ಕಾಂಗ್ರೆಸ್ ಗೆ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಚಿಂತೆ; ಬಿಜೆಪಿಯದ್ದು ಕಾದು ನೋಡುವ ತಂತ್ರ
ಕಾಂಗ್ರೆಸ್ ನಾಯಕರು ತಮ್ಮ ಶಾಸಕರನ್ನು ಬಿಜೆಪಿಗೆ ಹೋಗದಂತೆ ಹಿಡಿದಿಟ್ಟುಕೊಳ್ಳುವಲ್ಲಿ ...

ಬೆಂಗಳೂರು: ಕಾಂಗ್ರೆಸ್ ನಾಯಕರು ತಮ್ಮ ಶಾಸಕರನ್ನು ಬಿಜೆಪಿಗೆ ಹೋಗದಂತೆ ಹಿಡಿದಿಟ್ಟುಕೊಳ್ಳುವಲ್ಲಿ ನಿರತರಾಗಿದ್ದರೆ ಸದ್ಯದ ಮಟ್ಟಿಗೆ ಕಾದು ನೋಡುವ ತಂತ್ರ ಅನುಸರಿಸುವುದಾಗಿ ಬಿಜೆಪಿ ಹೇಳುತ್ತಿದೆ. ಕಾಂಗ್ರೆಸ್ ನಲ್ಲಿನ ಆಂತರಿಕ ಬಿಕ್ಕಟ್ಟು ಕೆಲವು ಶಾಸಕರ ರಾಜೀನಾಮೆಯೊಂದಿಗೆ ಅಂತ್ಯವಾದರೆ ಆಗ ಏನು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಇನ್ನೊಂದೆಡೆ ಸಿದ್ದತೆ ಮಾಡಿಕೊಳ್ಳುತ್ತಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಾಳೆ ಪಕ್ಷದ ಶಾಸಕರ ಸಭೆ ನಡೆಯಲಿದೆ. ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ರಾಷ್ಟ್ರ ನಾಯಕರಿಗೆ ಬಿಜೆಪಿ ನಾಯಕರು ವಿವರಿಸುತ್ತಿದ್ದು, ಮೈತ್ರಿ ಸರ್ಕಾರದ ಆಂತರಿಕ ಸಮಸ್ಯೆಯಿಂದ ಸರ್ಕಾರ ಬಿದ್ದು ಹೋದರೆ ಮಾತ್ರ ಮುಂದಿನ ಕ್ರಮ ಕೈಗೊಳ್ಳಿ ಎಂದು ಬಿಜೆಪಿಯ ದೆಹಲಿ ನಾಯಕರು ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಸರ್ಕಾರವನ್ನು ಅಸ್ಥಿರಗೊಳಿಸಲು ನೀವಾಗಿಯೇ ಯಾವ ಪ್ರಯತ್ನವನ್ನೂ ಮಾಡಬೇಡಿ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ನ ಆಂತರಿಕ ಭಿನ್ನಮತವನ್ನು ಬಿಜೆಪಿ ಹೇಗೆ ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತದೆ ಎನ್ನುವುದು ಈಗಿರುವ ಕುತೂಹಲ.
ತಮ್ಮ ಶಾಸಕರಿಗೆ ಆಮಿಷವೊಡ್ಡಿ ಸೆಳೆದು ಸರ್ಕಾರವನ್ನು ಬೀಳಿಸಲು ಬಿ ಎಸ್ ಯಡಿಯೂರಪ್ಪನವರು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಕಾಂಗ್ರೆಸ್ ಆರೋಪವನ್ನು ನಿರಾಕರಿಸಿರುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ರವಿ ಕುಮಾರ್, ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಬಿಜೆಪಿ ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಿದೆ. ಹತಾಶೆಯಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ನವರು ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ, ಬಿಜೆಪಿ ವಿರುದ್ಧ ಆಧಾರರಹಿತ ಹೇಳಿಕೆಗಳನ್ನು ಕೊಟ್ಟು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಕೂಡ ತಮ್ಮ ಸ್ಥಾನಕ್ಕೆ ಅಗೌರವ ತಂದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಮುಖ್ಯಮಂತ್ರಿಯವರು ಹೇಳಿದಂತೆ ಬಿಜೆಪಿಯ ಯಾವ ಶಾಸಕರು ಕೂಡ ಜೆಡಿಎಸ್ ಗೆ ಸೇರುವ ಯೋಚನೆ ಮಾಡಿಲ್ಲ ಎಂದಿದ್ದಾರೆ.ನಾವು ಕಾದು ನೋಡುವ ತಂತ್ರ ಅನುಸರಿಸುತ್ತೇವೆ, ಕಳೆದ ತಿಂಗಳು ದೆಹಲಿಯಲ್ಲಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಮುಗಿದ ನಂತರ ಪಕ್ಷದಲ್ಲಿನ ರಾಜಕೀಯ ಬೆಳವಣಿಗೆಗಳನ್ನು ಚರ್ಚಿಸಲು ನಾಳೆಯ ಸಭೆ ಕರೆಯಲಾಗಿದೆ ಎಂದು ರವಿ ಕುಮಾರ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


