ಹೈಕಮಾಂಡ್ ನಿಂದ ಸಂಜೆಯೊಳಗೆ ಸಂದೇಶ ಬರಬಹುದು, ನಂತರ ಸೂಕ್ತ ತೀರ್ಮಾನ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
ಸಂಜೆಯೊಳಗೆ ಹೈಕಮಾಂಡ್ ನಿಂದ ಸಂದೇಶ ಬರಬಹುದು, ಸಂದೇಶ ಬಂದ ಕೂಡಲೇ ನಿಮಗೂ ತಿಳಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಬೆಳಗಾವಿ: ಸಂಜೆಯೊಳಗೆ ಹೈಕಮಾಂಡ್ ನಿಂದ ಸಂದೇಶ ಬರಬಹುದು, ಸಂದೇಶ ಬಂದ ಕೂಡಲೇ ನಿಮಗೂ ತಿಳಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹೆಚ್ಚು ಹಾನಿಯಾಗಿದೆ, ಎಲ್ಲೆಲ್ಲಿ ಏನೇನು ಆಗಿದೆ, ಆಸ್ತಿಪಾಸ್ತಿ, ಜನರಿಗೆ ಆಗಿರುವ ಸಂಕಷ್ಟ, ನಷ್ಟ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದೇನೆ, ನನ್ನ ಜೊತೆ ಸಂಪುಟ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳು ಇದ್ದಾರೆ ಎಂದು ಹೇಳಿದರು.
ಇಂದು ಬೆಳಗಾವಿಯ ಹಾನಿಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಮೊದಲು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ನಿಂದ ಸಂದೇಶ ಬಂದ ಮೇಲೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು, ಎರಡು ವರ್ಷಗಳ ಆಡಳಿತ ತೃಪ್ತಿ ನೀಡಿದೆಯೇ ಎಂದು ಸುದ್ದಿಗಾರರು ಕೇಳಿದಾಗ ಜನರಿಗೆ ನನ್ನ ಆಡಳಿತ ತೃಪ್ತಿ ನೀಡಿದರೆ ಆಯಿತು ಎಂದರು.
ದಲಿತ ನಾಯಕ ಸಿಎಂ ಆಗಲಿದ್ದಾರೆಯೇ ಎಂದು ಕೇಳಿದ್ದಕ್ಕೆ ಮುಂದಿನ ಸಿಎಂ ಯಾರಾಗಬೇಕೆಂದು ನಿರ್ಧಾರ ಮಾಡುವುದು ನಾನಲ್ಲ, ಹೈಕಮಾಂಡ್, ಸ್ವಾಮೀಜಿಗಳು ಕೂಡ ನನ್ನ ಪರ ಸಮಾವೇಶ ಮಾಡುವ ಅಗತ್ಯವಿಲ್ಲ ಎಂದರು. ಪ್ರಧಾನಿ ಮೋದಿ, ಅಮಿತ್ ಶಾ, ರಾಷ್ಟ್ರಾಧ್ಯಕ್ಷ ನಡ್ಡಾ ಅವರ ಮೇಲೆ ನನಗೆ ನಂಬಿಕೆಯಿದೆ ಎಂದರು.
ನಾಳೆ ಬಿಎಸ್ ವೈ ಅಧಿಕಾರ ಅಂತ್ಯ?: ಇಂದು ಮುಖ್ಯಮಂತ್ರಿಗಳ ಮಾತಿನ ವರಸೆ ನೋಡಿದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನಾಳೆಗೆ ಎರಡು ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ಅವರ ಮುಖ್ಯಮಂತ್ರಿ ಅಧಿಕಾರಾವಧಿ ಕೊನೆಗೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರ ಬಗ್ಗೆ ಸ್ಟಿಂಗ್ ಆಪರೇಶನ್ ವಿಚಾರವಾಗಿ ಮಾಧ್ಯಮಗಳಲ್ಲಿ ನೋಡಿದ್ದೇನೆ. ವಾಸ್ತವ ಸ್ಥಿತಿಗತಿಗಳನ್ನು ತಿಳಿದುಕೊಂಡು ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು.
ದೇವರ ದಯೆಯಿಂದ ಇಂದು ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದೆ. ಹೆಚ್ಚು ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಾಯಂಕಾಲ ವಾಪಸ್ಸಾಗುತ್ತೇವೆ ಎಂದರು.
ಸಂಕೇಶ್ವರಕ್ಕೆ ಸಿಎಂ ಭೇಟಿ: ಮುಖ್ಯಮಂತ್ರಿ ಯಡಿಯೂರಪ್ಪ ವಿಮಾನ ನಿಲ್ದಾಣದಿಂದ ನೇರವಾಗಿ ಹೋಗಿದ್ದು ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರಕ್ಕೆ. ಹಿರಣ್ಯಕೇಶಿ ನದಿಯಲ್ಲಿ ನೀರು ಉಕ್ಕಿ ಹರಿದಿದ್ದರಿಂದ ತೀರದ ಸುಮಾರು 500 ಮನೆಗಳು ಮುಳುಗಡೆಗೊಂಡಿವೆ.
