ರಾಜಕೀಯ

ಬಾಗಲಕೋಟೆ:  ಸ್ಪಷ್ಟ ಬಹುತವಿದ್ದರೂ ಜಿಪಂನಲ್ಲಿ ಮಕಾಡೆ ಮಲಗಿದ ಬಿಜೆಪಿ!

ಜಿಲ್ಲಾ ಪಂಚಾಯಿತಿ ನಾನಾ ಸ್ಥಾಯಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತಹೊಂದಿದ್ದರೂ ಒಂದೇ ಒಂದು ಸ್ಥಾನವನ್ನು ಗೆಲ್ಲಲಾಗದೇ ಕಾಂಗ್ರೆಸ್ ಮುಂದೆ ಮಕಾಡೆ ಮಲಗಿದೆ.

ಬಾಗಲಕೋಟೆ:  ಸ್ಪಷ್ಟ ಬಹುತವಿದ್ದರೂ ಜಿಪಂನಲ್ಲಿ ಮಕಾಡೆ ಮಲಗಿದ ಬಿಜೆಪಿ!
ಸಾಂದರ್ಭಿಕ ಚಿತ್ರ
Published On :

ಬಾಗಲಕೋಟೆ: ಜಿಲ್ಲಾ ಪಂಚಾಯಿತಿ ನಾನಾ ಸ್ಥಾಯಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತಹೊಂದಿದ್ದರೂ ಒಂದೇ ಒಂದು ಸ್ಥಾನವನ್ನು ಗೆಲ್ಲಲಾಗದೇ ಕಾಂಗ್ರೆಸ್ ಮುಂದೆ ಮಕಾಡೆ ಮಲಗಿದೆ.

ಬಾಗಲಕೋಟೆ ಜಿಲ್ಲಾ ಪಂಚಾಯಿತಿಯ ಒಟ್ಟು ೩೬ ಜನ ಜಿಪಂ. ಸದಸ್ಯರಲ್ಲಿ ಬಿಜೆಪಿ ೧೮, ಕಾಂಗ್ರೆಸ್ ೧೭ ಮತ್ತು ಒಬ್ಬರು ಪಕ್ಷೇತರರ ಸದಸ್ಯರನ್ನು ಹೊಂದಿವೆ. ಬಿಜೆಪಿ ೧೮ ಜನ ಸದಸ್ಯರ ಜತೆಗೆ ಐವರು ಶಾಸಕರು, ಒಬ್ಬರು ಮೇಲ್ಮನೆ ಸದಸ್ಯರು, ಮೂವರು ತಾಪಂ. ಅಧ್ಯಕ್ಷರನ್ನು ಹೊಂದಿದೆ. 

ಇಷ್ಟಾದರೂ ಜಿಲ್ಲಾ ಪಂಚಾಯಿತಿಯ ನಾನಾ ಸ್ಥಾಯಿ ಸಮಿತಿಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲ ಐದೂ ಸ್ಥಾಯಿ ಸಮಿತಿಗಳು ಕಾಂಗ್ರೆಸ್ ಪಾಲಾಗಿರುವುದು ಜಿಲ್ಲಾ ಬಿಜೆಪಿಯಲ್ಲಿ ದಯನೀಯ ಸ್ಥಿತಿಗೆ ಸಾಕ್ಷಿಯಂತಾಗಿದೆ.

ಜಿಪಂ. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಜಿಪಂ.ನಲ್ಲಿ ಪಕ್ಷದ ಅಧಿಕಾರವನ್ನು ಸ್ಥಾಪಿಸಲು ಮುಂದಾಗಬೇಕಿತ್ತೋ ಅವರೆಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ತಾವೂ ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಹಜವಾಗಿಯೇ ಗೆಲುವಿನ ದಾಖಲೆ ಸ್ಥಾಪಿಸಿತು. 

ಜಿಲ್ಲೆಯಲ್ಲಿ ಬಿಜೆಪಿಯ ಐವರು ಶಾಸಕರು ಇದ್ದಾರೆ. ಅವರೆಲ್ಲ  ಚುನಾವಣೆ ಪ್ರಕ್ರಿಯೆಯಿಂದ ದೂರ ಸರಿದ ಪರಿಣಾಮ ಬಿಜೆಪಿ ಜಿಪಂ. ಸದಸ್ಯರು ತಮಗಿಷ್ಟ ಬಂದಂತೆ ನಡೆದುಕೊಂಡರು. ಇದರಿಂದಾಗಿ ಸಂಖ್ಯಾ ಬಲದ ಕೊರತೆಯ ಮಧ್ಯೆಯೂ ಕಾಂಗ್ರೆಸ್ ಜಿಪಂ.ನಲ್ಲಿ ತನ್ನ ಪಾರುಪತ್ಯವನ್ನು ಮುಂದುವರಿಸಲು ಅನುಕೂಲವಾಯಿತು.

