ಸಿಎಂ ವಿರುದ್ಧ ತನಿಖೆಗೆ ಹೈಕೋರ್ಟ್ ಆದೇಶ: ಯಡಿಯೂರಪ್ಪ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ
ಡಿ ನೋಟಿಫಿಕೇಶನ್ ತನಿಖೆಗೆ ಹೈಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ತನಿಖೆಗೆ ಅನುಕೂಲ ಮಾಡಿಕೊಡಲು ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು...

ಬೆಂಗಳೂರು: ಡಿ ನೋಟಿಫಿಕೇಶನ್ ತನಿಖೆಗೆ ಹೈಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ತನಿಖೆಗೆ ಅನುಕೂಲ ಮಾಡಿಕೊಡಲು ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಾಯುಕ್ತ ಕೋರ್ಟ್ ನಿಗಾದಲ್ಲಿ ತನಿಖೆ ನಡೆಯಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. ಎಲ್ಲಾ ಏಜೆನ್ಸಿಗಳು ಯಾರ ಅಧೀನದಲ್ಲಿರುತ್ತವೆ..? ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರೆಯುವಂತಿಲ್ಲ. ಮುಖ್ಯಮಂತ್ರಿಯಾಗಿರುವುದರಿಂದ ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ನಿಷ್ಪಕ್ಷಪಾತ ತನಿಖೆ ಆಗಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆರೋಪದಿಂದ ಮುಕ್ತರಾಗಿ ಬಂದ್ರೆ ಮತ್ತೆ ಅಧಿಕಾರ ವಹಿಸಿಕೊಳ್ಳಲು ನಮ್ಮ ತಕರಾರಿಲ್ಲ ಎಂದರು.
ಯಡಿಯೂರಪ್ಪ ಅವರಿಗೆ ಕಾನೂನಿನ ಬಗ್ಗೆ ಗೌರವ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು. ಒಂದು ಸೆಕೆಂಡ್ ಕೂಡ ಸಿಎಂ ಆಗಿ ಇರಬಾರದು. ಬಂಡತನದಿಂದ ರಾಜೀನಾಮೆ ನೀಡದಿದ್ದರೆ ಅವರ ವಿರುದ್ಧ ಹೈಕಮಾಂಡ್ ಕ್ರಮ ತೆಗೆದುಕೊಳ್ಳಬೇಕು. ಚೌಕೀದಾರ್ ಮೋದಿ ಯಡಿಯೂರಪ್ಪ ಮೇಲೆ ಕ್ರಮ ಜರುಗಿಸಬೇಕು. ಇದು ಸೀರಿಯಸ್ ಕೇಸ್, ಕೂಡಲೇ ರಾಜೀನಾಮೆ ನೀಡಿ ಎಂದು ಆಗ್ರಹಿಸಿದರು.
ಒಂದು ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಬಂಡತನಕ್ಕೆ ಇಳಿದರೆ ನಾವು ಬೀದಿಗಿಳಿದು ಪ್ರತಿಭಟನೆ ಮಾಡು ತ್ತೇವೆ.ಕೂಡಲೇ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.ಯಡಿಯೂರಪ್ಪನಿಗೆ ಮಾನ ಮಾರ್ಯದಿ ಇದ್ರೆ ರಾಜೀನಾಮೆ ಕೊಡಬೇಕು.ರಾಜೀನಾಮೆ ನೀಡದಿದ್ದರೆ ನಾವು ಯಾವ ರೀತಿ ಹೋರಟ ಮಾಡ್ಬೇಕು ಅಂತ ಪಕ್ಷದಲ್ಲಿ ತೀರ್ಮಾನ ಮಾಡುತ್ತೇವೆ.