆ! ಬೊಮ್ಮಾಯಿ ಸಂಪುಟದ ಹಲವರಿಗೆ ಕೊಕ್!
ಇನ್ನು ಕೆಲವು ಬಿಜೆಪಿ ಶಾಸಕರು ಕೂಡ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಆರೋಗ್ಯ ಸೇರಿದಂತೆ ನಾನಾ ಕಾರಣಗಳಿಂದ ಸ್ಪರ್ಧಿಸುವುದಿಲ್ಲ ಎಂದು ಕೆಲವು ಹಿರಿಯ ನಾಯಕರು ಹೇಳಿದ್ದಾರೆ.

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ನಡೆಯಲು ಇನ್ನಿ ಕೆಲವೇ ತಿಂಗಳುಗಳು ಬಾಕಿಯಿವೆ. ಮುಂದಿನ ಪೀಳಿಗೆಯ ನಾಯಕರಿಗೆ ಅವಕಾಶ ಕಲ್ಪಿಸಲು ಚುನಾವಣೆಗೆ ಸ್ಪರ್ಧಿಸದಂತೆ ಮನವೊಲಿಸಲು ರಾಜ್ಯ ಬಿಜೆಪಿ 70 ವರ್ಷ ಮೇಲ್ಪಟ್ಟ ತನ್ನ ನಾಯಕರ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ.ಇದರಲ್ಲಿ ಕೆಲವೊಂದು ಷರತ್ತುಗಳು ಅನ್ವಯವಾಗುತ್ತವೆ ಎಂದು ಮೂಲಗಳು ತಿಳಿಸಿವೆ.
ಸದ್ಯ ವಿಧಾನಸಭೆಯಲ್ಲಿ, ಬಿಜೆಪಿಯು 120 ಸ್ಥಾನಗಳನ್ನು ಹೊಂದಿದೆ. ಸವದತ್ತಿ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಆನಂದ ಮಾಮನಿ ಮತ್ತು ಹುಕ್ಕೇರಿ ಶಾಸಕ ಉಮೇಶ ಕತ್ತಿ ನಿಧನರಾಗಿದ್ದಾರೆ.
ಶಿರಸಿಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿನಿಧಿಸುತ್ತಿದ್ದಾರೆ. ಮೂರ್ನಾಲ್ಕು ಅವಧಿಗೆ ಚುನಾಯಿತರಾಗಿ 70 ವರ್ಷ ಮೀರಿದ ಶಾಸಕರು ಅನೇಕರಿದ್ದಾರೆ.
ಕೆಲವು ತಿಂಗಳ ಹಿಂದೆ, 79 ವರ್ಷದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ್ದರು.
ಇದನ್ನೂ ಓದಿ: ರಾಜಕೀಯ ಮರುಪ್ರವೇಶಕ್ಕೆ ನಿರ್ಧಾರ: ಚುನಾವಣೆಯಲ್ಲಿ ಸ್ಪರ್ಧಿಸಲು ಗಂಗಾವತಿ ಕ್ಷೇತ್ರದತ್ತ ಜನಾರ್ಧನ ರೆಡ್ಡಿ ಚಿತ್ತ
ಇನ್ನು ಕೆಲವು ಬಿಜೆಪಿ ಶಾಸಕರು ಕೂಡ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಆರೋಗ್ಯ ಸೇರಿದಂತೆ ನಾನಾ ಕಾರಣಗಳಿಂದ ಸ್ಪರ್ಧಿಸುವುದಿಲ್ಲ ಎಂದು ಕೆಲವು ಹಿರಿಯ ನಾಯಕರು ಹೇಳಿದ್ದಾರೆ.
ಚುನಾವಣೆಯಿಂದ ದೂರ ಉಳಿಯುವಂತ ನಾಯಕರ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಗೆಲುವಿಗಾಗಿ, ಜಾತಿಯ ಅಂಶ ಮತ್ತು ಜನಪ್ರಿಯ ಅವಶ್ಯಕತೆಯಿರುವುದರಿಂದ ಕೆಲವರು ನಾಯಕರು ಸ್ಪರ್ಧಿಸುವುದನ್ನು ತಡೆಯಲು ಸಾಧ್ಯವಿಲ್ಲ. ಕೆಲವು ಹಿರಿಯ ನಾಯಕರು 70 ವರ್ಷ ಮೇಲ್ಪಟ್ಟವರಾಗಿದ್ದರೂ ದೈಹಿಕವಾಗಿಯೂ ಸದೃಢರಾಗಿದ್ದಾರೆ. ನಾವು ಕೆಲವು ನಾಯಕರನ್ನು ಆಯ್ಕೆ ಮಾಡಬಹುದು ಮತ್ತು ಹೊಸಬರಿಗೆ ಅವಕಾಶ ನೀಡುವಂತೆ ಮನವೊಲಿಸಬಹುದು ಹೇಳಿದರು. ಆದರೆ ಅದೇ ಸಮಯದಲ್ಲಿ, ಈ ಹಿರಿಯ ನಾಯಕರನ್ನು ಸ್ಪರ್ಧೆಯಿಂದ ಬಲವಂತವಾಗಿ ಹೊರದೂಡಲಾಗದು ಎಂದು ಅವರು ಹೇಳಿದರು.
ಇತ್ತೀಚೆಗಷ್ಟೇ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಲವು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿ, ಹೊಸಬರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿತ್ತು. ಕರ್ನಾಟಕ ಬಿಜೆಪಿ ಕೂಡ ಇಲ್ಲಿ ಇಂತಹದ್ದೇ ಕಾರ್ಯವಿಧಾನವನ್ನು ನಿರೀಕ್ಷಿಸುತ್ತಿದೆ.
ಹಿರಿಯರಿಗೆ ಟಿಕೆಟ್ ನೀಡದಿರುವ ಸಂಬಂಧ ಕರ್ನಾಟಕ ಮತ್ತು ದೆಹಲಿಯಲ್ಲಿ ಚರ್ಚೆ ನಡೆಯುತ್ತಿವೆ. ಈ ಪಟ್ಟಿಯನ್ನು ಈಗ ಪ್ರಕಟಿಸುವುದಿಲ್ಲ ಏಕೆಂದರೆ ಇದು ಪಕ್ಷದ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು. ಬಸವರಾಜ ಬೊಮ್ಮಾಯಿ ಸಂಪುಟದ ಕೆಲವು ಸಚಿವರಿಗೂ ಟಿಕೆಟ್ ನಿರಾಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಪ್ರತಿಪಕ್ಷ ಕಾಂಗ್ರೆಸ್ ಕೂಡ ಈ ತಂತ್ರವನ್ನು ಅನುಸರಿಸಿ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


