ಬೆಂಕಿಯಲ್ಲಿ ಗಳ ಇರಿಯುತ್ತಿರುವ ಬಿಜೆಪಿ; ಕೊರೋನಾ ಖರೀದಿ ಅಕ್ರಮವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ: ಸಿದ್ದರಾಮಯ್ಯ
ಕೊರೋನಾ ಸಂಕಷ್ಟದಲ್ಲಿ ಬೆಂಕಿ ಬಿದ್ದಿರುವ ಮನೆಗಳಲ್ಲಿ ಗಳ ಇರಿಯುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಈ ಬಗ್ಗೆ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರು: ಕೊರೋನಾ ಸಂಕಷ್ಟದಲ್ಲಿ ಬೆಂಕಿ ಬಿದ್ದಿರುವ ಮನೆಗಳಲ್ಲಿ ಗಳ ಇರಿಯುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಈ ಬಗ್ಗೆ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಕೊರೋನಾದಿಂದ ಜನತೆ ತೀವ್ರ ಆತಂಕ ಮತ್ತು ಸಂಕಷ್ಟದಲ್ಲಿದ್ದಾರೆ. ಜನತೆ ಬೀಬಿ ಬೀದಿಯಲ್ಲಿ ಹೆಣ ಹೊತ್ತು ತಿರುಗಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಕ್ರಮ ನಡೆಸಲು ಇವರಿಗೆ ನಾಚಿಕೆಯಾಗುವುದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಸಂದರ್ಭದಲ್ಲಿ ಆಗಿರುವ ಒಂದೊಂದೇ ಅಕ್ರಮಗಳು ಬೆಳಕಿಗೆ ಬರುತ್ತಿವೆ. ಆರೋಗ್ಯ ಇಲಾಖೆಯಿಂದ ಪರಿಕರಗಳು ಸರಬರಾಜಾಗದೆ ಹಣ ಪಾವತಿಸಿರುವ ಮಾಹಿತಿ ತಮ್ಮ ಬಳಿ ಇದೆ. ಈ ಕುರಿತು ಹೆಚ್ಚಿನ ದಾಖಲೆಗಳನ್ನು ಸಂಗ್ರಹಿಸುತ್ತೀದ್ದೇವೆ. ಒಟ್ಟು ಕೊರೋನಾಗಾಗಿ 4000 ಕೋಟಿ ರೂ ಪಾವತಿಸಿದ್ದು, ಈ ಪೈಕಿ 2000 ಕೋಟಿ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದರು.
ಕಾಂಗ್ರೆಸ್ ಜನರ ಪರವಾಗಿ ಹೋರಾಟ ಮಾಡಲಿದೆ. ಜನರ ತೆರಿಗೆ ಹಣದ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದೇವೆ. ಕೊರೊನಾ ಚಿಕಿತ್ಸಾ ಉಪಕರಣ ಖರೀದಿಯಲ್ಲಿ ಯಾವುದೇ ಹಗರಣ ನಡೆದಿಲ್ಲ. ಕೇವಲ 320 ಕೋಟಿ ಮಾತ್ರ ಖರ್ಚು ಮಾಡಲಾಗಿದೆ ಎಂಬ ಆರೋಗ್ಯ ಸಚಿವ ಶ್ರೀರಾಮುಲು ಮತ್ತು ಸರ್ಕಾರದ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಹಲವು ಅಂಕಿ ಅಂಶಗಳನ್ನು ಬಹಿರಂಗಪಡಿಸಿದರು.
ಕೇವಲ 320 ಕೋಟಿ ರೂ.ಗಿಂತ ಒಂದು ಪೈಸೆ ಹೆಚ್ಚು ಖರ್ಚು ಮಾಡಿಲ್ಲ ಎಂದು ಸಚಿವರು ಹೇಳಿದ್ದಾರೆ. ಆದರೆ ಆರೋಗ್ಯ ಇಲಾಖೆ 750 ಕೋಟಿ ರೂ, ಬಿಬಿಎಂಪಿ 200 ಕೋಟಿ ರೂ., ಕಾರ್ಮಿಕ ಇಲಾಖೆ 1 ಸಾವಿರ ಕೋಟಿ ರೂ, ಶಿಕ್ಷಣ ಇಲಾಖೆ 815 ಕೋಟಿ ರೂ, ಜಿಲ್ಲಾಡಳಿತದಿಂದ 740 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಸರ್ಕಾರ ಅಲ್ಪಸಂಖ್ಯಾತ, ಒಬಿಸಿ ಆಯೋಗದ ಮುಂದೆ ಹೇಳಿಕೆ ನೀಡಿದೆ.
ಎರಡು ಸಾವಿರ ಕೋಟಿ ರೂ ಖರ್ಚು ಮಾಡಿದ್ದೇವೆ ಎಂದಿದ್ದಾರೆ. ಸಮಾಜಕಲ್ಯಾಣ, ಮಹಿಳಾ ಕಲ್ಯಾಣ, ಗೃಹ ಇಲಾಖೆಯಿಂದಲೂ 500 ಕೋಟಿ ರೂ.ಖರ್ಚಾಗಿದೆ. ಹಾಸಿಗೆ, ದಿಂಬು ಖರೀದಿಗೆ150 ಕೋಟಿ ರೂ. ಸೇರಿ ಒಟ್ಟು4162 ಕೋಟಿ ಹಣ ವೆಚ್ಚವಾಗಿದೆ ಎಂದರು. ತಮ್ಮಲ್ಲಿ ದಾಖಲೆ ಇದ್ದರೆ ಪ್ರದರ್ಶಿಸಲಿ ಎಂದು ಸವಾಲು ಹಾಕಿದ್ದ ಆರೋಗ್ಯ ಸಚಿವ ಶ್ರೀರಾಮುಲು ಪ್ರಶ್ನೆಗೆ ಅಂಕಿ ಅಂಶಗಳ ಸಹಿತ ತಿರುಗೇಟು ನೀಡಿದರು.
