ರಾಜಕೀಯ

'ಇನ್ನು 100 ವರ್ಷಗಳಾದ್ರು ಕೆಆರ್ ಎಸ್ ಡ್ಯಾಂ ಅಲ್ಲಾಡಲ್ಲ, ನಾನೇನು ಅಂಬರೀಷ್ ಗುಲಾಮನಾಗಿದ್ನೇ': ಹೆಚ್ ಡಿ ಕುಮಾರಸ್ವಾಮಿ

2018ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಕೆಆರ್ ಎಸ್ ಸುತ್ತಮುತ್ತ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ಆಗಬಾರದೆಂದು ಜಿಲ್ಲಾಧಿಕಾರಿಗಳ ಮೂಲಕ ಆದೇಶ ಹೊರಡಿಸಿದ್ದೆ. 2018ರಲ್ಲಿ ಸೆಕ್ಷನ್ 144 ನ್ನು ತಂದಿದ್ದೆವು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

'ಇನ್ನು 100 ವರ್ಷಗಳಾದ್ರು ಕೆಆರ್ ಎಸ್ ಡ್ಯಾಂ ಅಲ್ಲಾಡಲ್ಲ, ನಾನೇನು ಅಂಬರೀಷ್ ಗುಲಾಮನಾಗಿದ್ನೇ': ಹೆಚ್ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ
Published On :

ಮಂಡ್ಯ: 2018ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಕೆಆರ್ ಎಸ್ ಸುತ್ತಮುತ್ತ 20ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ಆಗಬಾರದೆಂದು ಜಿಲ್ಲಾಧಿಕಾರಿಗಳ ಮೂಲಕ ಆದೇಶ ಹೊರಡಿಸಿದ್ದೆ. 2018ರಲ್ಲಿ ಸೆಕ್ಷನ್ 144 ನ್ನು ತಂದಿದ್ದೆವು. ನಮ್ಮ ಪಕ್ಷದ ಶಾಸಕರು ಕೂಡ ಅಕ್ರಮ ಗಣಿಗಾರಿಕೆಗೆ ಬೆಂಬಲಿಸುವುದಿಲ್ಲ, ಮಾಧ್ಯಮಗಳಲ್ಲಿ ನನ್ನ ಬಗ್ಗೆ ಋಣಾತ್ಮಕವಾಗಿ, ಜನಸಾಮಾನ್ಯರಲ್ಲಿ ನನ್ನ ಬಗ್ಗೆ ತಪ್ಪು ಅಭಿಪ್ರಾಯ ಬರುವ ರೀತಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಅವರು ಇಂದು ಮಂಡ್ಯಕ್ಕೆ ಹಿರಿಯ ರಾಜಕಾರಣಿ, ರೈತಪರ, ಜನಪರ ಹೋರಾಟಗಾರ, ಅನಾರೋಗ್ಯಕ್ಕೆ ತುತ್ತಾಗಿರುವ ಜಿ ಮಾದೇಗೌಡರ ಆರೋಗ್ಯ ವಿಚಾರಿಸಲು ಬಂದಿದ್ದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಬೇರೆಯವರು ನೀಡುವ ಹೇಳಿಕೆಗಳನ್ನು ಪರಿಗಣಿಸದೆ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ವಾಸ್ತವಾಂಶಗಳನ್ನು ಪರಿಶೀಲಿಸಬೇಕೆಂದು ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಹೇಳಿದ್ದಾರೆ. ಗಣಿ ಸಚಿವ ಮುರುಗೇಶ್ ನಿರಾಣಿಯವರು ಸಹ ಕಳೆದ ನಾಲ್ಕೈದು ತಿಂಗಳಿನಿಂದ ಕೆಆರ್ ಎಸ್ ನ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಲಾಗಿದೆ ಎಂದು ಇಂದು ಹೇಳಿಕೆ ನೀಡಿದ್ದಾರೆ. ಹೀಗಿರುವಾಗ ಈ ಬಗ್ಗೆ ಚರ್ಚೆ, ವಾಗ್ವಾದಗಳೇಕೆ ಎಂದು ಕೇಳಿದರು.

ಇಂದು ಸುದ್ದಿವಾಹಿನಿಗಳು, ಅವುಗಳನ್ನು ನಡೆಸುವವರನ್ನು ವ್ಯಕ್ತಿಗತವಾಗಿ ತೇಜೋವಧೆ ಮಾಡುವಂತಹ ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದಾರೆ. ನನ್ನ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದೀರಿ ಎಂದು ಸಹ ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಜನಸಾಮಾನ್ಯರು, ರೈತರು ಕಷ್ಟದಲ್ಲಿದ್ದಾರೆ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಅದರ ಬಗ್ಗೆ ಮಾಧ್ಯಮಗಳು ಹೆಚ್ಚಿನ ಬೆಳಕು ಚೆಲ್ಲುವ ಬದಲು 2019ರಲ್ಲಿ ಮಂಡ್ಯ ಲೋಕಸಭೆ ಚುನಾವಣೆ ವೇಳೆ ಯಾರನ್ನೋ ಎತ್ತಿಕಟ್ಟಿ, ಮತ್ತಿನ್ಯಾರನ್ನೋ ತುಳಿಯುವ ಕೆಲಸ ಏಕೆ ಮಾಡುತ್ತಿದ್ದೀರಿ, ಆಮಿಷಕ್ಕೊಳಗಾಗಿ ಸುದ್ದಿಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಿ ಎಂದು ಕೇಳಿದರು.

