ಕಾಂಗ್ರೆಸ್ ಧರಣಿ ನಡುವೆ ಸಂವಿಧಾನ ಕುರಿತ ವಿಶೇಷ ಚರ್ಚೆಗೆ ಸ್ಪೀಕರ್ ಮುನ್ನುಡಿ
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿರುವ ಆಕ್ಷೇಪಾರ್ಹ ಟೀಕೆ ವಿರೋಧಿಸಿ ಕಾಂಗ್ರೆಸ್ ಸದಸ್ಯರು ಧರಣಿ ನಡಸುತ್ತಿರುವುದರ ನಡುವೆಯೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆಯಲ್ಲಿಂದು ಭಾರತದ ಸಂವಿಧಾನ ಕುರಿತ ವಿಶೇಷ ಚರ್ಚೆ ಮೇಲಿನ ಪ್ರಸ್ತಾವಿಕ ಭಾಷಣ ಮಾಡಿ ಮುನ್ನುಡಿ ಬರೆದರು.

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿರುವ ಆಕ್ಷೇಪಾರ್ಹ ಟೀಕೆ ವಿರೋಧಿಸಿ ಕಾಂಗ್ರೆಸ್ ಸದಸ್ಯರು ಧರಣಿ ನಡಸುತ್ತಿರುವುದರ ನಡುವೆಯೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆಯಲ್ಲಿಂದು ಭಾರತದ ಸಂವಿಧಾನ ಕುರಿತ ವಿಶೇಷ ಚರ್ಚೆ ಮೇಲಿನ ಪ್ರಸ್ತಾವಿಕ ಭಾಷಣ ಮಾಡಿ ಮುನ್ನುಡಿ ಬರೆದರು.
ಮಧ್ಯಾಹ್ನದ ಬಳಿಕ ವಿಧಾನಸಭೆ ಸೇರಿದಾಗ ಕಾಂಗ್ರೆಸ್ ಸದಸ್ಯರಿಂದ ಧರಣಿ ಮುಂದುವರೆಯಿತು. ಈ ವೇಳೆ ಸ್ಪೀಕರ್, ನೀವು ಹೀಗೆ ಧರಣಿ ಮಾಡುವುದು ನನ್ನ ಮನಸ್ಸಿಗೆ ಸಹನೀಯವಲ್ಲ. ನೀವು ಸಂವಿಧಾನದ ಚರ್ಚೆಯಲ್ಲಿ ಭಾಗವಹಿಸದೇ ಇರುವ ನಿರ್ಣಯ ಮಾಡಿದರೆ ಮನಸ್ಸಿಲ್ಲದ ಮನಸ್ಸಿನಿಂದ ನಾನು ಪ್ರಸ್ತಾವನೆ ಓದಬೇಕಾಗುತ್ತದೆ. ಎಲ್ಲರೂ ಎದ್ದುನಿಂತು ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಓದಬೇಕೆಂದು ಮನವಿ ಮಾಡಿದರು.
ಆದರೆ ಕಾಂಗ್ರೆಸ್ ಸದಸ್ಯರು ಪಟ್ಟು ಸಡಿಲಿಸದ ಕಾರಣ ಸ್ಪೀಕರ್ ಅವರು ಪೀಠದಿಂದ ಎದ್ದು ನಿಂತು ಸಂವಿಧಾನ ಕುರಿತ ವಿಶೇಷ ಚರ್ಚೆಯ ಪ್ರಸ್ತಾವನೆ ಓದಿದರು. ಇತ್ತ ಕಾಂಗ್ರೆಸ್ ಸದಸ್ಯರು ತಮ್ಮ ಧರಣಿ ಮುಂದುವರಿಸಿದರು. ಉಳಿಸಿ ಉಳಿಸಿ ಸಂವಿಧಾನ ಉಳಿಸಿ, ವಂದೇ ಮಾತರಂ, ಭಾರತ್ ಮಾತಾಕೀ ಜೈ ಮುಂತಾದ ಘೋಷಣೆಗಳನ್ನು ಕೂಗಿದರು. ಆದರ ಸ್ಪೀಕರ್ ಅವರು ಸಂವಿಧಾನದ ಪ್ರಸ್ತಾವನೆ ಓದು ನಿಲ್ಲಿಸಲಿಲ್ಲ. ಸ್ಪೀಕರ್ ಭಾಷಣ ಮುಗಿಯುವ ತನಕ ಕಾಂಗ್ರೆಸ್ ಸದಸ್ಯರು ಘೋಷಣೆಗಳನ್ನು ಕೂಗಿ, ತಮ್ಮ ಧರಣಿ ಮುಂದುವರಿಸಿದರು.
ಕಾಂಗ್ರೆಸ್ ನಡವಳಿಕೆಗೆ ಸ್ಪೀಕರ್ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಪ್ರಾಸ್ತಾವಿಕ ಭಾಷಣದುದ್ದಕ್ಕೂ ಕಾಂಗ್ರೆಸ್ ಸದಸ್ಯರು ಧರಣಿ ನಡೆಸಿರುವುದು ಸರಿಯಲ್ಲ. ಪ್ರಜಾಪ್ರಭುತ್ವಕ್ಕೆ ಇದು ಶೋಭೆ ತರುವುದಿಲ್ಲ. ನಿಮ್ಮ ವರ್ತನೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದು, ಇದನ್ನು ನಾನು ಒಪ್ಪುವುದಿಲ್ಲ. ಸಂವಿಧಾನದ ಶಿಲ್ಪಿಗೆ ನೀವು ತೋರಿದ ಅಗೌರವ ಇದಾಗಿದ್ದು, ಕರ್ನಾಟಕಕ್ಕೆ ಇದು ಹೆಮ್ಮೆ ತರುವುದಿಲ್ಲ. ಇದು ಸಂವಿಧಾನ ವಿರೋಧಿ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನಕ್ಕೆ ಗೌರವ ತೋರಿ. ಚರ್ಚೆಯಲ್ಲಿ ಭಾಗವಹಿಸಿ ಎಂದು ಮನವಿ ಮಾಡುತ್ತೇನೆ. ಇದು ಒಳ್ಳೆಯ ಪದ್ಧತಿಯಲ್ಲ. ನೀವು ಅರವತ್ತು ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ್ದೀರಿ. ರಾಜ್ಯದ ಜನ ಏನು ನಡೆಯುತ್ತಿದೆ ಎಂಬುದನ್ನು ನೋಡುತ್ತಿದ್ದಾರೆ ಎಂದು ತಮ್ಮ ಅಸಮಾಧಾನ ಹೊರಹಾಕಿದ ಸ್ಪೀಕರ್, ಕಲಾಪವನ್ನು ದಿನದಮಟ್ಟಿಗೆ ಮುಂದೂಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


