ಬಾಯಿ ಚಪಲಕ್ಕೆ ಮಾತಾಡಲ್ಲ, ಬಹಿರಂಗ ಚರ್ಚೆಗೆ ಸಿದ್ಧ: ಸಚಿವ ಈಶ್ವರಪ್ಪಗೆ ಡಿಕೆ ಶಿವಕುಮಾರ್ ಪಂಥಾಹ್ವಾನ
ಮನ್ರೇಗಾ ಯೋಜನೆ ಹಾಗೂ ಯೋಜನೆಯಲ್ಲಿ ತಾವು ಮಾಡಿರುವ ಆರೋಪಗಳ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಸಚಿವ ಈಶ್ವರಪ್ಪ ನಿಗದಿ ಮಾಡಿದ ಸಮಯಕ್ಕೆ ಮಾಧ್ಯಮಗಳಲ್ಲಿ ಚರ್ಚೆಗೆ ತಾವು ಬರುವುದಾಗಿ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಪಂಥಾಹ್ವಾನ ನೀಡಿದ್ದಾರೆ.

ಬೆಂಗಳೂರು: ಮನ್ರೇಗಾ ಯೋಜನೆ ಹಾಗೂ ಯೋಜನೆಯಲ್ಲಿ ತಾವು ಮಾಡಿರುವ ಆರೋಪಗಳ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಸಚಿವ ಈಶ್ವರಪ್ಪ ನಿಗದಿ ಮಾಡಿದ ಸಮಯಕ್ಕೆ ಮಾಧ್ಯಮಗಳಲ್ಲಿ ಚರ್ಚೆಗೆ ತಾವು ಬರುವುದಾಗಿ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಪಂಥಾಹ್ವಾನ ನೀಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಅವರು ತಮ್ಮ ವಿರುದ್ಧ ಮಾಡಿರುವ ಟೀಕೆಗೆ ತಿರುಗೇಟು ನೀಡಿದ ಡಿ.ಕೆ. ಶಿವಕುಮಾರ್, ಯುಪಿಎ ಸರ್ಕಾರ ಮನರೇಗಾ ಮೂಲಕ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಈ ಯೋಜನೆಯನ್ನು ಒಂದು ಕುಟುಂಬ ಹೇಗೆ ಬಳಸಿಕೊಳ್ಳಬಹುದು, ವೈಯಕ್ತಿಕವಾಗಿ ಈ ಯೋಜನೆ ಕುಟುಂಬಗಳಿಗೆ ಹೇಗೆ ಆಸರೆಯಾಗುತ್ತದೆ ಎಂದು ನಾನು ಹಿಂದೆ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದೆ. ಈಶ್ವರಪ್ಪನವರು ಈ ವಿಚಾರವಾಗಿ ಯಾವ ಮಾಧ್ಯಮದಲ್ಲಾದರೂ ಬಹಿರಂಗ ಚರ್ಚೆಗೆ ಬರಲಿ. ಎಲ್ಲ ಮಾಧ್ಯಮಗಳಲ್ಲೂ ಚರ್ಚೆ ಆಗಲಿ. ನಾನು ಅದನ್ನು ಎದುರಿಸಲು ಸಿದ್ಧ. ಅವರಿಗೆ ಯಾವ ಮಾಹಿತಿ ಬೇಕೋ ಅದನ್ನು ಕೊಡುತ್ತೇನೆ ಎಂದು ಸವಾಲು ಹಾಕಿದರು.
ತಾವು ಈ ಹಿಂದೆ ಅವರು "ಮಲಗಿದ್ದಾರೆ" ಎಂದು ಹೇಳಿದ್ದರ ಅರ್ಥವನ್ನು ಗ್ರಹಿಸಲು ಅವರಿಗೆ ಸಾಧ್ಯವಾಗಿಲ್ಲ. ಈಶ್ವರಪ್ಪನವರೇ ಮನರೇಗಾ ವಿಚಾರದಲ್ಲಿ ಬೇಕಾದಷ್ಟು ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಆದೇಶಿಸಿದ್ದಾರೆ. ಮನರೇಗಾ ಯೋಜನೆಗೆ ಎಷ್ಟು ಶಕ್ತಿ ಇದೆ ಎಂದು ಈಶ್ವರಪ್ಪನವರಿಗೆ ಗೊತ್ತಿಲ್ಲ. ಈ ಯೋಜನೆಯನ್ನು ದೇಶದಲ್ಲೇ ಹೆಚ್ಚು ಪರಿಣಾಮಕಾರಿಯಾಗಿ ಕನಕಪುರದಲ್ಲಿ ಬಳಸಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವೇ ತಮಗೆ ಪ್ರಶಸ್ತಿ ನೀಡಿದೆ. ಈ ಬಗ್ಗೆ ಈಶ್ವರಪ್ಪನವರಿಗೆ ಗೊತ್ತಿಲ್ಲ ಎಂದು ಕುಟುಕಿದರು.
