ಸಂಪುಟ ರಚನೆ ಮುಗಿದ ನಂತರ ಸಿಎಂ ಬೊಮ್ಮಾಯಿಗೆ ಮತ್ತಷ್ಟು ಸಮಸ್ಯೆ, ಅತೃಪ್ತರ, ಭಿನ್ನರ ಸಂಖ್ಯೆಯಲ್ಲಿ ಹೆಚ್ಚಳ!
ರಾಜ್ಯ ಸಚಿವ ಸಂಪುಟ ರಚನೆಯಾಗಿ ಒಂದು ವಾರವಾಗಿದೆ. ಆದರೆ ಅತೃಪ್ತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಸಚಿವ ಸಂಪುಟದಲ್ಲಿ ಸ್ಥಾನ ಸಿಗದವರು ದೆಹಲಿಗೆ ಎಡತಾಕುತ್ತಿದ್ದಾರೆ. ಇನ್ನು ಸಚಿವ ಸ್ಥಾನ ಸಿಕ್ಕಿದವರಲ್ಲಿ ಕೆಲವರಿಗೆ ಖಾತೆ ಬಗ್ಗೆ ಅತೃಪ್ತಿಯುಂಟಾಗಿದ್ದು ವಿವಿಧ ಮಟ್ಟದಲ್ಲಿ ಲಾಬಿ ಮಾಡುತ್ತಿದ್ದಾರೆ.

ಬೆಂಗಳೂರು; ರಾಜ್ಯ ಸಚಿವ ಸಂಪುಟ ರಚನೆಯಾಗಿ ಒಂದು ವಾರವಾಗಿದೆ. ಆದರೆ ಅತೃಪ್ತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಸಚಿವ ಸಂಪುಟದಲ್ಲಿ ಸ್ಥಾನ ಸಿಗದವರು ದೆಹಲಿಗೆ ಎಡತಾಕುತ್ತಿದ್ದಾರೆ. ಇನ್ನು ಸಚಿವ ಸ್ಥಾನ ಸಿಕ್ಕಿದವರಲ್ಲಿ ಕೆಲವರಿಗೆ ಖಾತೆ ಬಗ್ಗೆ ಅತೃಪ್ತಿಯುಂಟಾಗಿದ್ದು ವಿವಿಧ ಮಟ್ಟದಲ್ಲಿ ಲಾಬಿ ಮಾಡುತ್ತಿದ್ದಾರೆ.
ಕೆಲವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ತಮ್ಮ ಅಸಮಾಧಾನ, ಆಕ್ಷೇಪಗಳನ್ನು ಹೊರಹಾಕಿದರೆ ಇನ್ನು ಕೆಲವರು ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಮನೆ ಕದ ತಟ್ಟುತ್ತಿದ್ದಾರೆ. ಇನ್ನು ಕೆಲವರು ರಾಷ್ಟ್ರೀಯ ಮಟ್ಟದಲ್ಲಿ ನಾಯಕರನ್ನು, ಸಂಘ ಪರಿವಾರದವರನ್ನು ಮತ್ತು ಬಿಜೆಪಿ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಬಹಿರಂಗವಾಗಿಯೇ ಶಾಸಕರು, ಸಚಿವರ ಅಸಮಾಧಾನ ಕಂಡು ಸಿಎಂ ಬೊಮ್ಮಾಯಿಯವರು ತಮ್ಮ ರಾಜಕೀಯ ಗುರು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರ ಮೊರೆ ಹೋಗಿದ್ದು ಪಕ್ಷದ ನಾಯಕರಲ್ಲಿನ ಅಶಿಸ್ತನ್ನು ಶಮನಗೊಳಿಸಲು ಕೇಂದ್ರ ನಾಯಕರ ಮೊರೆ ಹೋಗಿದ್ದಾರೆ.
ಶುಂಠಿಕೊಪ್ಪ, ಸೋಮವಾರಪೇಟೆ, ಕುಶಾಲನಗರ ಮತ್ತು ಕೊಡಗಿನ ಇತರ ಸ್ಥಳಗಳಿಂದ ಸುಮಾರು 150 ವಾಹನಗಳಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಬೆಂಗಳೂರಿಗೆ ನಿನ್ನೆ ಬಂದು ಶಾಸಕ ಅಪ್ಪಚ್ಚು ರಂಜನ್ ಅವರನ್ನು ಸಂಪುಟದಿಂದ ಹೊರಗಿಟ್ಟ ಬಗ್ಗೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು. ಬೆಂಬಲಿಗರು ಸಿಎಂ ಅವರನ್ನು ಭೇಟಿ ಮಾಡಲು ಬಯಸಿದ್ದರು, ಆದರೆ ಅವರನ್ನು ಪೊಲೀಸರು ತಡೆದರು. ಈ ವೇಳೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಕೊನೆಗೆ ಅವರಲ್ಲಿ ಕೆಲವರಿಗೆ ಸಿಎಂ ಅವರನ್ನು ಭೇಟಿಯಾಗಲು ಅವಕಾಶ ನೀಡಿದ ನಂತರ ಸಮಾಧಾನಗೊಂಡರು.
ಮುಖ್ಯಮಂತ್ರಿಗಳ ನಿವಾಸದಲ್ಲಿ ನಿನ್ನೆ ನಡೆದ ಸಭೆಯಲ್ಲಿ, ಮುಂದಿನ ಸಂಪುಟ ವಿಸ್ತರಣೆಯ ಸಮಯದಲ್ಲಿ ಮತ್ತು ಪಕ್ಷದ ಉನ್ನತ ಅಧಿಕಾರಿಗಳ ಅನುಮೋದನೆಯ ನಂತರ ತಮ್ಮ ಬೇಡಿಕೆಯನ್ನು ಪೂರೈಸಲಾಗುವುದು ಎಂದು ಬೊಮ್ಮಾಯಿಯವರು ನಿಯೋಗಕ್ಕೆ ಭರವಸೆ ನೀಡಿದರು. ನಂತರ ನಿಯೋಗವು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ರಂಜನ್ ಅವರನ್ನು ಸಂಪುಟಕ್ಕೆ ಸೇರಿಸಬೇಕೆಂದು ಒತ್ತಾಯಿಸಿದರು.
ಈ ಮಧ್ಯೆ, ಶಾಸಕರಾದ ರಮೇಶ್ ಜಾರಕಿಹೊಳಿ, ಸಿ ಪಿ ಯೋಗೀಶ್ವರ, ಅರವಿಂದ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್, ಶ್ರೀಮಂತ ಪಾಟೀಲ್ ಮತ್ತು ಮಹೇಶ್ ಕುಮಠಳ್ಳಿ ಅವರು ದೆಹಲಿಗೆ ಹೋಗಿ ಅನೇಕ ಸಭೆಗಳನ್ನು ನಡೆಸುತ್ತಿದ್ದಾರೆ. ಪ್ರೀತಂ ಗೌಡ, ಪೂರ್ಣಿಮಾ ಶ್ರೀನಿವಾಸ್, ರಾಜು ಗೌಡ, ಸಿದ್ದು ಸವದಿ, ದತ್ತಾತ್ರೇಯ ಪಾಟೀಲ್ ರೇವೂರ್ ಮುಂತಾದವರು ರಾಜ್ಯ ಮಟ್ಟದಲ್ಲಿ ಯಡಿಯೂರಪ್ಪ ಮತ್ತು ಇತರ ಪಕ್ಷದ ನಾಯಕರೊಂದಿಗೆ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


