ಶಾನುಭೋಗರ ಮಾತು ಕೇಳಿದ್ದರೆ ಮುಖ್ಯಮಂತ್ರಿ ಆಗುತ್ತಿರಲಿಲ್ಲ: ಸಿದ್ದರಾಮಯ್ಯ
ನಮ್ಮೂರಿನ ಶಾನುಭೋಗರು ಹೇಳಿದ್ದನ್ನು ಕೇಳಿ ಹೆದರಿ ಓದದೆ ಇರುತ್ತಿದ್ದರೆ ಮುಖ್ಯಮಂತ್ರಿಯಾಗುತ್ತಿರಲಿಲ್ಲ ...

Published On :
ಮೈಸೂರು; ನಮ್ಮೂರಿನ ಶಾನುಭೋಗರು ಹೇಳಿದ್ದನ್ನು ಕೇಳಿ ಹೆದರಿ ಓದದೆ ಇರುತ್ತಿದ್ದರೆ ಮುಖ್ಯಮಂತ್ರಿಯಾಗುತ್ತಿರಲಿಲ್ಲ ಎಂದು ಹೇಳಿದ್ದು ಬೇರೆ ಯಾರೂ ಅಲ್ಲ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.
ನಿನ್ನೆ ಸುತ್ತೂರು ಮಠದ ಭಜನಾ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿದ್ದರಾಮಯ್ಯ ತಮ್ಮ ಹಳೆಯ ಕಲಿಕೆ ದಿನವನ್ನು ಮೆಲುಕು ಹಾಕಿದರು. ಕುರುಬರೆಲ್ಲಾ ವಕೀಲಿಕೆ ಓದಲು ಆಗುತ್ತಾ ಎಂದು ನನ್ನ ತಂದೆಗೆ ಊರಿನ ಶಾನುಭೋಗರು ಹೆದರಿಸಿದ್ದರು. ಆದರೆ ನಾನು ಹಠ ಹಿಡಿದು ಪಂಚಾಯತಿ ಸೇರಿ ವಕೀಲಿಕೆ ಓದಿದೆ. ಅದರಿಂದಾಗಿ ಇಂದು ಸಮಾಜದಲ್ಲಿ ಸಿಎಂ ಹುದ್ದೆ ವಹಿಸಿದ್ದು ಸೇರಿದಂತೆ ಇಂದು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದೇನೆ ಎಂದರು.
ನಮ್ಮಪ್ಪ ನಮ್ಮೂರಿನ ಶಾನುಬೋಗರ ಮಾತನ್ನು ತಪ್ಪದೇ ಕೇಳುತ್ತಿದ್ದರು. ನಾನು ಲಾಯರ್ ಓದಬೇಕೆಂದಾಗ ಅಪ್ಪ ಆ ಶಾನುಬೋಗರ ಸಲಹೆ ಕೇಳಿದರು. ಹೇ ಕುರುಬರು ಲಾಯರ್ ಓದಲು ಆಗುತ್ತಾ.. ಬೇಡ… ಲಾಯರ್ಗಿರಿ ಏನಿದ್ರೂ ಬ್ರಾಹ್ಮಣರ ಕೆಲಸ" ಎಂದು ಶಾನುಬೋಗರು ನಮ್ಮಪ್ಪನಿಗೆ ಹೇಳಿ ಕಳುಹಿಸಿದರು. ಆ ಮಾತು ಕೇಳಿದ ನಮ್ಮಪ್ಪ ನಾನು ಲಾಯರ್ ಓದೋದು ಬೇಡ ಎಂದಿದ್ದರು. "ಲಾಯರ್ ಓದಿಸಿಲ್ಲವೆಂದರೆ ಪಾಲು ಕೊಟ್ಟುಬಿಡು ಎಂದು ಮನೆಯಲ್ಲಿ ಗಲಾಟೆ ಮಾಡಿದೆ. ಊರಿನಲ್ಲಿ ಪಂಚಾಯಿತಿ ಸೇರಿಸಿದ ನಂತರ ಲಾಯರ್ ಓದಲು ಅನುಮತಿ ಸಿಕ್ಕಿತು,” ಎಂದು ಸಿದ್ದರಾಮಯ್ಯ ತಮ್ಮ ಲಾಯರ್ ಓದಿನ ಹಿಂದಿನ ಕಥೆಯನ್ನು ಬಿಚ್ಚಿಟ್ಟರು.
