ಸರ್ಕಾರ ತನ್ನ ವೈಫಲ್ಯ ಮರೆಮಾಚಲು ಸಾವರ್ಕರ್ ಉತ್ಸವ ಮಾಡುತ್ತಿದೆ: ಪ್ರಿಯಾಂಕ್ ಖರ್ಗೆ
ಹೇಳಿಕೊಳ್ಳಲು ಯಾವುದೇ ಜನಪರ ಸಾಧನೆಗಳನ್ನು ಮಾಡದ ಬಿಜೆಪಿ ಸರ್ಕಾರ ಜನೋತ್ಸವ ಬದಲಿಗೆ, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸಾವರ್ಕರ್ ಉತ್ಸವವನ್ನು ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರು ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು: ಹೇಳಿಕೊಳ್ಳಲು ಯಾವುದೇ ಜನಪರ ಸಾಧನೆಗಳನ್ನು ಮಾಡದ ಬಿಜೆಪಿ ಸರ್ಕಾರ ಜನೋತ್ಸವ ಬದಲಿಗೆ, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸಾವರ್ಕರ್ ಉತ್ಸವವನ್ನು ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರು ವಾಗ್ದಾಳಿ ನಡೆಸಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಮಾಧ್ಯಮಗೋಷ್ಠಿ ನಡೆಸಿದ ಅವರು, ಸಾವರ್ಕರ್ ಅವರ ವಿಚಾರಧಾರೆಗಳನ್ನು ಮುಂದಿಟ್ಟು ಬಿಜೆಪಿಗೆ ಪಂಚ ಪ್ರಶ್ನೆಗಳನ್ನು ಹಾಕಿದರು.
- ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟ ಮಾಡುವ ಉದ್ದೇಶ ಇದ್ದಿದ್ದರೆ ಅವರು ವಿದೇಶದಲ್ಲಿ ಬಂಧನವಾದಾಗ ಭಾರತಕ್ಕೆ ಬರಲು ಯಾಕೆ ಒಪ್ಪಲಿಲ್ಲ?
- ಸಾವರ್ಕರ್ ಅವರು ಸೆರೆವಾಸದಲ್ಲಿದ್ದಾಗ ಅವರು ಬ್ರಿಟಿಷರಿಗೆ ಆರು ಬಾರಿ ಕ್ಷಮಾಪಣಾ ಪತ್ರ ಬರೆದಿದ್ದು ಯಾಕೆ?
- ಈ ಕ್ಷಮಾಪಣಾ ಪತ್ರಗಳನ್ನು ಬಿಜೆಪಿಯವರು ಮಾಸ್ಟರ್ ಸ್ಟ್ರೋಕ್ ಎನ್ನುತ್ತಿದ್ದು, ಇವುಗಳು ಮಾಸ್ಟರ್ ಸ್ಟ್ರೋಕ್ ಎಂದು ಭಾವಿಸಿದರೂ ಅವರು ಜೈಲಿಂದ ಬಿಡುಗಡೆಯಾದ ನಂತರ ಅವರು ಎಷ್ಟು ಹೋರಾಟ ಮಾಡಿದರು? ಅದರ ಪರಿಣಾಮಗಳೇನು?
- ಮುಸ್ಲೀಂ ಲೀಗ್ ಜತೆ ಅವರು ದೇಶದ ಹಲವು ಕಡೆಗಳಲ್ಲಿ ಸರ್ಕಾರ ರಚಿಸಿದ್ದು ಯಾಕೆ? ಅವರು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಲಿಲ್ಲ ಯಾಕೆ?
- ಸಾವರ್ಕರ್ ಹಿಂದುತ್ವದ ಪಿತಾಮಹ ಎಂಬುದು ನಿಜವಾಗಿದ್ದರೆ, ಅವರು ಗೋಮಾತೆಯ ಪೂಜೆ ಮಾಡಬೇಡಿ ಎಂದಿದ್ದರು. ಅವರ ಮಾತಿನಂತೆ ಗೋಮಾತೆ ಪೂಜೆ ಬಿಡುತ್ತೀರಾ? ಧರ್ಮದ ಆಧಾರದ ಮೇಲೆ ನಮ್ಮ ದೇಶ ವಿಭಜನೆ ಮಾಡಬೇಕು ಎಂದು ಮೊದಲು ಧ್ವನಿ ಎತ್ತಿದವರ ಪೂಜೆ ಯಾಕೆ ಮಾಡುತ್ತಿದ್ದೀರಿ? ಸಾವರ್ಕರ್ ನಾಸ್ತಿಕರಾಗಿದ್ದರು, ಈಗ ಪ್ರತಿ ಗಣೇಶೋತ್ಸವದ ಪೆಂಡಾಲ್ ನಲ್ಲಿ ಸಾವರ್ಕರ್ ಫೋಟೋ ಇಡುತ್ತಿರುವುದೇಕೆ? ಆ ಮೂಲಕ ದೇವರು ಮತ್ತು ಸಾವರ್ಕರ್ ಗೆ ಅಪಮಾನ ಮಾಡುತ್ತಿರುವುದೇಕೆ? ಎಂದು ಪ್ರಶ್ನಿಸಿದರು.
