ರಾಜಕೀಯ

ರಮೇಶ್ ಜಾರಕಿಹೊಳಿ ಜೊತೆ ಸಂಸದ ಬಿ.ವಿ.ನಾಯಕ್ ಸಂಧಾನ

ಮೈತ್ರಿ ಸರ್ಕಾರಕ್ಕೆ ತಲೆನೋವಾಗಿ ಪರಿಣಿಮಿಸಿರುವ ಕಾಂಗ್ರೆಸ್ ಅಸಮಾಧಾನಿತ ಶಾಸಕ ರಮೇಶ್ ಜಾರಕಿಹೊಳಿ ಮನವೊಲಿಕೆಗೆ ರಾಯಚೂರು....

ರಮೇಶ್ ಜಾರಕಿಹೊಳಿ ಜೊತೆ ಸಂಸದ ಬಿ.ವಿ.ನಾಯಕ್ ಸಂಧಾನ
ಬಿವಿ ನಾಯಕ್, ರಮೇಶ್ ಜಾರಕಿಹೊಳಿ
Published On :
ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ತಲೆನೋವಾಗಿ ಪರಿಣಿಮಿಸಿರುವ ಕಾಂಗ್ರೆಸ್ ಅಸಮಾಧಾನಿತ ಶಾಸಕ ರಮೇಶ್ ಜಾರಕಿಹೊಳಿ ಮನವೊಲಿಕೆಗೆ ರಾಯಚೂರು ಸಂಸದ ಬಿ.ವಿ.ನಾಯಕ್ ಮುಂದಾಗಿದ್ದಾರೆ. 
ಇಂದು ನಗರದ ಸೆವೆನ್ ಮಿನಿಸ್ಟರ್ ಕ್ವಾಟ್ರಸ್ಸ್ ನಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ ಬಿ.ವಿ.ನಾಯಕ್, ಬಳಿಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಿ ಕುತೂಹಲ ಮೂಡಿಸಿದ್ದಾರೆ.
ಈ ವೇಳೆ ರಮೇಶ್ ಜಾರಕಿಹೊಳಿಗೆ ಕಾಂಗ್ರೆಸ್ ಪಕ್ಷ ತೊರೆಯದಂತೆ ರಾಯಚೂರು ಸಂಸದ ಬಿ.ವಿ.ನಾಯಕ್ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ನಡುವಿನ ತಿಕ್ಕಾಟದಿಂದ ರಾಜಕೀಯವಾಗಿ ಬೇರೆಯವರು ಲಾಭ ಮಾಡಿಕೊಳ್ಳಲು ಹೊರಟಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಕುಟುಂಬಕ್ಕೆ ತಮ್ಮದೇ ಆದ ಗೌರವ, ಸ್ಥಾನಮಾನ ಇದೆ. ಈವರು ಹೀಗೆ ಕಿತ್ತಾಡಿಕೊಂಡರೆ ಅದರ ಲಾಭವನ್ನು ಬೇರೆಯವರು ಪಡೆದುಕೊಂಡು ಜಿಲ್ಲೆಯಲ್ಲಿ ಹಿಡಿತ ಸಾಧಿಸುವ ಕೆಲಸ ಮಾಡುತ್ತಾರೆ ಎಂದು ಬಿ.ವಿ.ನಾಯಕ್ ಸ್ಪಷ್ಟ ಮಾತುಗಳಲ್ಲಿ ರಮೇಶ್ ಗೆ ಬುದ್ದಿವಾದ ಹೇಳಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ತಮಗೆ ಸಚಿವ ಸ್ಥಾನ ಕೊಡಲು ಸಮ್ಮತಿಸಿದ್ದಾರೆ ಎಂಬ ಮಾಹಿತಿ ಇದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆಯುವುದು ಬೇಡ. ಪಕ್ಷ ತೊರೆಯುವುದರಿಂದ ಸರ್ಕಾರ ಪತನವಾಗುವುದಿಲ್ಲ. ನಿಮ್ಮ ನಿಮ್ಮಲ್ಲಿನ ಸಮಸ್ಯೆಗಳಿಗೆ ಸರ್ಕಾರದ ಪತನಕ್ಕೆ ಕಾರಣರಾದರೂ ಎಂಬ ಆರೋಪ ಬರುವುದು ಬೇಡ. ಬಿಜೆಪಿಗೆ ಹೋದರೆ ನಿಮ್ಮನ್ನು ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಕಡೆಗಣಿಸಿದರೆ ತೊಂದರೆಗೆ ಒಳಗಾಗುವುದು ನೀವೇ. ಹೀಗಾಗಿ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಿ ಎಂದು ಹೇಳಿದ್ದಾರೆ ಎಂಬ ಮಾಹಿತಿ ಇದೆ.
ರಾಯಚೂರು ಸಂಸದ ಬಿ.ವಿ.ನಾಯಕ್ ಮಾತಿಗೆ ಮರು ಮಾತನಾಡದೆ ರಮೇಶ್ ಜಾರಕಿಹೊಳಿ ಮೌನವಾಗಿದ್ದರು ಎನ್ನಲಾಗಿದೆ. ಬಳಿಕ ಬಿ.ವಿ.ನಾಯಕ್ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಆಪರೇಷನ್ ಕಮಲ ವಿಚಾರ ಸೇರಿದಂತೆ ಸರ್ಕಾರ ಪತನಗೊಳಿಸಲು ಷಡ್ಯಂತ್ರ ರೂಪಿಸದಂತೆ ಹಾಗೂ ಕಾಂಗ್ರೆಸ್ ನಲ್ಲಿಯೇ ಮುಂದುವರೆಯುಂತೆ ಮನವೊಲಿಸಿದ್ದೇವೆ. ಆದಷ್ಟು ಶೀಘ್ರ ಅವರ ಬೇಡಿಕೆಗಳನ್ನು ಈಡೇರಿಸಿ ಎಂದು ಬಿ.ವಿ.ನಾಯಕ್ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಬಿಜೆಪಿ ಜೊತೆ ಸೇರಿ ಸರ್ಕಾರ ಪತನಕ್ಕೆ ಕೈಹಾಕದಿದ್ದಲ್ಲಿ ಅವರಿಗೆ ಸೂಕ್ತ ಸ್ಥಾನ ಮಾನ ಹಾಗೂ ಬೇಡಿಕೆಗಳನ್ನು ಈಡೇರಿಸಲು ಸಿದ್ದ. ಆದರೆ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕವೂ ಅವರು ಭಿನ್ನಮತೀಯ ಚಟುವಟಿಕೆ ಆರಂಬಿಸಿದ್ದಾರೆ. ಹೀಗಾಗಿ ಅವರನ್ನು ಬಿಟ್ಟು ಇತರರು ಅವರ ಜೊತೆ ಪಕ್ಷ ತೊರೆಯದಂತೆ ತಡೆಯಲು ಮುಂದಾಗಿದ್ದೇವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಂಸದ ಬಿ.ವಿ.ನಾಯಕ್ ಗೆ ತಿಳಿಸಿದರು ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.