ಸ್ಥಿರ ಸರ್ಕಾರಕ್ಕಾಗಿ ಇತರರನ್ನು ಅವಲಂಬಿಸುವ ಸಂಕಷ್ಟ ತಪ್ಪಿಸಲು 15 ಸ್ಥಾನ ಗೆಲ್ಲಿಸಿ: ಯಡಿಯೂರಪ್ಪ ಮನವಿ
ಸ್ಥಿರ ಸರ್ಕಾರಕ್ಕಾಗಿ ಇತರರನ್ನು ಅವಲಂಬಿಸುವ ಸಂಕಷ್ಟ ತಪ್ಪಿಸಲು 15 ಸ್ಥಾನ ಗೆಲ್ಲಿಸಿ ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ.

ಕಾಗವಾಡ: ಸ್ಥಿರ ಸರ್ಕಾರಕ್ಕಾಗಿ ಇತರರನ್ನು ಅವಲಂಬಿಸುವ ಸಂಕಷ್ಟ ತಪ್ಪಿಸಲು 15 ಸ್ಥಾನ ಗೆಲ್ಲಿಸಿ ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ.
ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಸ್ಪಷ್ಟ ಬಹುಮತ ಇರಲಿಲ್ಲ. ಹಾಗಾಗಿ ಇತರರನ್ನು ಅವಲಂಬಿಸುವ ಸಂಕಷ್ಟ ಬಂದಿತ್ತು. ಆದರೆ ಈ ಬಾರಿ ಉಪ ಚುನಾವಣೆಯಲ್ಲಿ ಸ್ಪಷ್ಟ ಜನಾದೇಶ ನೀಡುವ ಮೂಲಕ ಸ್ಥಿರ ಸರ್ಕಾರ ನೀಡಲು ಮತದಾರರು ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಕಾಗವಾಡದ ಕ್ಷೇತ್ರದ ಕೆಂಪವಾಡದಲ್ಲಿ ಮಾತನಾಡಿದ ಅವರು, ಎರಡು ದಿನ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೇನೆ. ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹಳ ಸಂತೋಷದಿಂದ ಕ್ಷೇತ್ರದಿಂದ ಹೊರಡುತ್ತಿದ್ದೇನೆ. ಎಲ್ಲ ಕ್ಷೇತ್ರಗಳ ಬಗ್ಗೆ ವರದಿ ತರಿಸಿಕೊಂಡಿದ್ದು, ಎಲ್ಲವೂ ಸಕಾರಾತ್ಮಕವಾಗಿದೆ, ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲಿದೆ ಎಂದರು.
ನಿನ್ನೆ ಈ ಕ್ಷೇತ್ರದಲ್ಲಿ ಸಿಕ್ಕಿದ ಜನಬೆಂಬಲ ನೋಡಿ ಆಶ್ಚರ್ಯ ಆಗಿದೆ. ಮಳೆಯ ನಡುವೆಯೂ ಜನ ಸೇರಿದ್ದು ಬಿಜೆಪಿಯನ್ನು ಬೆಂಬಲಿಸುವ ಸೂಚನೆ ನೀಡಿದೆ. ಎಲ್ಲ ಸಮುದಾಯದ ಮುಖಂಡರ ಜೊತೆ ಚರ್ಚೆ ಮಾಡಿದ್ದು ಇವೆಲ್ಲವನ್ನು ನೋಡುವಾಗ ಬಿಜೆಪಿ ಅಭ್ಯರ್ಥಿ 25 ಸಾವಿರ ಮತಗಳ ಅಂತರದಿಂದ ಗೆಲ್ಲುವ ಸಾಧ್ಯತೆ ಇದೆ ಎಂದರು.
'ಈ ಸರ್ಕಾರ ಪೂರ್ಣಾವಧಿವರೆಗೆ ನಡೆಯಬೇಕಾದರೆ ನನ್ನ ವೀರಶೈವ-ಲಿಂಗಾಯತ ಸಮುದಾಯದವರ ಒಂದೂ ಮತ ಬೇರೆ ಪಕ್ಷಗಳಿಗೆ ಹೋಗಬಾರದು. ಯಾವುದೇ ವ್ಯಾಮೋಹಕ್ಕೆ ಬಲಿಯಾಗದೇ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಬೇಕು. ರಮೇಶ್ ಜಾರಕಿಹೊಳಿ ಅವರು 16 ಜನ ಅನರ್ಹ ಶಾಸಕರನ್ನು ಕಟ್ಟಿಕೊಂಡು ಹೋರಾಟ ಮಾಡದಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಜಗದೀಶ್ ಶೆಟ್ಟರ್, ಶಶಿಕಲಾ ಜೊಲ್ಲೆ ಅವರು ವಿಧಾನಸೌಧದ 3ನೇ ಮಹಡಿಯಲ್ಲಿ ಕೂರಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ನಾವು ಜೀವನ ಪರ್ಯಂತ ಮರೆಯಲು ಸಾಧ್ಯವಿಲ್ಲ. ಅವರನ್ನು ಗೆಲ್ಲಿಸುವ ಮೂಲಕ ಋಣ ತೀರಿಸಬೇಕಾಗಿದೆ ಎಂದು ಹೇಳಿದರು.
ಅಂತೆಯೇ ನನ್ನ ವೀರಶೈವ-ಲಿಂಗಾಯತ ಸಮುದಾಯದವರ ಒಂದೂ ಮತ ಬೇರೆ ಪಕ್ಷಗಳಿಗೆ ಹೋಗಬಾರದು ಎಂದು ಹೇಳಿರುವ ಯಡಿಯೂರಪ್ಪ ಒಂದು ಸಮುದಾಯದ ಓಲೈಕೆ ಮಾಡಿದ್ದಾರೆ ಎಂದು ಪ್ರತಿಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದವು. ದೂರಿನ ಅನ್ವಯ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ಗೋಕಾಕ್ ಸೇರಿದಂತೆ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಡಿಸೆಂಬರ್ 5ರಂದು ಉಪ ಚುನಾವಣೆ ನಡೆಯಲಿದ್ದು, ಡಿಸೆಂಬರ್ 9ರಂದು ಫಲಿತಾಂಶ ಪ್ರಕಟವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