ಇದಕ್ಕಿಂತ ಬೇರೆ ಸಾಕ್ಷಿ ಮತ್ತೇನು ಬೇಕು?
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಸಚಿವ ಮುನಿರತ್ನ ಅವರ ಮೇಲೆ ಮಾಡಿರುವ ಕಮಿಷನ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ‘ಈ ವಿಚಾರದಲ್ಲಿ ನಾವು ಆರೋಪ ಮಾಡಿದಾಗ ಸಾಕ್ಷಿ ಕೊಡಿ ಎಂದು ಕೇಳುತ್ತಾರೆ. ಈಗ ರಾಜ್ಯ ಸರ್ಕಾರದ ನೋಂದಣಿಯಾಗಿರುವ, ರಾಜ್ಯ ಸರ್ಕಾರದ ಕಾಮಗಾರಿಗಳನ್ನು ಮಾಡುವ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಸಚಿವರುಗಳ ಮೇಲೆ ನೇರ ಆರೋಪ ಮಾಡುತ್ತಿರುವಾಗ ಇದಕ್ಕಿಂತ ಬೇರೆ ಸಾಕ್ಷಿ ಮತ್ತೇನು ಬೇಕು? ಮುಖ್ಯಮಂತ್ರಿಗಳು ನಮ್ಮನ್ನು ಕರೆಸಿ ಚರ್ಚೆ ಮಾಡಲಿ. ನಾವು ದಾಖಲೆಗಳನ್ನು ನೀಡಲು ಸಿದ್ಧರಿದ್ದೇವೆ ಎಂದು ಕೆಂಪಣ್ಣ ಅವರೇ ಹೇಳಿದ್ದು, ಇದು ಯಾಕೆ ಆಗಿಲ್ಲ. ಈ ಸರ್ಕಾರ ನಿಜಕ್ಕೂ ತಪ್ಪು ಮಾಡಿಲ್ಲವಾದರೆ ಅವರಿಂದ ದಾಖಲೆ ಪಡೆದು, ಅದರ ತನಿಖೆಗೆ ಒಂದು ವಿಶೇಷ ತನಿಖಾ ತಂಡ ರಚನೆ ಮಾಡಿಲ್ಲ ಯಾಕೆ? ಇವರು ತಮಗೆ ತಾವೇ ನಿರಪರಾಧಿಗಳು ಎಂದು ಸರ್ಟಿಫಿಕೇಟ್ ಕೊಟ್ಟುಕೊಳ್ಳುತ್ತಿರುವುದೇಕೆ? ಬಿಜೆಪಿಗೆ ವಲಸಿಗ ಮಂತ್ರಿಗಳು ಅನಿವಾರ್ಯವಾಗಿದ್ದಾರೆ. ಪ್ರವಾಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮಂತ್ರಿಗಳಿಗೆ ಪರಿಪರಿಯಾಗಿ ಬೇಡಿಕೊಂಡರು ಯಾರೂ ಹೋಗಲಿಲ್ಲ. ಕೊನೆಗೆ ಮುಖ್ಯಮಂತ್ರಿಗಳು ಜಿಲ್ಲಾ ಪರಿಶಿಲನಾ ಸಭೆ ಮಾಡಿ ಮಂತ್ರಿಗಳಿಗೆ ವರದಿ ನೀಡಬೇಕಾಯಿತು. ಆಪರೇಷನ್ ಕಮಲ ಮಾಡಿದ ಬಿಜೆಪಿ ಈಗ ಅನುಭವಿಸುತ್ತಿದೆ. ಉಪ್ಪು ತಿಂದ ಮೇಲೆ ನೀರು ಕುಡಿಯಬೇಕಲ್ಲವೇ?’ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


