ಸಿದ್ದರಾಮಯ್ಯ ಗಾರು, ಈ ವರದಿಗಳನ್ನು ವಸಿ ಓದುವಿರಾ? ಶಿಷ್ಯನಿಗೆ ಬುದ್ಧಿ ಹೇಳುವುದು ಬಿಟ್ಟು ಶಿಖಾರನ್ನೇ ಎತ್ತಂಗಡಿ ಮಾಡಿದ್ದು ಮರೆತುಹೋಯಿತೇ?
ಐಎಎಸ್ ಅಧಿಕಾರಿಗಳ ಕಿತ್ತಾಟಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಸಂಸದ ಪ್ರತಾಪ್ ಸಿಂಹ ಟ್ವಿಟರ್‌ನಲ್ಲಿ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು: ಐಎಎಸ್ ಅಧಿಕಾರಿಗಳ ಕಿತ್ತಾಟಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಸಂಸದ ಪ್ರತಾಪ್ ಸಿಂಹ ಟ್ವಿಟರ್‌ನಲ್ಲಿ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು ಜಿಲ್ಲೆಯ ಐಎಎಸ್ ಅಧಿಕಾರಿಗಳ ನಡುವಿನ ಕಿತ್ತಾಟಕ್ಕೆ ಬಿಜೆಪಿಯ ಚುನಾಯಿತ ಪ್ರತಿನಿಧಿಗಳು ಹಾಗೂ ಜೆಡಿಎಸ್‌ನ ಸಾ.ರಾ ಮಹೇಶ್ ಕಾರಣ. ಸಂಸದ ಪ್ರತಾಪ್ ಸಿಂಹ ಅವರು ಮೊದಲು ರೋಹಿಣಿ ಸಿಂಧೂರಿ ಅವರನ್ನು ಬೆಂಬಲಿಸಿದ್ದರು. ಈಗ ಶಿಲ್ಪಾನಾಗ್ ಪರವಾಗಿ ನಿಂತಿದ್ದಾರೆ. ಒಟ್ಟಿನಲ್ಲಿ ಇಬ್ಬರನ್ನೂ ಎತ್ತಿಕಟ್ಟಿ ಜಗಳ ತಂದಿಟ್ಟಿದ್ದಾರೆ’ ಎಂದು ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಆರೋಪಿಸಿದ್ದರು.
ಇದಕ್ಕೆ ತಿರುಗೇಟು ಕೊಟ್ಟಿದ್ದ ಪ್ರತಾಪ್ ಸಿಂಹ, ‘ಸಿದ್ದರಾಮಯ್ಯ ಗಾರು, ಈ ವರದಿಗಳನ್ನು ವಸಿ ಓದುವಿರಾ?! ಅಂದಹಾಗೆ, ನೀವು ಮುಖ್ಯಮಂತ್ರಿಯಾಗಿದ್ದಾಗ ನಿಮ್ಮ ಶಿಷ್ಯ ಮರಿಗೌಡ ಡಿಸಿ ಶಿಖಾರನ್ನು ಅವಾಚ್ಯ ಪದಗಳಿಂದ ಸಾರ್ವಜನಿಕವಾಗಿ ನಿಂದಿಸಿದಾಗ ಶಿಷ್ಯನಿಗೆ ಬುದ್ಧಿ ಹೇಳುವುದು ಬಿಟ್ಟು ಶಿಖಾರನ್ನೇ ನೀವು ಎತ್ತಂಗಡಿ ಮಾಡಿದ್ದು ಮರೆತುಹೋಯಿತೇ?' ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರತಾಪ್ ಸಿಂಹ ಆರೋಪ ಕುರಿತು ಪ್ರತಿಕ್ರಿಯಿಸಿರುವ ಡಾ.ಯತೀಂದ್ರ ಸಿದ್ದರಾಮಯ್ಯ, ‘ಶಿಖಾ ಅವರು ಡಿಸಿಯಾಗಿ ಮೂರು ವರ್ಷಗಳ ಅವಧಿ ಪೂರೈಸಿ ನಂತರ ವರ್ಗಾವಣೆಗೊಂಡಿದ್ದರು. ಈಗಿನ ಹಾಗೆ 8 ತಿಂಗಳಿಗೇ ಎತ್ತಂಗಡಿಯಾಗಿರಲಿಲ್ಲ. ಕೊರೊನಾ ಸಂಕಷ್ಟದಲ್ಲೂ ನೀವು ಹಾಗೂ ಡಿಸಿ ಮಾಧ್ಯಮಗಳಲ್ಲಿ ಬಡಿದಾಡಿಕೊಂಡಿದ್ದು ಹಾಗೂ ಉನ್ನತ ಅಧಿಕಾರಿಗಳು ಬೀದಿರಂಪ ಮಾಡಿಕೊಂಡಿದ್ದು ಆಡಳಿತಯಂತ್ರದ ಮೇಲಿನ ನಿಮ್ಮ ಹಿಡಿತ ತಪ್ಪಿದ್ದನ್ನು ತೋರುತ್ತದೆ’ ಎಂದು ಕಿಡಿಕಾರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


