ನನ್ನ ಹೇಳಿಕೆ ರಾಜಕೀಯ ಅವಲೋಕನವೇ ಹೊರತು ಸೈದ್ಧಾಂತಿಕ ಅನುಮೋದನೆಯಲ್ಲ: ಟ್ವೀಟ್ ಬಗ್ಗೆ ಅನಂತ್ ಪುತ್ರಿ ಸ್ಪಷ್ಟನೆ
ಜೆಡಿಎಸ್ ಕುರಿತು ಇತ್ತೀಚೆಗೆ ವ್ಯಕ್ತಪಡಿಸಿದ್ದ ಅಭಿಪ್ರಾಯ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಆ ಕುರಿತು ಕೇಂದ್ರದ ಮಾಜಿ ಸಚಿವ, ದಿ. ಅನಂತಕುಮಾರ್ ಪುತ್ರಿ ವಿಜೇತಾ ಅನಂತಕುಮಾರ್ ಸ್ಪಷ್ಟನೆ ನೀಡಿ ಟ್ವೀಟ್ ಮಾಡಿದ್ದಾರೆ

ಬೆಂಗಳೂರು: ಜೆಡಿಎಸ್ ಕುರಿತು ಇತ್ತೀಚೆಗೆ ವ್ಯಕ್ತಪಡಿಸಿದ್ದ ಅಭಿಪ್ರಾಯ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಆ ಕುರಿತು ಕೇಂದ್ರದ ಮಾಜಿ ಸಚಿವ, ದಿ. ಅನಂತಕುಮಾರ್ ಪುತ್ರಿ ವಿಜೇತಾ ಅನಂತಕುಮಾರ್ ಸ್ಪಷ್ಟನೆ ನೀಡಿ ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ನಾನು ಮಾಡಿದ ಟ್ವೀಟೊಂದು ಊಹಾಪೋಹಗಳಿಗೆ ಕಾರಣವಾಗಿದೆ. ಈಗ ನಾನು ಪ್ರಕಟಿಸಿರುವ ಸಂದೇಶವು ಗೊಂದಲಗಳಿಗೆ ತೆರೆ ಎಳೆಯಲಿದ್ದು ಚರ್ಚೆಯನ್ನು ಇಲ್ಲಿಗೆ ಮುಕ್ತಾಯಗೊಳಿಸಲಿದೆ. ನಿಮ್ಮೆಲ್ಲರೊಂದಿಗೆ ಇಲ್ಲಿ ಸಂವಹನ ನಡೆಸಲು ಇಷ್ಟಪಡುತ್ತೇನೆ ಮತ್ತು ಅದನ್ನು ಮುಂದುವರಿಸುತ್ತೇನೆ’ ಎಂದು ವಿಜೇತಾ ಟ್ವೀಟ್ ಮಾಡಿದ್ದಾರೆ.
‘ರಾಜಕೀಯದಲ್ಲಿ ಸಿದ್ಧಾಂತ ಮತ್ತು ವಿಶ್ಲೇಷಣೆ ಅಥವಾ ಅವಲೋಕನಗಳು ಇರುತ್ತವೆ. ಸಾಮಾನ್ಯವಾಗಿ ಇವುಗಳನ್ನು ಒಂದೇ ಎಂದು ಭಾವಿಸಿ ಗೊಂದಲಕ್ಕೆ ಒಳಗಾಗುತ್ತೇವೆ. ರಾಜಕೀಯದ ಕಲಿಕೆ ಬಗ್ಗೆ ಆಸಕ್ತಿಯುಳ್ಳವಳಾಗಿ ಇದು (ಜೆಡಿಎಸ್ ಕುರಿತ ಹೇಳಿಕೆ) ನನ್ನ ರಾಜಕೀಯ ಅವಲೋಕನವೇ ಹೊರತು ಸೈದ್ಧಾಂತಿಕ ಅನುಮೋದನೆಯಲ್ಲ. ನನ್ನ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ನನ್ನ ಕುಟುಂಬದ ಸದಸ್ಯರ ಕಲ್ಪನೆಯೊಟ್ಟಿಗೆ ತಳಕು ಹಾಕುವುದು ಅನ್ಯಾಯವಾಗಿದೆ.
ಸುಮಾರು 35 ವರ್ಷಗಳಿಂದ ನನ್ನ ತಂದೆಯವರು ಲಕ್ಷಾಂತರ ಕಾರ್ಯಕರ್ತರ ಸಹಕಾರದೊಂದಿಗೆ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದಾರೆ. ತಾಯಿ ಹಸಿವು, ಪೌಷ್ಟಿಕತೆ, ಪರಿಸರ ಕ್ಷೇತ್ರಗಳಲ್ಲಿ ಮತ್ತು ಪಕ್ಷಕ್ಕಾಗಿ ಅವಿರತವಾಗಿ ದುಡಿಯುತ್ತಿದ್ದಾರೆ. ನೀವು ರಾಜಕೀಯ ಪ್ರವೇಶಿಸಲಿದ್ದೀರಾ ಎಂದು ಅನೇಕರು ನನ್ನನ್ನು ಪ್ರಶ್ನಿಸಿದ್ದಾರೆ. ಒಬ್ಬ ವ್ಯಕ್ತಿಯ ರಾಜಕೀಯ ಪಯಣವು ಈ ರೀತಿ ಆರಂಭವಾಗಬಾರದು ಎಂದು ನಾನು ಭಾವಿಸುತ್ತೇನೆ. ಅದು ಪಕ್ಷದ ಕಾರ್ಯಕರ್ತನಾಗಿ ಸೇವೆ ಸಲ್ಲಿಸುವಲ್ಲಿಂದ ಶುರುವಾಗಬೇಕು. ಕಾರ್ಯಕರ್ತರ ಬೆಂಬಲ
ಮತ್ತು ಅವರಿಂದ ದೊರೆಯುವ ಪಾಠ ನಿಮ್ಮನ್ನು ನಾಯಕನನ್ನಾಗಿ ಮಾಡುತ್ತದೆ.
ಯಾರೂ ಶತ್ರುಗಳಲ್ಲ ಹಾಗೂ ಪರಸ್ಪರ ಗೌರವಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಭೂತ ವಿಚಾರ ಎಂದು ಅಪ್ಪ ನನಗೆ ಕಲಿಸಿದ್ದರು. ನನ್ನ ಗೌರವದ ಅಭಿವ್ಯಕ್ತಿಯನ್ನು ಯಾವುದೋ ಪಕ್ಷ ಸೇರುತ್ತೇನೆ ಎಂದು ತಪ್ಪಾಗಿ ಭಾವಿಸಬಾರದು. ನಾನು ಕ್ರಮಿಸಬೇಕಾದ ಹಾದಿ ಬಲು ದೂರವಿದೆ. ನನ್ನ ತಾಯ್ನಾಡಿಗೆ ಸೇವೆ ಸಲ್ಲಿಸುವುದಕ್ಕಾಗಿ ಕಲಿಕೆಯನ್ನು ಹೆಚ್ಚಿಸಿಕೊಳ್ಳಲು ಬಯಸುತ್ತೇನೆ. ದೇಶ ಮೊದಲು’ ಎಂದು ಸಂದೇಶದಲ್ಲಿ ವಿಜೇತಾ ಉಲ್ಲೇಖಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