ಜಿಪಂ. ಸ್ಥಾಯಿ ಸಮಿತಿಗಳಿಗೆ ನಡೆದ ಚುನಾವಣೆ ಫಲಿತಾಂಶದ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ಯಾವ ಸ್ಥತಿ ತಲುಪಿದೆ ಎನ್ನುವುದು ಮೇಲ್ನೋಟಕ್ಕೆ ಕಾಣಿಸಲಾರಂಭಿಸಿದೆ. ಸಚಿವರು, ಶಾಸಕರು ಹಾಗೂ ಮುಖಂಡರ ನಡುವಿನ ಹೊಂದಾಣಿಕೆ ಕೊರತೆ, ಅಭಿಪ್ರಾಯ ಬೇಧಗಳ ಪರಿಣಾಮ ಜಿಲ್ಲಾ ಪಂಚಾಯಿತಿ ಬಿಜೆಪಿ ಕೈ ತಪ್ಪುತ್ತಿದೆ. ಬಿಜೆಪಿ ಮುಖಂಡರ ಈ ನಡೆ ಆ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿರುವುದಂತೂ ನಿಜ. 

ಜಿಲ್ಲೆಯವರೇ ಆದ ಮುಧೋಳ ಕ್ಷೇತ್ರದ ಶಾಸಕ ಗೋವಿಂದ ಕಾರಜೋಳ ರಾಜ್ಯ ರಾಜಕಾರಣದಲ್ಲಿ ತಲ್ಲೀಣರಾಗಿದ್ದಾರೆ. ಹಾಗಾಗಿ ಅವರು ಈ ಕಡೆ ತಲೆ ಹಾಕಿದಂತೆ ಕಾಣಿಸಲಿಲ್ಲ. ಇನ್ನು ಬೀಳಗಿ ಶಾಸಕ ಮುರುಗೇಶ ನಿರಾಣಿ ಕೂಡ ವಿಸ್ತರಣೆಗೊಳ್ಳಲಿರುವ ರಾಜ್ಯ ಸಂಪುಟದಲ್ಲಿ ಸೇರ್ಪಡೆಗೊಳ್ಳಬೇಕು ಎನ್ನುವ ಪ್ರಯತ್ನದಲ್ಲಿ ಬ್ಯೂಸಿ ಆಗಿದ್ದಾರೆ. ಉಳಿದವರೆಲ್ಲ ತಮಗೆ ಏಕೆ ಉಸಾಬರಿ ಎನ್ನುವ ಧೋರಣೆಗೆ ಜೋತು ಬಿದ್ದ ಪರಿಣಾಮ ಮತ್ತೊಮ್ಮೆ ಜಿಪಂ. ಅಧಿಕಾರ ವಶ ಪಡಿಸಿಕೊಳ್ಳುವಲ್ಲಿ ಬಿಜೆಪಿ ಎಡವಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಶಾಸಕರುಗಳ ನಿರಾಸಕ್ತಿಯಿಂದಾಗಿ ಬಾಗಲಕೋಟೆ ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ ಬಲವಿದ್ದರೂ ಬಲಹೀನವಾದ ಪರಿಣಾಮ ಅದರ ಲಾಭವನ್ನು ಕಾಂಗ್ರೆಸ್ ಪಡೆದುಕೊಳ್ಳುತ್ತ ಹೊರಟಿದೆ. ಬಿಜೆಪಿ ಶಾಸಕರ ನಿರಾಸಕ್ತಿ ಹೀಗೆ ಮುಂದುವರಿದಲ್ಲಿ ಅದು ಮುಂದಿನ ಸಾಲು ಸಾಲು ಚುನಾವಣೆಗಳ ಮೇಲೆ ಉಲ್ಟಾ ಪರಿಣಾಮ ಬೀರಲಿದೆ ಎನ್ನುವ ಮಾತುಗಳು ಬಿಜೆಪಿ ಪಾಳೆಯದಿಂದಲೇ ಕೇಳಿ ಬರುತ್ತಿವೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರ ಗಟ್ಟಿಗೊಳಿಸುವ ಪ್ರಯತ್ನದಲ್ಲಿದ್ದರೆ, ಜಿಲ್ಲೆಯಲ್ಲಿ ಅದಕ್ಕೆ ವ್ಯತಿರಿಕ್ತ  ಎನ್ನುವಂತಹ ಬೆಳವಣಿಗೆಗಳು ನಡೆಯುತ್ತಿವೆ.

ವಿಠ್ಠಲ ಆರ್. ಬಲಕುಂದಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.