ಸಂಸದೆ ಸುಮಲತಾ ವಿಷಯವನ್ನು ಮಾಧ್ಯಮ ಪ್ರತಿನಿಧಿಗಳು ಪ್ರಸ್ತಾಪಿಸಿದಾಗ ಕೈ ಮುಗಿದ ಕುಮಾರಸ್ವಾಮಿ, ಅವರ ಬಗ್ಗೆ ನಾನೇಕೆ ಮಾತನಾಡಲಿ, ಅವರು ಮಹಿಳೆ ಬೇರೆ, ರಾಜ್ಯದ ಬೇರೆ ಬಡ ಮಹಿಳೆಯರ ಬಗ್ಗೆ, ಅವರ ಸಮಸ್ಯೆಗಳ ಬಗ್ಗೆ ಮಾತನಾಡೋಣ, ಅವರ ಬಗ್ಗೆಯೇ ಮಾತನಾಡಿ ಸಮಯ ಹಾಳು ಮಾಡುವುದೇಕೆ ಎಂದು ವ್ಯಂಗ್ಯದಿಂದ ಕೇಳಿದರು. 

ನಾನೇನು ಅಂಬರೀಷ್ ಗುಲಾಮನಾ; ಅಂಬರೀಷ್ ಮುಂದೆ ಕೈಕಟ್ಟಿ ನಿಂತುಕೊಂಡ ಫೋಟೋ ಸೋಷಿಯಲ್ ಮೀಡಿಯಾದಲ್ಲಿ, ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಕುಮಾರಸ್ವಾಮಿ, ಜನಸಾಮಾನ್ಯರಿಗೆ ಅಗತ್ಯವಿಲ್ಲದ ಸುದ್ದಿಗಳಿಗೆ, ಅವರಿಗೆ ಸ್ಕೋಪ್ ಕೊಡುವ ವಿಷಯಗಳಿಗೆ ಏಕೆ ಆದ್ಯತೆ ನೀಡುತ್ತೀರಿ, ನಾನು ಜನಸಾಮಾನ್ಯರ ಮಧ್ಯೆ ಗುರುತಿಸಿಕೊಂಡು ರಾಜಕೀಯವಾಗಿ ಮೇಲೆ ಬಂದವನು, ಸಾಮಾನ್ಯ ಜನರ ಮುಂದೆ ಕೂಡ ಕೈಕಟ್ಟಿ ನಿಲ್ಲುತ್ತೇನೆ, ನನ್ನ ಅಭ್ಯಾಸವದು, ಅಂಬರೀಷ್ ಮುಂದೆ ಕೈಕಟ್ಟಿ ನಿಲ್ಲಲು ನಾನೇನು ಅವರ ಗುಲಾಮನಾಗಿದ್ದೆನೇ ಎಂದು ಕೇಳಿದರು.

ಕೆಆರ್ ಎಸ್ ಅಣೆಕಟ್ಟು 100 ವರ್ಷ ಗಟ್ಟಿಯಾಗಿದೆ: ಕೆಆರ್ ಎಸ್ ಡ್ಯಾಂನ ಸುರಕ್ಷತೆ ಬಗ್ಗೆ ಆತಂಕ, ಕಳವಳ ಬೇಡ, ಅದು ಗಟ್ಟಿಯಾಗಿ ಸುಭದ್ರವಾಗಿದೆ, ಇನ್ನು 100 ವರ್ಷಗಳವರೆಗೂ ಏನೂ ಆಗಲ್ಲ, ಇವರು ಸುಮ್ಮನೆ ವಿಷಯ ಪ್ರಸ್ತಾಪ ಮಾಡಿ ಜನರಲ್ಲಿ ಇಲ್ಲದ ಆತಂಕ ಮೂಡಿಸುತ್ತಿದ್ದಾರಷ್ಟೆ, ರಾಜಕೀಯವಾಗಿ ನನ್ನನ್ನು ಮುಗಿಸಲು ನೋಡುತ್ತಿದ್ದಾರೆ, ನಾನು ಅವರ ಬೆದರಿಕೆ, ಕುತಂತ್ರಗಳಿಗೆ ಬಗ್ಗುವವನು, ಹೆದರುವವನಲ್ಲ, ರಾಜಕೀಯವಾಗಿ ಹೇಗೆ ಎದುರಿಸಿ ಮೇಲೆ ಬರಬೇಕು ಎಂದು ನನಗೆ ಗೊತ್ತಿದೆ ಎಂದು ಮಂಡ್ಯ ಸಂಸದೆ ಸುಮಲತಾಗೆ ತಿರುಗೇಟು ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.