ಸಚಿವರು, ಅಧಿಕಾರಿಗಳು 2 ಸಾವಿರ ಕೋಟಿ ಲೂಟಿ ಮಾಡಿದ್ದಾರೆ. ಸಚಿವರಾದ ರಾಮುಲು, ಅಶ್ವಥ್ ನಾರಾಯಣ ಯಾಕೆ ಸುಳ್ಳು ಹೇಳಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ಎಲ್ಲಿ ಹೋಯಿತು ನಿಮ್ಮ ಸರ್ಕಾರದ ಪ್ರಾಮಾಣಿಕತೆ?. ಖಜಾನೆಯ ಒಂದೊಂದು ಪೈಸೆಗೂ ಸರ್ಕಾರ ಲೆಕ್ಕ ಇಡಬೇಕು? ಎಂದರು.
ವೈದ್ಯಕೀಯ ಪರಿಕರಗಳ ಖರೀದಿ ಅವ್ಯವಹಾರದ ಬಗ್ಗೆ ಆರೋಪಿಸಿ, ಉತ್ತರ ಕೇಳಿದ್ದೇನಾದರೂ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಪ್ರಶ್ನಿಸಿದ 17 ದಿನಗಳ ನಂತರ ಉಪಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ಸುದ್ದಿಗೋಷ್ಠಿ ನಡೆಸಿ 324 ಕೋಟಿ ರೂ.ವೆಚ್ಚದ ಖರೀದಿ ನಡೆದಿದೆ ಎಂದಿದ್ದರು. ಆದರೆ ಸಿದ್ದರಾಮಯ್ಯ ಮಾಡಿರುವ ಎರಡು ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆದಿರುವುದು ಸುಳ್ಳು ಎಂದಿದ್ದಾರೆ. ಪುರಾವೆ ನೀಡಿದರೆ ರಾಜೀನಾಮೆ ಕೊಡುವುದಾಗಿ ಶ್ರೀರಾಮುಲು ಹೇಳಿದ್ದರು. ಮುಖ್ಯಮಂತ್ರಿ ಕೂಡ ಯಾವುದೇ ಅವ್ಯವಹಾರ ಆಗಿಲ್ಲ ಎಂದಿದ್ದರು. 24 ಗಂಟೆಯೊಳಗೆ ಮಾಹಿತಿ ಕೊಡುವುದಾಗಿ ಹೇಳಿ ಇದೂವರೆಗೂ ಯಾವುದೇ ವಿರಗಳನ್ನು ಕೊಟ್ಟಿಲ್ಲ. ಯಡಿಯೂರಪ್ಪ ಸುಳ್ಳು ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ತಾವು ಸರ್ಕಾರಕ್ಕೆ ಈವರೆಗೆ 20 ಪತ್ರಗಳನ್ನು ಬರೆದಿದ್ದರೂ ಇಲ್ಲಿಯವರೆಗೆ ಒಂದೇ ಒಂದು ಉತ್ತರ ಕೊಟ್ಟಿಲ್ಲ. ಉತ್ತರ ಕೊಡಲು ಇಷ್ಟು ದಿನ ಬೇಕೇ?. ಸರ್ಕಾರದಲ್ಲಿ ಪಾರದರ್ಶಕತೆ ಇದ್ದಿದ್ದರೆ ಸತ್ಯ ಹೇಳುತ್ತಿದ್ದರು. ಪ್ರತಿಪಕ್ಷ ನಾಯಕನಾಗಿರುವ ತಮಗೆ ಸರ್ಕಾರ ಮಾಹಿತಿ ಕೊಡುವುದಿಲ್ಲ ಎಂದರೆ ಹೇಗೆ? ಇಂತವರನ್ನು ಜನ ನಂಬುವುದಾದರೂ ಹೇಗೆ?. ಕೊರೋನಾ ನಿಯಂತ್ರಣ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಿದೆ. ಜನರ ಜೀವ ಉಳಿಸಲು ನಮ್ಮ ಸಹಕಾರ ಇದ್ದೇ ಇದೆ. ಆದರೆ ಇಂತಹ ಸಂದರ್ಭದಲ್ಲಿ ಲೂಟಿ ಹೊಡೆಯಲು ಹೇಗೆ ಸಹಕಾರ ಕೊಡುವುದು? ಕೊರೊನಾದಲ್ಲಿ ಸರ್ಕಾರದ ಭ್ರಷ್ಟತೆಗೆ ಉತ್ತರ ಕೊಡಬೇಕು ಎಂಬುದು ತಮ್ಮ ಹಾಗೂ ಜನರ ಪ್ರಶ್ನೆಯಾಗಿದೆ. ಭ್ರಷ್ಟಾಚಾರದ ಬಗ್ಗೆ ನಾವು ತಿಳಿಸದಿದ್ದರೆ ಜನದ್ರೋಹವಾಗುತ್ತದೆ.ಜನರು ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಈಶ್ವರ್ ಖಂಡ್ರೆ, ಪಕ್ಷದ ನಾಯಕರಾದ ರಮೇಶ್ ಕುಮಾರ್,ವಿ.ಆರ್.ಸುದರ್ಶನ್,ವಿ.ಎಸ್.ಉಗ್ರಪ್ಪ ಉಪಸ್ಥಿತರಿದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


