ಸೀಟು ಹಂಚಿಕೆ ವಿಚಾರದಲ್ಲಿ ದೇವೇಗೌಡ- ಸಿದ್ದರಾಮಯ್ಯ ನಡುವೆ ಜಂಗಿಕುಸ್ತಿ?
ಮುಂಬರುವ ಸಾರ್ವತ್ರಿಕ ಚುನಾವಣೆಗೆ ರಾಜ್ಯದಲ್ಲಿ ಮೈತ್ರಿಕೂಟಗಳ ನಡುವೆ ಸೀಟು ಹಂಚಿಕೆ ....

ಬೆಂಗಳೂರು; ಮುಂಬರುವ ಸಾರ್ವತ್ರಿಕ ಚುನಾವಣೆಗೆ ರಾಜ್ಯದಲ್ಲಿ ಮೈತ್ರಿಕೂಟಗಳ ನಡುವೆ ಸೀಟು ಹಂಚಿಕೆ ವಿಷಯದಲ್ಲಿ ಇಬ್ಬರು ಅಗ್ರ ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಅದು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ.
ಈ ಇಬ್ಬರೂ ನಾಯಕರಿಗೆ ಲೋಕಸಭೆ ಚುನಾವಣೆ ಪ್ರತಿಷ್ಠೆಯ ವಿಷಯವಾಗಿದ್ದು ಮಾಜಿ ರಾಜಕೀಯ ವೈರಿಗಳು ನಂತರದ ರಾಜಕೀಯ ಸ್ಥಿತ್ಯಂತರಗಳಲ್ಲಿ ರಾಜಿ ಮಾಡಿಕೊಂಡರೂ ಸಹ ಮತ್ತೆ ವೈಮನಸ್ಯ ಉಂಟಾಗುವ ಸಾಧ್ಯತೆಯಿದೆ ಎಂದು ರಾಜಕೀಯ ಮೂಲಗಳು ಹೇಳುತ್ತಿವೆ.
ದಕ್ಷಿಣ ಕರ್ನಾಟಕ ಭಾಗ ಸೇರಿದಂತೆ ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರಗಳನ್ನು ತನಗೆ ಬಿಟ್ಟುಕೊಡಬೇಕೆಂದು ಜೆಡಿಎಸ್ ಬೇಡಿಕೆ ಮುಂದಿಟ್ಟಿದೆ. ಕರ್ನಾಟಕದ 28 ಲೋಕಸಭೆ ಕ್ಷೇತ್ರಗಳಲ್ಲಿ 12 ತನಗೆ ಬೇಕೆಂದು ದೇವೇಗೌಡರು ಆರಂಭದಿಂದಲೂ ಕೇಳಿಕೊಂಡು ಬರುತ್ತಿದ್ದು ಇದುವೇ ಕಾಂಗ್ರೆಸ್ ಗೆ ತೊಂದರೆಯಾಗಿದೆ. ದಕ್ಷಿಣ ಕರ್ನಾಟಕ ಭಾಗದ ಜೆಡಿಎಸ್ ಕೇಳುತ್ತಿರುವ 9 ಕ್ಷೇತ್ರಗಳಲ್ಲಿ 5 ಕ್ಷೇತ್ರಗಳಲ್ಲಿ 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಕಂಡು ಸಂಸದರಾಗಿದ್ದಾರೆ.
ಮುಂದಿನ ದಿನಗಳಲ್ಲಿ ದಕ್ಷಿಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಹಿಡಿತ ಸಾಧಿಸಿ ರಾಷ್ಟ್ರ ಮಟ್ಟದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಲು ಯತ್ನಿಸುತ್ತಿರುವ ಜೆಡಿಎಸ್ ನಡೆ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಆತಂಕ ಹುಟ್ಟಿಸಿದೆ.
2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 9, ಜೆಡಿಎಸ್ 2 ಹಾಗೂ ಬಿಜೆಪಿ 17 ಸ್ಥಾನಗಳನ್ನು ಗೆದ್ದುಕೊಂಡಿತ್ತು. ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೆಚ್ಚಿದ್ದು ಅಲ್ಲಿ ಜೆಡಿಎಸ್ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ. ಇದು ಮುಂದಿನ ದಿನಗಳಲ್ಲಿ ಮೈತ್ರಿ ಸರ್ಕಾರದಲ್ಲಿ ಪಕ್ಷಗಳ ಮಧ್ಯೆ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಲಿದ್ದು ಅದರ ಲಕ್ಷಣಗಳು ಈಗಾಗಲೇ ಕಂಡುಬರುತ್ತಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಬೆಂಗಳೂರು ವಿಶ್ವವಿದ್ಯಾಲಯದ ಕಿರಣ್ ಗಾಜನೂರು.
