ರಾಜಕೀಯ

ಅಮಾಯಕರನ್ನು ಬಲಿತೆಗೆದುಕೊಂಡ ಚಾಮರಾಜನಗರ ದುರಂತದ ನಂತರವೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ: ಸಿದ್ದರಾಮಯ್ಯ

25 ಅಮಾಯಕರನ್ನು ಬಲಿತೆಗೆದುಕೊಂಡ ಚಾಮರಾಜನಗರ ಜಿಲ್ಲೆಯ ದುರಂತ ಘಟನೆಯ ನಂತರವೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ

ಅಮಾಯಕರನ್ನು ಬಲಿತೆಗೆದುಕೊಂಡ ಚಾಮರಾಜನಗರ ದುರಂತದ ನಂತರವೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ: ಸಿದ್ದರಾಮಯ್ಯ
ಸಿದ್ದರಾಮಯ್ಯ
Published On :

ಬೆಂಗಳೂರು: ಬೆಂಗಳೂರು ನಗರಕ್ಕೆ ಹೋಲಿಸಿದರೆ ಜಿಲ್ಲೆಗಳಲ್ಲಿ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಯ ತೀವ್ರ ಕೊರತೆಯಿರುವುದು ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿಯೇ ಜಗಜ್ಜಾಹೀರಾಗಿದೆ. 25 ಅಮಾಯಕರನ್ನು ಬಲಿತೆಗೆದುಕೊಂಡ ಚಾಮರಾಜನಗರ ಜಿಲ್ಲೆಯ ದುರಂತ ಘಟನೆಯ ನಂತರವೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು ಕೊರೊನಾ ಸೋಂಕು ತ್ವರಿತ ಗತಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹರಡುತ್ತಿರುವುದು ಆಘಾತಕಾರಿ ಬೆಳವಣಿಗೆ. ರಾಜ್ಯದಲ್ಲಿ ಈಗಿನ ಶೇಕಡಾ 55ರಷ್ಟು ಸೋಂಕಿನ ಪ್ರಕರಣಗಳು ಗ್ರಾಮೀಣ ಪ್ರದೇಶದಿಂದ ವರದಿಯಾಗುತ್ತಿರುವುದನ್ನು ತಜ್ಞರು ಗುರುತಿಸಿದ್ದಾರೆ. ತಿಂಗಳ ಹಿಂದೆ ಈ ಪ್ರಮಾಣ ಶೇಕಡಾ 30 ರಷ್ಟಿತ್ತು. ರಾಜ್ಯ ಸರ್ಕಾರ ಬೆಂಗಳೂರು ನಗರಕ್ಕಷ್ಟೇ ಸೀಮಿತವಾಗದೆ ಜಿಲ್ಲೆ, ತಾಲೂಕು, ಗ್ರಾಮಗಳ ಕಡೆ ಗಮನಹರಿಸಬೇಕಾಗಿದೆ ಎಂದು ಹೇಳಿದ್ದಾರೆ.

ಈಗಲೂ ಕಾಲ ಮಿಂಚಿಲ್ಲ, ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆ, ಆಮ್ಲಜನಕ, ಐಸಿಯು, ವೆಂಟಿಲೇಟರ್ ಮತ್ತು ವೈದ್ಯಕೀಯ ಸಿಬ್ಬಂದಿಯ ವ್ಯವಸ್ಥೆಯನ್ನು ಬಲಪಡಿಸಬೇಕು. ಜಿಲ್ಲೆಗಳಲ್ಲಿ ಕೊರೊನಾ ಚಿಕಿತ್ಸೆ ಮತ್ತು ನಿಯಂತ್ರಣ ವ್ಯವಸ್ಥೆಯ ಹೊಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ವಹಿಸಿಕೊಡಬೇಕು. ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿಯೇ ಮೊಕ್ಕಾಂ ಹೂಡಿ ಮೇಲ್ವಿಚಾರಣೆ ನಡೆಸುವಂತೆ ತಾಕೀತು ಮಾಡಬೇಕು ಎಂದಿದ್ದಾರೆ.

ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಜಿಲ್ಲಾ ಮಟ್ಟದಲ್ಲಿ ಅನುಸರಿಸಲಾಗಿದ್ದ ಸುರಕ್ಷತಾ ಕ್ರಮಗಳನ್ನು ಎರಡನೇ ಅಲೆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಕೂಡಾ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ಉಲ್ಭಣಗೊಳ್ಳಲು ಕಾರಣ. ಕಳೆದ ಒಂದೆರಡು ತಿಂಗಳ ಅವಧಿಯಲ್ಲಿ ಹೆಚ್ಚು ಸೋಂಕಿನ ಪ್ರಕರಣಗಳಿದ್ದ ಮಹಾರಾಷ್ಟ್ರ ಸೇರಿದಂತೆ ಬೇರೆ ರಾಜ್ಯಗಳಿಂದ ಜನ ಯಾವುದೇ ತಪಾಸಣೆ, ಪರೀಕ್ಷೆ ಇಲ್ಲದೆ ಕರ್ನಾಟಕಕ್ಕೆ ಬಂದಿದ್ದಾರೆ. ಬೆಂಗಳೂರಿನ ಸ್ಥಿತಿ ಬಿಗಡಾಯಿಸಿದ ನಂತರ ರಾಜಧಾನಿಯಿಂದಲೂ ಜನ ಹಿಂಡುಗಟ್ಟಿಕೊಂಡು ಜಿಲ್ಲೆಗಳಿಗೆ ತೆರಳಿದ್ದಾರೆ. ಅಂತರರಾಜ್ಯ ಮಾತ್ರವಲ್ಲ ಅಂತರಜಿಲ್ಲಾ ಸಂಚಾರವನ್ನು ಕೂಡಾ ನಿರ್ಬಂಧಿಸಬೇಕು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.