ಪಶ್ಚಿಮ ಬಂಗಾಳ ಸ್ಥಿತಿ ತುರ್ತು ಪರಿಸ್ಥಿತಿಯನ್ನು ಹೋಲುತ್ತಿದೆ: ಮಮತಾ ಬೆಂಬಲಕ್ಕೆ ನಿಂತ ದೇವೇಗೌಡ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೆಂಬಲಕ್ಕೆ ನಿಂತಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು, ಬಂಗಾಳದ...

Published On :
ಬೆಂಗಳೂರು: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೆಂಬಲಕ್ಕೆ ನಿಂತಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು, ಬಂಗಾಳದ ಸ್ಥಿತಿಯನ್ನು ತುರ್ತು ಪರಿಸ್ಥಿತಿಗೆ ಹೋಲಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ಅಧಿಕಾರಿಗಳನ್ನು ಸಿಬಿಐ ಬಂಧಿಸಲು ಮುಂದಾಗುವ ಮೂಲಕ ಪ್ರಾದೇಶಿಕ ಪಕ್ಷಗಳಿಗೆ ಕೇಂದ್ರ ಬಿಜೆಪಿ ಸರ್ಕಾರ ಎಚ್ಚರಿಕೆ ನೀಡಿದೆ. ಮೋದಿ ವಿರುದ್ಧದ ಅಲೆಗಳನ್ನು ಒಟ್ಟುಗೂಡಿಸಲು ಸಾಧ್ಯವಿಲ್ಲ ಎಂಬ ಸಂದೇಶ ಸಾರಿದೆ.
ಪಶ್ಚಿಮ ಬಂಗಾಳದಲ್ಲಿನ ಬೆಳವಣಿಗೆಗಳು ಇಂದು ದೇವೇಗೌಡರ ಪದ್ಮನಾಭ ನಗರ ನಿವಾಸದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಒಂದುವೇಳೆ ಮುಂದಿನ ದಿನಗಳಲ್ಲಿ ಜೆಡಿಎಸ್ ಮೇಲೆ ಕೇಂದ್ರ ಸಿಬಿಐ ಅಸ್ತ್ರ ಉಪಯೋಗಿಸಿದರೆ ಏನುಮಾಡಬಹುದು.? ಹೇಗೆ ಎಚ್ಚೆತ್ತುಕೊಂಡಿರಬೇಕು. ಮಮತಾ ಬ್ಯಾನರ್ಜಿಗೆ ಬಲ ತುಂಬುವುದು ಹೇಗೆ ಎಂಬ ಕುರಿತು ಸಮಾಲೋಚನೆ ನಡೆಸಲಾಗಿದೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ಸಿಬಿಐ ಅಧಿಕಾರಿಗಳಿಂದ ಪೊಲೀಸರ ಬಂಧನ ಒಕ್ಕೂಟ ವ್ಯವಸ್ಥೆಗೆ ಮಾಡಿದ ಅವಮಾನ. ಶಾರದಾ ಚಿಟ್ ಫಂಡ್ ಹಗರಣ ಸಂಬಂಧ ತನಿಖೆಗೆ ಅವಕಾಶ ಕೊಟ್ಟಿಲ್ಲವೆಂದು ಸುಪ್ರಿಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಕೋರ್ಟ್ ದಾಖಲೆ ಕೊಡುವಂತೆ ಹೇಳಿದೆ. ಕೇಂದ್ರ ಬಿಜೆಪಿ, ಸಿಬಿಐ ಅನ್ನು ಕಳೆದ 4 ವರ್ಷದಿಂದ ದುರುಪಯೋಗ ಪಡಿಸಿಕೊಳ್ಳುತ್ತಾ ಬಂದಿದೆ. ಮೋದಿ ವಿರುದ್ಧ ಒಂದಾಗುತ್ತಿರುವ ಪ್ರಾದೇಶಿಕ ಪಕ್ಷಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಸ್ಥಳೀಯವಾಗಿ ದೊಡ್ಡ ನಾಯಕರಿದ್ದಾರೆ. ಆದರೆ ಕಾಂಗ್ರೆಸ್ ಸಹಕಾರವಿಲ್ಲದೇ ಕೇಂದ್ರದಲ್ಲಿ ಪ್ರಾದೇಶಿಕ ಸರ್ಕಾರಗಳು ರಚನೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಸಿಬಿಐ ಮೂಲಕ ದೇವೇಗೌಡರನ್ನು ಮುಟ್ಟುವ ದುಸ್ಸಾಹಸ ಮಾಡುತ್ತಿಲ್ಲ. ತಮಗೆ ವಯಸ್ಸಾಗಿದ್ದು, ಪ್ರಭಾವಿಯಲ್ಲ. ಆದರೂ ಕೂಡ ಕೇಂದ್ರ ಬಿಜೆಪಿ ತಮ್ಮನ್ನು ಮುಟ್ಟಲು ಹೆದರುತ್ತಿದೆ ಎಂದರು.
ಜನವರಿ 21 ರಂದು ಪಶ್ಚಿಮಬಂಗಾಳದಲ್ಲಿ ನಡೆದ ಸಮಾವೇಶದಲ್ಲಿ ಮಮತಾ ಜೊತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವೇದಿಕೆ ಹಂಚಿಕೊಂಡಿದ್ದು, ಆ ಮೂಲಕ ಬಿಜೆಪಿ ವಿರುದ್ಧ ಒಕ್ಕೂಟ ವ್ಯವಸ್ಥೆಯ ಬಲ ಪ್ರದರ್ಶಿಸಲಾಗಿತ್ತು. ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುವಂತೆ ಬಿಜೆಪಿ ತಂತ್ರರೂಪಿಸುತ್ತಿದ್ದು, ಕಾನೂನು ಸುವ್ಯವಸ್ಥೆಯಲ್ಲಿ ಅರಾಜಕತೆ ಸೃಷ್ಟಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಪಶ್ಚಿಮ ಬಂಗಾಳದಲ್ಲಿನ ರಾಜಕೀಯ ಬೆಳವಣಿಗೆಗಳ ಕುರಿತು ದೇವೇಗೌಡ ಮತ್ತು ಕುಮಾರಸ್ವಾಮಿ ಗಹನವಾದ ಚರ್ಚೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