ಪ್ರತಿವರ್ಷ ಅತಿವೃಷ್ಟಿಯಾದಾಗ ಈ ರೀತಿ ನೀರು ನುಗ್ಗುವುದರಿಂದ ಇಲ್ಲಿನ ನಿವಾಸಿಗಳು ಶಾಶ್ವತ ಪರಿಹಾರಕ್ಕೆ ಒತ್ತಾಯಿಸುತ್ತಿದ್ದಾರೆ. ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಹಿಪ್ಪರಗಿ ಜಲಾಶಯದ ನೀರಿನ ಮಟ್ಟ ಇಂದು 3.20 ಲಕ್ಷ ಕ್ಯೂಸೆಕ್ಸ್ ಮೀರಿದೆ. ಒಳ ಹರಿವು 3.20 ಲಕ್ಷ ಕ್ಯೂಸೆಕ್ಸ್ ಆಗಿದ್ದು ಹೊರ ಹರಿವು 3.19 ಲಕ್ಷ ಕ್ಯೂಸೆಕ್ಸ್ ಆಗಿದೆ.
ಇಂದು ಅಪರಾಹ್ನ ಹೊತ್ತಿಗೆ ಬೆಳಗಾವಿ ಪ್ರವಾಸವನ್ನು ಮುಗಿಸಿ ನೆರೆ-ಪ್ರವಾಹ ಪರಾಮರ್ಶೆ ನಡೆಸಿ ಸಾಯಂಕಾಲ ಬೆಂಗಳೂರಿಗೆ ಮುಖ್ಯಮಂತ್ರಿಗಳು ವಾಪಸ್ಸಾಗಲಿದ್ದಾರೆ.
ವರಿಷ್ಠರು ಮೌನ: ರಾಜ್ಯ ರಾಜಕೀಯದಲ್ಲಿ ಕಳೆದೊಂದು ವಾರದಿಂದ ಮುಖ್ಯಮಂತ್ರಿ ಬದಲಾವಣೆಯದ್ದೇ ಸುದ್ದಿ. ವಿವಿಧ ಮಠಾಧೀಶರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ, ಯಡಿಯೂರಪ್ಪನವರು ಕೂಡ ಹೇಳಿಕೆ ನೀಡಿ ಆಗಿದೆ. ಆದರೆ ವರಿಷ್ಠರು ಇದುವರೆಗೆ ತುಟಿ ಬಿಚ್ಚಿಲ್ಲ, ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದರೆ ಮುಂದೆ ಸಿಎಂ ಯಾರಾಗುತ್ತಾರೆ ಎಂಬ ಬಗ್ಗೆ ಕೂಡ ಮಾಹಿತಿಯಿಲ್ಲ.
ನಾಳೆ ವಿಧಾನ ಸೌಧದಲ್ಲಿ ಕಾರ್ಯಕ್ರಮ: ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ನಾಳೆಗೆ ಎರಡು ವರ್ಷ. ಈ ಹಿನ್ನೆಲೆಯಲ್ಲಿ ನಾಳೆ ವಿಧಾನ ಸೌಧದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸರ್ಕಾರದ ಸಾಧನೆಯನ್ನು ತೋರಿಸುವ ಪುಸ್ತಕ ಬಿಡುಗಡೆಯಾಗಲಿದೆ.
ಹೈಕಮಾಂಡ್ ಯಡಿಯೂರಪ್ಪನವರ ಬದಲಾವಣೆಗೆ ಒಲವು ತೋರಿಸಿದರೂ ಕೂಡ ಮುಂದೆ ಸಿಎಂ ಯಾರಾಗಬಹುದು ಎಂಬುದಕ್ಕೆ ಸ್ಪಷ್ಟ ಹೆಸರು ವರಿಷ್ಠರ ಕಣ್ಣ ಮುಂದೆ ಇಲ್ಲ. ಈ ಪ್ರವಾಹ ಪರಿಸ್ಥಿತಿ ಹೊತ್ತಿನಲ್ಲಿ, ಕೋವಿಡ್ ಸಂಕಷ್ಟ ಮಧ್ಯೆ ಯಡಿಯೂರಪ್ಪನವರನ್ನು ಬದಲಾಯಿಸಿದರೆ ಕಷ್ಟ ಎಂಬ ಅಭಿಪ್ರಾಯ ಕೂಡ ವರಿಷ್ಠರಿಗೆ ಇದ್ದಂತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