ಆ ಶಾನುಬೋಗರ ಮಾತು ಕೇಳಿದ್ದರೆ ನಾನು ಸಿಎಂ ಆಗುತ್ತಿದ್ದೆನಾ? ಲಾಯರ್ ಮಾಡಿದ್ದಕ್ಕೆ ನಾನು ಮುಖ್ಯಮಂತ್ರಿಯಾದೆ. “ಈ ಜನ್ಮದಲ್ಲಿ ಹಾಗಾಗಿದ್ದೆ. ಆ ಜನ್ಮದಲ್ಲಿ ಹೀಗಾಗಿದ್ದೆ ಎಂಬ ಕರ್ಮದ ಮಾತುಗಳನ್ನ ನಂಬಲೇಬೇಡಿ. ಅದೊಂದು ದೊಡ್ಡ ಸುಳ್ಳಿನ ಬಂಕಾ. ಪಾಪ ಮಾಡಿದರೆ ಕುರಿ, ಕೋಳಿ, ನಾಯಿ ಆಗುತ್ತಾರೆಂಬುದೆಲ್ಲಾ ಸುಳ್ಳು. ನಾನಂತೂ ಕರ್ಮವನ್ನು
ನಂಬೊಲ್ಲ. ನೀವೂ ನಂಬಬೇಡಿ,” ಎಂದು ಜನರಿಗೆ ಸಿದ್ದರಾಮಯ್ಯ ಕಿವಿಮಾತು ಹೇಳಿದರು.
ಮೈಸೂರಿನ ಜನತೆಗೆ ಸಾಕಷ್ಟು ಕೆಲಸ ಮಾಡಿದರೂ ಕೂಡ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತೆ. ದೂರದ ಬಾದಾಮಿ ಜನರು ಕೈಹಿಡಿದರು. ಇಲ್ಲಿ ವರುಣಾ ಕ್ಷೇತ್ರದಲ್ಲಿ ನಿಲ್ಲುತ್ತಿದ್ದರೆ ಜನ ಆಶೀರ್ವಾದ ಮಾಡುತ್ತಿದ್ದರು ಎಂದರು.
ನಾನು ಪ್ರತಿ ಬಾರಿಯೂ ಸುತ್ತೂರು ಜಾತ್ರೆಗೆ ಬರುತ್ತೇನೆ. ಇದು ನನ್ನ ವರುಣಾ ಕ್ಷೇತ್ರದಲ್ಲೇ ಇದೆ. ಇಲ್ಲಿ ನನ್ನ ಮಗ ಶಾಸಕನಾಗಿದ್ದಾನೆ. ಇಲ್ಲಿನ ಜನರು ನಾನು ಪಡೆದದ್ದಕ್ಕಿಂತಲೂ ಜಾಸ್ತಿ ಬಹುಮತದಿಂದ ಅವರನನ್ನು ಗೆಲ್ಲಿಸಿದ್ದಾರೆ. ಹೀಗಾಗಿ, ಸುತ್ತೂರು ಮಠದ ಮೇಲೆ ಅಪಾರ ಗೌರವ ಇದೆ. ಹಾಗೂ ವರುಣಾ ಕ್ಷೇತ್ರದ ಜನತೆಗೆ ಮಗನನ್ನು ಗೆಲ್ಲಿಸಿ ಶಾಸಕ ಮಾಡಿದ್ದಕ್ಕೆ ಧನ್ಯವಾದ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


