ನನಗೆ ಯಾವ ನೊಟೀಸ್ ಬಂದಿಲ್ಲ, ನಾನು ಯಾವ ತಪ್ಪೂ ಮಾಡಿಲ್ಲ, ಹೆದರಿ ಓಡಿಹೋಗುವುದಿಲ್ಲ; ಡಿ ಕೆ ಶಿವಕುಮಾರ್
ತನಿಖಾ ಸಂಸ್ಥೆಯಿಂದ ನನಗೆ ಯಾವುದೇ ನೊಟೀಸ್ ಬಂದಿಲ್ಲ, ನಾನು ನಾಳೆ ಮುಖ್ಯಮಂತ್ರಿ ಹೆಚ್ ಡಿ...

ಬೆಂಗಳೂರು: ತನಿಖಾ ಸಂಸ್ಥೆಯಿಂದ ನನಗೆ ಯಾವುದೇ ನೊಟೀಸ್ ಬಂದಿಲ್ಲ, ನಾನು ನಾಳೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ ಜೊತೆ ಪ್ರಧಾನಿಯವರನ್ನು ಭೇಟಿ ಮಾಡಲು ನಿಯೋಗದೊಂದಿಗೆ ದೆಹಲಿಗೆ ಹೋಗುತ್ತಿದ್ದೇನೆ ಎಂದು ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿ, ಸಿಬಿಐ, ಜಾರಿ ನಿರ್ದೇಶನಾಲಯ ಅಥವಾ ಬೇರಾವ ತನಿಖಾ ಸಂಸ್ಥೆಗಳಿಂದಲೂ ನನಗೆ ನೊಟೀಸ್ ಬಂದಿಲ್ಲ, ನನಗೆ ಯಾವ ಭಯವೂ ಇಲ್ಲ, ಕಾನೂನಾತ್ಮಕವಾಗಿ ನಾನು ಯಾವುದೇ ತನಿಖೆಗೂ ಸಿದ್ಧ, ನನಗೆ ನೋಟಿಸ್ ನೀಡಿದರೆ ತನಿಖಾ ಸಂಸ್ಥೆಗಳಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಆದಾಯ ತೆರಿಗೆ ಇಲಾಖೆಯವರು ನನ್ನನ್ನು ಕರೆದಿದ್ದರು ಎಂದು ಹೇಳಿದ್ದಾರೆ.
ಅಕ್ರಮವಾಗಿ ನಾನು ಯಾವುದೇ ಆಸ್ತಿಪಾಸ್ತಿ, ಹಣವನ್ನು ಹೊಂದಿಲ್ಲ, ವಿದೇಶದಲ್ಲಿ ಯಾವುದೇ ಆಸ್ತಿಯಿಲ್ಲ, ದೆಹಲಿಯಲ್ಲಿ ನನಗೆ ಎರಡು ಸ್ವಂತ ಮನೆಗಳಿವೆ. ನಾನು ನ್ಯಾಯಾಲಯವನ್ನು ಗೌರವಿಸುತ್ತೇನೆ. ನನಗೆ ಯಾವ ಆತಂಕವೂ ಇಲ್ಲ. ನಿಮಗೆಲ್ಲ ಗೊತ್ತಿಲ್ಲದ ಏನೇನೋ ವಿಚಾರಗಳು ಇದೆ. ಈಗ ನಾನು ಅದರ ಬಗ್ಗೆಯೆಲ್ಲ ಏನೂ ಮಾತಾಡುವುದಿಲ್ಲ.
ರಾಜಕೀಯವೆಂಬುದು ಫುಟ್ಬಾಲ್ ಅಲ್ಲ, ಅದು ಚೆಸ್ ಆಟ. ನನ್ನ ಕಾಯಿಯನ್ನು ನಾನು ನಡೆಸುತ್ತೇನೆ. ಬಹಳ ಜಾಣ್ಮೆಯಿಂದ ಆಡಿದರೆ ಮಾತ್ರ ಚದುರಂಗದಲ್ಲಿ ಗೆಲ್ಲಲು ಸಾಧ್ಯ, ಕಳೆದ ಆಗಸ್ಟ್ 2ರಂದು ಆದಾಯ ತೆರಿಗೆ ಇಲಾಖೆ ದಾಳಿ ನಡೆದ ನಂತರ ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.
ಶಿಲೆಯೊಂದನ್ನು ವಿಗ್ರಹವನ್ನಾಗಿ ಮಾಡುವಾಗ ಎಲ್ಲರೂ ಅದನ್ನು ಭಗ್ನ ಮಾಡೋಕೆ ಪ್ರಯತ್ನಿಸುತ್ತಾರೆ. ಹಾಗೇ, ನಾನು ರಾಜಕೀಯದಲ್ಲಿ ಮುಂದುವರಿಯುತ್ತಿರುವುದನ್ನು ನೋಡಲಾಗದೆ ಇಂತಹ ಷಡ್ಯಂತ್ರ ರೂಪಿಸಲಾಗುತ್ತಿದೆ. ಹಣ್ಣು ಕೆಂಪಗಿದ್ದರೆ ಮಾತ್ರ ಎಲ್ಲರೂ ಅದನ್ನು ನೋಡುತ್ತಾರೆ. ಹಾಗೇ, ನನ್ನ ಮೇಲೆ ದಾಳಿ ಮಾಡಲಾಗುತ್ತಿದೆ ಎಂದಿದ್ದಾರೆ.
ನನಗೆ ಹಾಗೂ ಯಡಿಯೂರಪ್ಪರಿಗೆ ಸ್ನೇಹ ಇರಬಹುದು. ಆದರೆ, ಅವರ ಪಕ್ಷದ ಸಿದ್ಧಾಂತಗಳೇ ಬೇರೆ, ನಮ್ಮ ಪಕ್ಷದ ತತ್ವಗಳೇ ಬೇರೆ. ನಮ್ಮನ್ನೆಲ್ಲ ನೋಡಲು ಮೇಲೆ ದೇವರಿದ್ದಾನೆ. ನಾನು ಹೆದರುವ ಪ್ರಮೇಯವೇ ಇಲ್ಲ. ಕಳ್ಳನ ಹಾಗೆ ಓಡಿಹೋಗೋಕೆ ನಾನು ತಪ್ಪು ಮಾಡಿಲ್ಲ. ತಪ್ಪು ಮಾಡಿಲ್ಲ ಅಂದಮೇಲೆ ಭಯ ಯಾಕೆ? ನಾನು ಬೆಂಗಳೂರಿಗೆ ಬಂದಿದ್ದೇ ರಾಜಕೀಯ ಮಾಡೋಕೆ. ಬಿಜೆಪಿಯವರು ಬೇರೆ ಮಾರ್ಗದಲ್ಲಿ ನಮ್ಮ ಪಕ್ಷದವರನ್ನು ಸೆಳೆಯುಲು ಹುನ್ನಾರ ನಡೆಸಿದ್ದಾರೆ. ನಮ್ಮ ಶಾಸಕರಿಗೂ ಬಿಜೆಪಿ ಹಣದ ಆಮಿಷ ಒಡ್ಡಿದೆ. ಇದೆಲ್ಲವನ್ನೂ ನಾನು ಹೈಕಮಾಂಡ್ ಗಮನಕ್ಕೆ ತರಲಿದ್ದೇನೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


