ಬಿ ಎಸ್ ಯಡಿಯೂರಪ್ಪ ಸೇರಿ ನಾಲ್ವರ ವಿರುದ್ಧ ದೇವದುರ್ಗದಲ್ಲಿ ಕೇಸು ದಾಖಲು
ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರಿಗೆ ಮತ್ತೊಂದು ಹಿನ್ನಡೆಯಾಗಿದ್ದು, ರಾಯಚೂರು ಜಿಲ್ಲೆಯ...

ರಾಯಚೂರು/ ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರಿಗೆ ಮತ್ತೊಂದು ಹಿನ್ನಡೆಯಾಗಿದ್ದು, ರಾಯಚೂರು ಜಿಲ್ಲೆಯ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಆಪರೇಷನ್ ಆಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರು ದಾಖಲಾಗಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಯಡಿಯೂರಪ್ಪ ಹಾಗೂ ಶಾಸಕರಾದ ಪ್ರೀತಂ ಗೌಡ, ಕೆ ಶಿವನಗೌಡ ನಾಯಕ್ ಮತ್ತು ಮಾಜಿ ಪತ್ರಕರ್ತರೊಬ್ಬರ ವಿರುದ್ಧ ಗುರುಮಿಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಕಂದಕನೂರು ಅವರ ಪುತ್ರ ಶರಣಗೌಡ ಕಂಡಕೂರು ಎಫ್ಐಆರ್ ದಾಖಲು ಮಾಡಿದ್ದಾರೆ.
ತನ್ನ ತಂದೆಗೆ ಬಿಜೆಪಿ ಸೇರುವಂತೆ ಮನವೊಲಿಸುವಂತೆ 10 ಕೋಟಿ ರೂಪಾಯಿ ನೀಡುವುದಾಗಿ ಆಮಿಷವೊಡ್ಡಿ ಇಲ್ಲದಿದ್ದರೆ ನಿನ್ನ ರಾಜಕೀಯ ಜೀವನವನ್ನು ನಾಶ ಮಾಡುವುದಾಗಿ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೇವದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೊದಲ ಆರೋಪಿಯಾಗಿ ಬಿ ಎಸ್ ಯಡಿಯೂರಪ್ಪ, 2ನೇ ಆರೋಪಿ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ , 3ನೇ ಆರೋಪಿ ಹಾಸನ ಶಾಸಕ ಪ್ರೀತಂಗೌಡ ಮತ್ತು ಪತ್ರಕರ್ತ ಮರಮಕಲ್ ಎನ್ನುವರನ್ನು 4ನೇ ಆರೋಪಿಯನ್ನಾಗಿ ಮಾಡಲಾಗಿದೆ.
ಕಳೆದ ಫೆಬ್ರವರಿ 7ರಂದು ರಾತ್ರಿ ಶಾಸಕ ನಾಗನಗೌಡ ಕಂದಕನೂರು ಅವರ ಪುತ್ರ ಶರಣಗೌಡ ಅವರನ್ನು ದೇವದುರ್ಗ ಪ್ರವಾಸಿ ಮಂದರಕ್ಕೆ ಕರೆಸಿಕೊಂಡು ಬಿಜೆಪಿಗೆ ಬರುವಂತೆ ಹಣದ ಆಮಿಷವೊಡ್ಡಿದ್ದರು. ಈ ಸಂದರ್ಭದಲ್ಲಿ ಆಡಿಯೊ ಮಾಡಲಾಗಿದ್ದು, ಆಡಿಯೋವನ್ನು ಸ್ವತಃ ಶರಣಗೌಡ ಅವರೇ ಸಿಎಂ ಕುಮಾರಸ್ವಾಮಿಗೆ ತಲುಪಿಸಿ ಅವರಿಂದ ಬಹಿರಂಗಗೊಳಿಸಿದ್ದರು. ಈ ಆಡಿಯೋದಲ್ಲಿ ಸ್ಪೀಕರ್ ಗೂ ಹಣದ ಆಮಿಷ ನೀಡಲಾಗಿದೆ ಎಂಬ ಮಾಹಿತಿ ಹೊರಬಿದ್ದು ಸದನದಲ್ಲಿ ಕಳೆದ ಮೂರು ದಿನಗಳಿಂದ ತೀವ್ರ ಗದ್ದಲ ಏರ್ಪಟ್ಟಿತ್ತು.
ಆಡಿಯೊ ತನಿಖೆಯನ್ನು ಎಸ್ಐಟಿಗೆ ವಹಿಸುವಂತೆ ಸ್ಪೀಕರ್ ರಮೇಶ್ ಕುಮಾರ್ ಸಿಎಂ ಕುಮಾರಸ್ವಾಮಿಗೆ ಸೂಚಿಸಿದ್ದಾರೆ. ಆದ್ರೆ ಎಸ್ಐಟಿ ತನಿಖೆ ಬೇಡ ಎಂದು ರಾಜ್ಯ ಬಿಜೆಪಿ ಪಟ್ಟು ಹಿಡಿದಿದೆ. ಈ ಸಂಬಂಧ ಒಮ್ಮತಕ್ಕೆ ಬರಲು ನಿನ್ನೆ ಸ್ಪೀಕರ್ ಕರೆದಿದ್ದ ಸಭೆ ಕೂಡ ವಿಫಲವಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