ವಿರೋಧ ಪಕ್ಷದ ಅಧ್ಯಕ್ಷನಾಗಿರುವ ತಮಗೆ ಪ್ರಚಾರ ಪಡೆಯುವ ಅಗತ್ಯವಿಲ್ಲ. ತಮಗೆ ರಾಜಕಾರಣ ಹೇಗೆ ಮಾಡಬೇಕು ಎಂಬುದೂ ಗೊತ್ತಿದೆ. ಇದು ದೇಶ ಹಾಗೂ ಮಾನವೀಯತೆಯ ವಿಚಾರ. ಒಂದು ಪಕ್ಷದ ಅಧ್ಯಕ್ಷನಾಗಿ ಮನರೇಗಾ ಹಣವನ್ನು ಹೇಗೆ ಬಳಸಿಕೊಳ್ಳಬೇಕೆಂಬ ಬಗ್ಗೆ ಸಲಹೆ ನೀಡಿದ್ದೇನೆ. ತಮ್ಮ ಘನತೆ ಕಡಿಮೆಯಾದರೂ ಈಶ್ವರಪ್ಪನಿಗೆ ಉತ್ತರ ಕೊಡಲು ಸಿದ್ಧನಿದ್ದೇನೆ. ಸುಮ್ಮನೆ ಮಾತನಾಡಿ ಓಡಿ ಹೋಗುವ ವ್ಯಕ್ತಿತ್ವವಲ್ಲ. ಈಶ್ವರಪ್ಪ ಸಮಯ ನಿಗದಿ ಮಾಡಿದರೆ ತಾವೇ ಬಂದು ಉತ್ತರ ನೀಡುತ್ತೇನೆ. ಈ ವಿಚಾರದಲ್ಲಿ ಮಾಹಿತಿಗಳು ತಮ್ಮ ಬೆರಳ ತುದಿಯಲ್ಲಿವೆ’ ಎಂದರು.
ಪಕ್ಷದ ಹೈಕಮಾಂಡ್ ನೀಡಿರುವ ಹೇಳಿಕೆಗೆ ತಾವು ಬದ್ಧನಾಗಿದ್ದೇವೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಿದೆ. ರಾಷ್ಟ್ರಮಟ್ಟದಲ್ಲಿ ಪಕ್ಷದ ನಾಯಕರು ಪ್ರಧಾನ ಮಂತ್ರಿಗಳಿಗೆ ಮಾಡಿರುವ ಮನವಿಗೆ ನಮ್ಮ ರಾಜ್ಯ ಘಟಕ ಕೂಡ ಬದ್ಧವಾಗಿದೆ ಎಂದು ಶಿವಕುಮಾರ್ ಹೇಳಿದರು.
ವೈದ್ಯರು ಹೊರತಾಗಿ ಆಶಾ ಕಾರ್ಯಕರ್ತರು, ಪೌರ ಕಾರ್ಮಿಕರು ಹಾಗೂ ಆರೋಗ್ಯ ಸಿಬ್ಬಂದಿಗಳಲ್ಲಿ ಯಾರಿಗೆ ಸುರಕ್ಷಾ ಕಿಟ್ ಸಿಕ್ಕಿಲ್ಲವೋ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಸುರಕ್ಷಾ ಕಿಟ್ ನೀಡಲು ನಿರ್ಧರಿಸಲಾಗಿದೆ. ಇವತ್ತು ಸುರಕ್ಷತಾ ಸಾಮಾಗ್ರಿ ನೀಡುವ ಕಾರ್ಯಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ನಾವೆಲ್ಲರೂ ಜಾಗ್ರತೆಯಿಂದ ಇರಬೇಕಾಗಿದೆ. ಸ್ವಲ್ಪ ಕಡಿಮೆ ಆಯ್ತು ಎಂದು ಲಾಕ್ ಡೌನ್ ಸಡಿಲ ಮಾಡಿದ್ದಾರೆ ಎಂದು ನಾವು ಯಾಮಾರುವುದು ಬೇಡ. ಸೋಂಕು ಹೆಚ್ಚಾಗುವ ವಾತಾವರಣವಿದೆ. ಹೆಚ್ಚು ಪರೀಕ್ಷೆ ನಡೆದಂತೆ ಸೋಂಕು ಪ್ರಕರಣ ಪತ್ತೆಯಾಗಲಿದೆ ಎಂಬ ಮಾಹಿತಿ ಇದೆ. ಆ ದೃಷ್ಟಿಯಿಂದ ನಾವು ನಮ್ಮ ಅಂತರ ಕಾಯ್ದುಕೊಳ್ಳುವುದು ಸೂಕ್ತ ಎಂದು ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


