ಸಂವಿಧಾನವನ್ನು ಬದಲಿಸಲು ತಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಸಂಸದ ಅನಂತ ಕುಮಾರ್ ಹೆಗ್ಡೆ ಹೇಗೆ ಹೇಳಲು ಸಾಧ್ಯ?
ಸರ್ಕಾರ ಜಾತಿ ಗಣತಿ ಮಾಡಿಸಬೇಕು ಇದರಿಂದ ಸಮಾಜದಲ್ಲಿ ಯಾರು ಬಡತನದಲ್ಲಿದ್ದಾರೆ ಎಂದು ಗೊತ್ತಾಗಲಿದೆ. ಆ ವೇಳೆ ವಿಶೇಷವಾಗಿ ಆ ಜನರಿಗೆ ಮೀಸಲಾತಿ ನೀಡಲು ಅನುಕೂಲವಾಗಲಿದೆ.

ಮೈಸೂರು: ಸರ್ಕಾರ ಜಾತಿ ಗಣತಿ ಮಾಡಿಸಬೇಕು ಇದರಿಂದ ಸಮಾಜದಲ್ಲಿ ಯಾರು ಬಡತನದಲ್ಲಿದ್ದಾರೆ ಎಂದು ಗೊತ್ತಾಗಲಿದೆ. ಆ ವೇಳೆ ವಿಶೇಷವಾಗಿ ಆ ಜನರಿಗೆ ಮೀಸಲಾತಿ ನೀಡಲು ಅನುಕೂಲವಾಗಲಿದ್ದು, ಇದು ಒಂದು ದಾಖಲೆಯಾಗಿ ಉಳಿಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ಸಂವಿಧಾನ ಬಾಹಿರ "ಅದಕ್ಕಾಗಿ ಸರ್ಕಾರ ಜಾತಿ ಗಣತಿ ಮಾಡಿಸಬೇಕು. ಆಗ ಸಮಾಜದಲ್ಲಿ ಯಾರು ಬಡತನದಲ್ಲಿದ್ದಾರೆ ಅಂತಾ ಗೊತ್ತಾಗಲಿದೆ. ಆ ವೇಳೆ ವಿಶೇಷವಾಗಿ ಆ ಜನರಿಗೆ ಮೀಸಲಾತಿ ನೀಡಲು ಅನುಕೂಲವಾಗಲಿದ್ದು, ಇದು ಒಂದು ದಾಖಲೆಯಾಗಿ ಉಳಿಯುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಜಾತಿಗಣತಿ ಮಾಡಿದರೆ ಜಾತಿ ಜಾತಿಗಳ ನಿಖರ ಸಂಖ್ಯೆ ಗೊತ್ತಾಗುತ್ತದೆ. ಇದರಿಂದ ಸಮಾಜದಲ್ಲಿ ಬಡತನದಲ್ಲಿರುವವರಿಗೆ ವಿಶೇಷ ಯೋಜನೆ ಕೊಡಬಹುದಾಗಿದ್ದು, ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಜಾತಿ ಗಣತಿ ಆಗಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೂ ಕೂಡಾ ಶೇ.10ರಷ್ಟು ಮೀಸಲಾತಿ ಕೊಟ್ಟಿದೆ. ನನ್ನ ಪ್ರಕಾರ ಇದು ಸಂವಿಧಾನ ಬಾಹಿರವಾಗಿದ್ದು, ಸಂವಿಧಾನದಲ್ಲಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿವರಿಗೆ ಮೀಸಲಾಗಿ ಎಂದು ಹೇಳಿದೆ. ಇದರ ಹೊರತಾಗಿ ಎಲ್ಲಿಯೂ ಆರ್ಥಿಕವಾಗಿ ಹಿಂದುಳಿದವರಿಗೆ ಅಂತ ಹೇಳಿಲ್ಲ ಎಂದರು.
ಆರ್ಥಿಕ, ಸಾಮಾಜಿಕ ನ್ಯಾಯ ಹಾಗೂ ಮೀಸಲಾತಿ ವಿರುದ್ಧ ಇರುವ ಬಿಜೆಪಿ ಯಾವತ್ತೂ ಹಿಂದುಳಿದ ವರ್ಗಗಳ ಪರವಾಗಿ ಇಲ್ಲ, ಬಿಜೆಪಿ ಎಲ್ಲಾ ಹಂತದಲ್ಲೂ ಮೀಸಲಾತಿಗೆ ವಿರೋಧ ಮಾಡಿದ್ದಾರೆ. ಒಂದೊಮ್ಮೆ ಬಿಜೆಪಿ ಮೀಸಲಾತಿ ಪರವಾಗಿದ್ದಿದ್ದರೆ, ಸಂವಿಧಾನ ಬದಲಾಗಬೇಕು ಅಂತಿರಲಿಲ್ಲ. ಮೀಸಲಾತಿ ವಿಚಾರ ಬಂದಾಗೆಲ್ಲ ಆರ್‌ಎಸ್‌ಎಸ್‌ನವರು ಅದನ್ನು ನಿಲ್ಲಿಸಬೇಕು ಅಂತ ಮುಂದಾದರು. ಜೊತೆಗೆ ಸಂವಿಧಾನ ಬದಲಾಯಿಸಬೇಕು ಅಂತ ಹುನ್ನಾರ ಮಾಡಿದರು. ಈಗ ಮುಂದುವರಿದ ಜಾತಿಗಳಲ್ಲೂ ಕೂಡಾ ಬಡವರಿಗೆ ಮೀಸಲಾತಿ ಕೊಟ್ಟಿದ್ದಾರೆ. ಆದಾದ ಬಳಿಕ ಆರ್‌ಎಸ್‌ಎಸ್ ಅಜೆಂಡಾ ಬದಲಾಗಿದ್ದು, ಈಗ ಅವರು ಮೀಸಲಾತಿ ಬಗ್ಗೆ ಮಾತನಾಡುತ್ತಿಲ್ಲ ಎಂದು ಟೀಕಿಸಿದರು.
ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿಯವರ ಅಡಿಯಲ್ಲಿ ಬಿಜೆಪಿ 12 ವರ್ಷಗಳಿಗಿಂತ ಹೆಚ್ಚು ಕಾಲ ಅಧಿಕಾರದಲ್ಲಿದೆ ಎಂದು ಹೇಳಿದ ಸಿದ್ದರಾಮಯ್ಯ, ದೇಶಾದ್ಯಂತ ಜಾತಿ ಗಣತಿ ನಡೆಸಲು ಪಕ್ಷವು ಯಾವುದೇ ಆಸಕ್ತಿಯನ್ನು ತೋರಿಸಿಲ್ಲ ಎಂದು ಹೇಳಿದರು. ಕೇಂದ್ರ ಸರ್ಕಾರವು ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಮತ್ತು ಜಾತಿ ಗಣತಿಯನ್ನು ಕೈಗೊಳ್ಳಬೇಕು ಮತ್ತು ಮಸೂದೆಯನ್ನು ಜಾರಿಗೆ ತರಬೇಕು ಮತ್ತು ಮೀಸಲಾತಿಯ ಮೇಲಿನ ಮಿತಿಯನ್ನು ತೆಗೆದುಹಾಕಬೇಕು ಮತ್ತು ಅದನ್ನು ಶೇಕಡಾ 60-70ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಜಾತಿಗಣತಿ ವರದಿ ತೆಗೆದುಕೊಳ್ಳಲಿದ್ದು, ಸರ್ಕಾರ ಬಂದ ವೇಳೆ ಮಾಡುವ ಮೊದಲ ಕೆಲಸವೇ ರಿಪೋರ್ಟ್ ಪಡೆಯುವುದು. ಈ ವರದಿ ತೆಗೆದುಕೊಂಡು ಅದನ್ನು ಚರ್ಚೆಗೆ ಇಡುತ್ತೇನೆ, ರಿಪೋರ್ಟ್ ಪಡೆಯದಿದ್ದರೆ ಅದರಲ್ಲಿ ಎನಿದೆ ಅಂತ ತಿಳಿಯೋದಾದರೂ ಹೇಗೆ? ಎಂದು ಪ್ರಶ್ನಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನನ್ನ ಸರ್ಕಾರ ಇದ್ದಾಗ ಜಾತಿಗಣತಿ ಮಾಡಿಸಿದ್ದೆ, ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಅದು ರೆಡಿಯಾಯ್ತು. ಆದರೆ ಅಂದು ಸಚಿವರಾಗಿದ್ದ ಪುಟ್ಟರಂಗಶೆಟ್ಟಿಗೆ ರಿಪೋರ್ಟ್ ಪಡೆಯದಂತೆ ಕುಮಾರಸ್ವಾಮಿ ಸೂಚಿಸಿದರು. ಆದರೆ ನಾನು ಅದನ್ನು ರಿಪೋರ್ಟ್ ತೆಗೆದುಕೊಂಡು ಚರ್ಚೆ ಮಾಡಿಸುತ್ತೇನೆ ಎಂದು ಹೇಳಿದರು.
ಬಿಜೆಪಿ ಮತ್ತು ಆರ್‌ಎಸ್‌ಎಸ್ ಮೀಸಲಾತಿಗೆ ವಿರುದ್ಧವಾಗಿವೆ ಮತ್ತು ಸಂವಿಧಾನವನ್ನು ಬದಲಿಸುವ ಗುಪ್ತ ಕಾರ್ಯಸೂಚಿಯನ್ನು ಹೊಂದಿವೆ ಎಂದ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳಿಗೆ ಮತ್ತು ಪಂಚಾಯತ್‌ಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಮಾಜಿ ರಾಜ್ಯಪಾಲ ರಾಮ ಜೋಯಿಸ್ ಸುಪ್ರೀಂ ಕೋರ್ಟ್‌ಗೆ ಹೋಗಿದ್ದಾರೆ. ಸಂವಿಧಾನವನ್ನು ಬದಲಿಸಲು ತಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಬಿಜೆಪಿ ಸಂಸದ ಅನಂತ ಕುಮಾರ್ ಹೆಗ್ಡೆ ಹೇಗೆ ಹೇಳಬಹುದು? ಪಕ್ಷ ಮತ್ತು ಅವರ ಉನ್ನತ ನಾಯಕರುಗಳ ಒಪ್ಪಿಗೆಯಿಲ್ಲದೆ ಅದು ಸಾಧ್ಯವೇ?" ಅವರು ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


