ರಾಜಕೀಯ

ಮಂಡ್ಯದಲ್ಲಿ ಸುಮಲತಾ ಎದುರು ನಿಖಿಲ್ ಗೆಲುವಿಗೆ ಕಾರ್ಯತಂತ್ರ ಹೆಣೆಯುತ್ತಿರುವ ಸಿಎಂ ಕುಮಾರಸ್ವಾಮಿ

ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸುಮಲತಾ ಅಂಬರೀಷ್ ...

ಮಂಡ್ಯದಲ್ಲಿ ಸುಮಲತಾ ಎದುರು ನಿಖಿಲ್ ಗೆಲುವಿಗೆ ಕಾರ್ಯತಂತ್ರ ಹೆಣೆಯುತ್ತಿರುವ ಸಿಎಂ ಕುಮಾರಸ್ವಾಮಿ
ಸಿಎಂ ಹೆಚ್ ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರ್
Published On :
ಮೈಸೂರು: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸುಮಲತಾ ಅಂಬರೀಷ್ ಅವರಿಗೆ ಸಿಕ್ಕ ಜನ ಬೆಂಬಲ ನೋಡಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಅವರ ಸಂಪುಟ ಸಚಿವರು ಆತಂಕಗೊಂಡಿದ್ದಾರೆ ಎನ್ನಲಾಗಿದೆ.
ನಿನ್ನೆ ಸುಮಲತಾ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿ ಮೆರವಣಿಗೆಯಲ್ಲಿ ಸಾರ್ವಜನಿಕ ಸಭೆ ನಡೆದ ವೇದಿಕೆಗೆ ಬರುತ್ತಿದ್ದ ವೇಳೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಸಭೆಯಲ್ಲಿ ಕೂಡ ಸಾವಿರಾರು ಮಂದಿ ಕಂಡುಬಂದರು. ಇವೆಲ್ಲವನ್ನೂ ಮುಖ್ಯಮಂತ್ರಿ ಕೃಷ್ಣರಾಜಸಾಗರದ ರೆಸಾರ್ಟ್ ನಲ್ಲಿ ತಮ್ಮ ಆಪ್ತರೊಂದಿಗೆ ಕುಳಿತು ಟಿವಿಯಲ್ಲಿ ವೀಕ್ಷಣೆ ಮಾಡುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ.
ಅತ್ತ ಅಂಬರೀಷ್ ಅಭಿಮಾನಿಗಳು ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಅಪಾರ ಸಂಖ್ಯೆಯಲ್ಲಿ ಸೇರುತ್ತಿದ್ದಂತೆ ಇತ್ತ ಸಿಎಂ ಕುಮಾರಸ್ವಾಮಿ ತಮ್ಮ ಪುತ್ರನ ಗೆಲುವಿಗೆ ಚುನಾವಣಾ ಕಾರ್ಯತಂತ್ರ ಹೆಣೆಯುವಲ್ಲಿ ನಿರತರಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಲೋಕಸಭೆ ಚುನಾವಣೆಯನ್ನು ಕೆಲವರು ಭಾವನೆಗಳ ಜೊತೆ ಆಟವಾಡುವ ಮೂಲಕ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿರುವ ಕುಮಾರಸ್ವಾಮಿ, ಭಾವನೆಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲು ತಮ್ಮ ಪಕ್ಷಕ್ಕೂ ಗೊತ್ತಿದೆ. ಭಾವನಾತ್ಮಕವಾಗಿ ಹೇಗೆ ಮಾತನಾಡಬೇಕೆಂದು ತಮಗೂ ಗೊತ್ತಿದೆ. ಮಂಡ್ಯದ ಜನತೆಗೆ ಯಾರು ಏನು ಮಾಡಿದ್ದಾರೆ ಎಂದು ಗೊತ್ತಿದೆ ಎಂದಿದ್ದಾರೆ.
ನಿನ್ನೆ ಮೈಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಮೃತ ರೈತರ ಕುಟುಂಬಕ್ಕೆ ನೆರವಾಗಲು ತಮ್ಮ ಮಗ ನಿಖಿಲ್ ತೆರಳಿದ್ದ. ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಬಗ್ಗೆ ಕೂಡ ಚರ್ಚೆ ನಡೆಸಿದ್ದ. ನಿಖಿಲ್ ಜನರ ಜೊತೆ ಸುದೀರ್ಘ ಕಾಲದಿಂದ ಬೆರೆತು ಹೋಗಿದ್ದಾನೆ. ಸುಮಲತಾ ಕಣ್ಣೀರಿಗೆ ಮಂಡ್ಯ ಜನತೆ ಮೋಸ ಹೋಗುವುದಿಲ್ಲ ಎಂದು ಸಿಎಂ ಮಂಡ್ಯ ಜಿಲ್ಲಾ ಪಂಚಾಯತ್ ಸದಸ್ಯರೊಂದಿಗಿನ ಸಭೆಯ ನಂತರ ಹೇಳಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ನ 41 ಜಿಲ್ಲಾ ಪಂಚಾಯತ್ ಸದಸ್ಯರು ಮಂಡ್ಯದ ಬಗ್ಗೆ ಒಂದು ದೃಷ್ಟಿಕೋನವನ್ನು ಹೊಂದಿ ಜಿಲ್ಲೆಯ ಅಭಿವೃದ್ಧಿಗೆ ಒಗ್ಗಟ್ಟಾಗಿ ಇರುವಂತೆ ಮನವಿ ಮಾಡಿದರು. ಕಣ್ಣೀರಿನ ಆಟಕ್ಕೆ ಮೋಸ ಹೋಗಬೇಡಿ ಎಂದು ಕೂಡ ಮನವಿ ಮಾಡಿಕೊಂಡರು. ಸುಮಲತಾ ರ್ಯಾಲಿಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕೂಡ ಹರಿಹಾಯ್ದರು. ಸುಮಲತಾ ಅವರ ಎದುರು ಗೆಲ್ಲಲು ಕಾರ್ಯತಂತ್ರದ ಬಗ್ಗೆ ಚರ್ಚಿಸಿದರು. ಮಂಡ್ಯದಲ್ಲಿ ಮಾರ್ಚ್ 25ರಂದು ಮೆಗಾ ರ್ಯಾಲಿ ಆಯೋಜಿಸುವುದಾಗಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.