ಇತ್ತೀಚೆಗೆ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ ಸಂದರ್ಭದಲ್ಲಿ ಮೈತ್ರಿಕೂಟಗಳ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯನವರು ತಮಗೆ ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ, ಒತ್ತಡವೆನಿಸುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದರು.
ಈ ಮಧ್ಯೆ ಅಗ್ರ ನಾಯಕರ ಮುಸುಕಿನ ಗುದ್ದಾಟಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಧ್ಯೆ ಪ್ರವೇಶಿಸಿ ಜೆಡಿಎಸ್ ನಾಯಕರಿಗೆ ಬಲವಾದ ಸಂದೇಶ ರವಾನಿಸಬೇಕೆಂದು ಕಾಂಗ್ರೆಸ್ ಸಂಸದರು ಒತ್ತಾಯಿಸುತ್ತಿದ್ದಾರೆ. 2:1ರ ಅನುಪಾತದಂತೆ ಸೀಟು ಹಂಚಿಕೆ ಪ್ರಕಾರ ದೇವೇಗೌಡರು 12 ಸೀಟುಗಳನ್ನು ಕೇಳುತ್ತಿದ್ದಾರೆ. ಮಾತುಕತೆ ನಡೆಸಿ ಜೆಡಿಎಸ್ ಗೆ 9 ಸೀಟುಗಳನ್ನು ಬಿಟ್ಟುಕೊಟ್ಟರೂ ಸಹ ಹಳೆ ಮೈಸೂರು ಭಾಗದಲ್ಲಿ ಸೀಟುಗಳನ್ನು ಜೆಡಿಎಸ್ ಬಿಟ್ಟುಕೊಡುವುದು ಸಂಶಯವೇ.
ಜೆಡಿಎಸ್ ಪ್ರಾಬಲ್ಯ ಹೆಚ್ಚಿರುವ ಮಂಡ್ಯ ಮತ್ತು ಹಾಸನ ಜಿಲ್ಲೆಗಳು ಮಾತ್ರವಲ್ಲದೆ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳನ್ನು ಸಹ ಕೇಳುವ ಸಾಧ್ಯತೆಯಿದೆ. ಇಲ್ಲಿ ಈಗ ಕಾಂಗ್ರೆಸ್ ಸಂಸದರಿದ್ದಾರೆ. ಅಲ್ಲದೆ ಮೈಸೂರು, ಬೆಂಗಳೂರು ಉತ್ತರ, ಶಿವಮೊಗ್ಗ, ವಿಜಯಪುರ, ಉಡುಪಿ-ಚಿಕ್ಕಮಗಳೂರು ಮತ್ತು ದಾವಣಗೆರೆಗಳನ್ನು ಸಹ ಜೆಡಿಎಸ್ ಕೇಳುತ್ತಿದೆ.
ಚಾಮುಂಡೇಶ್ವರಿಯಲ್ಲಿ ಸೋತ ನಂತರ ಸಿದ್ದರಾಮಯ್ಯನವರು ಬಾದಾಮಿ ಕ್ಷೇತ್ರದತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಲೋಕಸಭೆ ಚುನಾವಣೆ ಮೈಸೂರು ಭಾಗದಲ್ಲಿ ಮತ್ತೊಮ್ಮೆ ತಮ್ಮ ಪ್ರಾಬಲ್ಯ ಮೆರೆಯಲು ಅವರಿಗೆ ಅವಕಾಶವಿದೆ. ಆದರೆ ಸದ್ಯದ ಮಟ್ಟಿಗೆ ಲೋಕಸಭೆ ಚುನಾವಣೆಯನ್ನು ರಾಷ್ಟ್ರಮಟ್ಟದಲ್ಲಿ ನೋಡುತ್ತಿರುವ ಕಾಂಗ್ರೆಸ್ ಹೈಕಮಾಂಡ್ ನಿಂದ ಸೀಟು ಹಂಚಿಕೆ ವಿಚಾರದಲ್ಲಿ ಜೆಡಿಎಸ್ ಗೆ ವರದಾನವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದರಿಂದ ಸಿದ್ದರಾಮಯ್ಯನವರ ರಾಜಕೀಯ ಜೀವನಕ್ಕೆ ಹಿನ್ನಡೆಯಾಗಬಹುದು. ಸಾಧ್ಯವಾದಷ್ಟು ಕ್ಷೇತ್ರದಲ್ಲಿ ಬಿಜೆಪಿಯನ್ನು ಸೋಲಿಸುವುದೇ ಕಾಂಗ್ರೆಸ್ ಹೈಮಾಂಡ್ ಗಿರುವ ಸದ್ಯದ ಗುರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


