2023ರ ಚುನಾವಣೆವರೆಗೂ ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಇಲ್ಲ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟನೆ
ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದಲ್ಲಿ ಯಾವುದೇ ನಾಯಕತ್ವ ಬದಲಾವಣೆಗಳಿಲ್ಲ ಎಂದು ಕೇಂದ್ರ ಸಚಿವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಭಾನುವಾರ ಸ್ಪಷ್ಟಪಡಿಸಿದ್ದಾರೆ.

ಹುಬ್ಬಳ್ಳಿ: ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದಲ್ಲಿ ಯಾವುದೇ ನಾಯಕತ್ವ ಬದಲಾವಣೆಗಳಿಲ್ಲ ಎಂದು ಕೇಂದ್ರ ಸಚಿವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಭಾನುವಾರ ಸ್ಪಷ್ಟಪಡಿಸಿದ್ದಾರೆ.
ನಗರದ ಖಾಸಗಿ ಹೊಟೆಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಇಲ್ಲ. 2023 ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿಯೇ ಕಣಕ್ಕಿಳಿಯಲಾಗುತ್ತದೆ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಯಾವುದೇ ರೀತಿಯ ಆಕ್ಷೇಪಾರ್ಹ ಮಾತುಗಳನ್ನು ಆಡದಂತೆ ಈಗಾಗಲೇ ಕೇಂದ್ರದ ನಾಯಕರು ಸೂಚನೆ ನೀಡಿದ್ದಾರೆ. ಸಚಿವ ಕೆ.ಎಸ್.ಈಶ್ವರಪ್ಪ ಕೂಡ ನಾಯಕತ್ವ ಬದಲಾವಣೆ ಬಗ್ಗೆ ಏನನ್ನೂ ಹೇಳಿಲ್ಲ ಎಂದು ತಿಳಿಸಿದ್ದಾರೆ.
ಬಳಿಕ ಸರ್ಕಾರ ಸಾಧನೆ ಕುರಿತು ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ಗ್ರಾಮೀಣಾಭಿವೃದ್ಧಿಯ ಬಗ್ಗೆ ಚಿಂತನೆ ಮತ್ತು ಅದರ ಕುರಿತ ದೃಷ್ಟಿಕೋನವನ್ನು ಬದಲಾಯಿಸಿದೆ. ಗ್ರಾಮಗಳಿಗೆ ಹೆಚ್ಚಿನ ಅಧಿಕಾರವನ್ನು ನಿಯೋಜಿಸುವ ಮೂಲಕ ಮತ್ತು ಹೆಚ್ಚಿನ ಅನುದಾನವನ್ನು ನೀಡುವ ಮೂಲಕ ಸ್ಥಳೀಯ ಸಂಸ್ಥೆಗಳು ಮತ್ತು ಅವರ ಪ್ರತಿನಿಧಿಗಳಿಗೆ ಅಧಿಕಾರ ನೀಡಿದೆ.
“ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಮೀಸಲಿಟ್ಟ 73,000 ಕೋಟಿ ರೂಪಾಯಿಗಳ ಜೊತೆಗೆ, ಕೇಂದ್ರ ಸರ್ಕಾರವು ಸುಸ್ಥಿರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ವಿವಿಧ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ 1.33 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಯುಪಿಎ ಅವಧಿಯಲ್ಲಿ ಎನ್‌ಆರ್‌ಇಜಿಎಸ್ ಆರಂಭಿಸಲಾಗಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳನ್ನು ನಿರ್ಮಿಸಲು ನಾವು ರಚನಾತ್ಮಕ ಬದಲಾವಣೆ ತಂದಿದ್ದೇವೆ ಎಂದು ಹೇಳಿದ್ದಾರೆ.
ಈ ಹಿಂದೆ ಗ್ರಾಮ ಪಂಚಾಯತಿಗಳಿಗೆ ಬಿಡುಗಡೆಯಾದ ಅನುದಾನದ ಬಹುಪಾಲು ಅನುದಾನವನ್ನು ಕುಡಿಯುವ ನೀರು ಸರಬರಾಜು ಮತ್ತು ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿಗಳಿಗೆ ವಿನಿಯೋಗಿಸಲಾಗುತ್ತಿದೆ. ಇದೀಗ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಯಾವುದೇ ಹಣವೂ ಉಳಿದಿಲ್ಲ. ಆದರೆ, ಜಲ ಜೀವನ್ ಮಿಷನ್ ಹಾಗೂ ಜಲಧಾರೆ ಯೋಜನೆ ಜಾರಿಯಿಂದ ಗ್ರಾ.ಪಂ.ಗಳಿಗೆ ಇತರೆ ಸಿವಿಲ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಕಷ್ಟು ಅನುದಾನಗಳು ಉಳಿದಿವೆ.
ಧಾರವಾಡ ಜಿಲ್ಲೆಯಲ್ಲಿಯೇ ಮಲಪ್ರಭಾ ಜಲಾಶಯದಿಂದ ಎಲ್ಲ 396 ಗ್ರಾಮಗಳಿಗೆನೀರು ಸರಬರಾಜು ಮಾಡಲು ಮಾರ್ಗಗಳನ್ನು ಅಳವಡಿಸಲು ಮತ್ತು ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಲು ಜಲ ಜಲಧಾರೆ ಯೋಜನೆ ಅಡಿಯಲ್ಲಿ 1,032 ಕೋಟಿ ರೂ ಖರ್ಚು ಮಾಡಲಾಗಿದೆ. ಇದೀಗ ನೀರು ಸರಬರಾಜು ಮಾಡಲು ಮಾರ್ಗಗಳನ್ನು ಅಳವಡಿಸಲು ಮತ್ತು ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಲು ಜಲ ಜೀವನ್ ಮಿಷನ್ ಅಡಿಯಲ್ಲಿ 363 ಕೋಟಿ ರೂ.ಗಳನ್ನು ನೀಡಲಾಗುತ್ತದೆ. 97 ಲಕ್ಷ ಕುಟುಂಬಗಳ ಪೈಕಿ 42 ಲಕ್ಷ ಕುಟುಂಬಗಳು ಈಗಾಗಲೇ ಟ್ಯಾಪ್ಡ್ ನೀರಿನ ಸಂಪರ್ಕವನ್ನು ಪಡೆದಿವೆ, 15 ಹಣಕಾಸು ಯೋಜನೆಯಡಿ (2020-2021 ರಿಂದ 2025-26) ಮೋದಿ ಸರ್ಕಾರ ಒಟ್ಟು 3.57 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಇದರಲ್ಲಿ ಕ್ರಮವಾಗಿ ರೂ 2.36 ಲಕ್ಷ ಕೋಟಿ ಮತ್ತು ರೂ 1.21 ಲಕ್ಷ ಕೋಟಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


