ಸೋಮವಾರ ಎಂಎಲ್ಸಿಗಳ ಪ್ರಮಾಣ ವಚನ: ಸಚಿವರಾಗಲು ಇನ್ನೂ ಕಾಯಬೇಕು!
ವಿಧಾನಪರಿಷತ್ ಗೆ ನಾಮಾಂಕಿತಗೊಂಡಿರುವ ಐವರು ನಾಡಿದ್ದು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರಲ್ಲಿ ಇಬ್ಬರು ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣಕರ್ತರು ಎಂಬುದನ್ನು ಮರೆಯುವಂತಿಲ್ಲ.

ಬೆಂಗಳೂರು: ವಿಧಾನಪರಿಷತ್ ಗೆ ನಾಮಾಂಕಿತಗೊಂಡಿರುವ ಐವರು ನಾಡಿದ್ದು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರಲ್ಲಿ ಇಬ್ಬರು ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣಕರ್ತರು ಎಂಬುದನ್ನು ಮರೆಯುವಂತಿಲ್ಲ.
ಮಾಜಿ ಸಚಿವ ಮತ್ತು ಒಕ್ಕಲಿಗ ಸಮುದಾಯದ ಮುಖಂಡ ಸಿ ಪಿ ಯೋಗೇಶ್ವರ್ 2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮುರಿದು ಬೀಳಲು ಮೊದಲು ಹೆಜ್ಜೆ ಇಟ್ಟವರು. ಅತೃಪ್ತ ಶಾಸಕರನ್ನು ಸೆಳೆದು ಪಕ್ಷದಿಂದ ಹೊರಬರಲು ಪ್ರಮುಖ ಪ್ರೇರಣಕರ್ತರು. ಮುಖ್ಯಮಂತ್ರಿಯಾಗುವ ಹಪಾಹಪಿಯಲ್ಲಿದ್ದ ಬಿ ಎಸ್ ಯಡಿಯೂರಪ್ಪನವರ ಕಿವಿಯಲ್ಲಿ ಸಿಎಂ ಪಟ್ಟದ ಆಸೆ ಹುಟ್ಟಿಸಿ ಆಪರೇಷನ್ ಕಮಲದ ಯೋಚನೆಯನ್ನು ಹುಟ್ಟು ಹಾಕಿದವರು ಇದೇ ಸಿ ಪಿ ಯೋಗೇಶ್ವರ್.
ಇನ್ನು ಕುರುಬ ಸಮುದಾಯದ ಪ್ರಮುಖ ಮುಖಂಡ ಅಡಗೂರು ವಿಶ್ವನಾಥ್ ಅಂದು ಜೆಡಿಎಸ್ ನ ರಾಜ್ಯಾಧ್ಯಕ್ಷರಾಗಿದ್ದರು. ಜೆಡಿಎಸ್ ನಲ್ಲಿ ನಾಯಕರ ಕಾರ್ಯವೈಖರಿ, ತಮಗೆ ಸೂಕ್ತ ಸ್ಥಾನಮಾನದ ಕೊರತೆ ಕಂಡಿದ್ದ ಎಚ್ ವಿಶ್ವನಾಥ್ 17 ಮಂದಿ ಶಾಸಕರು ಬಂಡಾಯವೇಳಲು ಪ್ರಮುಖ ಕಾರಣರಾದರು. ಯೋಗೇಶ್ವರ್ ಮತ್ತು ವಿಶ್ವನಾಥ್ ಸಚಿವ ಹುದ್ದೆ ಮೇಲೆ ಕಣ್ಣಿಟ್ಟಿದ್ದರು ಎಂದು ಬಿಡಿಸಿ ಹೇಳಬೇಕಾಗಿಲ್ಲ.
ಆದರೆ ನಾಡಿದ್ದು ಸೋಮವಾರ ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ತಕ್ಷಣವೇ ಸಚಿವ ಹುದ್ದೆ ಸಿಗುವುದಿಲ್ಲ. ಅದಕ್ಕೆ ಇನ್ನೂ ಕಾಯಬೇಕು. ಸಚಿವ ಸಂಪುಟ ವಿಸ್ತರಣೆಗೆ ಅಕ್ಟೋಬರ್ ವರೆಗೆ ಕಾಯಬೇಕಾಗಬಹುದು. ಇದಕ್ಕೆ ಸೆಪ್ಟೆಂಬರ್ ನಲ್ಲಿ ತಯಾರಿ ಆರಂಭವಾಗಬಹುದು.
ಆದರೆ ಮುಂದಿನ ಬಾರಿ ಸಚಿವ ಸಂಪುಟ ವಿಸ್ತರಣೆ ಅಷ್ಟು ಸುಲಭವಾಗಿ ನಡೆಯಲಿಕ್ಕಿಲ್ಲ ಎಂದು ಹೇಳಲಾಗುತ್ತಿದೆ. ಏಕೆಂದರೆ ಇನ್ನು ಮೂರು ಸಚಿವ ಹುದ್ದೆ ಮಾತ್ರ ಬಾಕಿಯಿದೆ. ಸಂಪುಟ ಪುನರ್ರಚನೆ ಕೂಡ ಆಗಬಹುದು, ಆ ಸಂದರ್ಭದಲ್ಲಿ ಕೆಲವರನ್ನು ಕೈಬಿಡಬಹುದು. ಸಂಪುಟಕ್ಕೆ ಸೇರುವ ಇರಾದೆಯಲ್ಲಿ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಎಸ್ ಅಂಗಾರ ಈಗಾಗಲೇ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