ಈ ಕೇಸ್ ನಲ್ಲಿ ವಾರೆಂಟ್ ಕೊಡಬಹುದು ಅಥವಾ ಅರೆ ಸ್ಟ್ ಮಾಡಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಗಂಭೀರವಾದ ಆರೋಪ ಮುಖ್ಯಮಂತ್ರಿ ಯಡಿಯೂರಪ್ಪ ಮೇಲಿದೆ. ಬೆಳ್ಳಂದೂರು, ದೇವರಬಿಸನಹಳ್ಳಿ, ವರ್ತೂರು ವೈಟ್ ಫೀಲ್ಡ್ ನಲ್ಲಿ ಐಟಿ ಕಾರಿಡಾರ್ ಗೆ 126 ಎಕರೆ ಭೂ ಸ್ವಾಧೀನ ಮಾಡಿದ್ದಾರೆ. 2000-01ರಲ್ಲಿ ಭೂಸ್ವಾಧೀನವಾಗಿದೆ. ಪ್ರಿಲಿಮನರಿ ನೋಟಿಫಿಕೇಶನ್ ಗೂ ಮುನ್ನ ಡಿನೋಟಿಫಿಕೇಶನ್ ಮಾಡಲು ಅವಕಾಶ ಇದೆ. ಕೆಐಎಡಿಬಿ ಸ್ವಾಧೀನಕ್ಕೆ ತೆಗೆದುಕೊಂಡ ಮೇಲೆ ಮಾಡಿದ್ರೆ ಅಕ್ರಮ ಆಗುತ್ತದೆ. ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡಿದ್ದಾರೆ. ವಾಸುದೇವರೆಡ್ಡಿ ಎಂಬುವರು ಹೈಕೋರ್ಟ್ ನಲ್ಲಿ ಅರ್ಜಿಸಲ್ಲಿಸಿದ್ದರು. ಅದರ ಮೇಲೆ ಡಿ.22ರಂದು ಹೈಕೋರ್ಟ್ ಏಕಸದಸ್ಯ ಪೀಠ ತನಿಖೆಗೆ ಆದೇಶ ಮಾಡಿದೆ. ರಿಟ್ ಪಿಟಿಶನ್ ಸಂಖ್ಯೆ 1543/2019ಲೋಕಾಯುಕ್ತ ಪಿಸಿಆರ್ ನಂಬರ್ 51/2013 ರಲ್ಲಿ ಸೆಕ್ಷನ್ 131,32 ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಯಡಿ ತನಿಖೆಗೆ ಆದೇಶ ನೀಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿವರಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದಕ್ಕೆ ಪಕ್ಷದಲ್ಲಿ ಹಾಗೂ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಹೀಗಾಗಿ ಪಕ್ಷದ ಹೈಕಮಾಂಡ್ ಗೆ ಮತ್ತೊಂದು ಪ್ರಮುಖ ಆಸ್ತ್ರವಾಗಿ ದೊರಕಿದೆ. ಆದರೆ 2011ರಲ್ಲೂ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ. ಈಗ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ ಎಂದು ಯಾವುದೇ ಭರವಸೆ ಇಲ್ಲ. ನೈತಿಕತೆ, ಕಾನೂನಿಗೆ, ಸಂವಿಧಾನಕ್ಕೆ ಗೌರವ ನೀಡುವವರಾದರೆ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. 2011ರಲ್ಲಿ ಅವರು ನಿರ್ಲಕ್ಷ್ಯ ಮಾಡಿದರು. ಅವರಿಗೆ ಯಾರೇನು ಮಾಡುತ್ತಾರೆಂಬ ಭಂಡತನವಿತ್ತು. ಅದಕ್ಕೆ ರಾಜೀನಾಮೆ ನೀಡಲು ಹಿಂದೇಟು ಹಾಕಿದರು. ಆದರೆ ಈಗ ಅವರು ಮೆತ್ತಗಾಗಿ ಬಿಟ್ಟಿದ್ದಾರೆ ಮತ್ತು ಸ್ವಲ್ಪ ತಿಳುವಳಿಕೆ ಹಾಗೂ ಜವಾಬ್ದಾರಿ ಬಂದಿದೆ. ಹೀಗಾಗಿ ಈ ತೀರ್ಪಿನ ಹಿನ್ನಲೆಯಲ್ಲಿ ಅವರು ಒಂದು ಕ್ಷಣ ಕುರ್ಚಿಯಲ್ಲಿ ಮುಂದಯವರೆಯಬಾರದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


