ರಾಜಕೀಯ

ನಾನು ಎಷ್ಟು ದಿನ ಬದುಕಿರುತ್ತೇನೊ ಗೊತ್ತಿಲ್ಲ: ಸಿಎಂ ಕುಮಾರಸ್ವಾಮಿ

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತೆ ತಮ್ಮ ಸಾವಿನ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ...

ನಾನು ಎಷ್ಟು ದಿನ ಬದುಕಿರುತ್ತೇನೊ ಗೊತ್ತಿಲ್ಲ: ಸಿಎಂ ಕುಮಾರಸ್ವಾಮಿ
ಮಳವಳ್ಳಿಯಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಸಿಎಂ ಹೆಚ್ ಡಿ ಕುಮಾರಸ್ವಾಮಿ
Published On :

ಮಳವಳ್ಳಿ(ಮಂಡ್ಯ): ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತೆ ತಮ್ಮ ಸಾವಿನ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಅನೇಕ ಬಾರಿ ಸಾರ್ವಜನಿಕ ಭಾಷಣಗಳಲ್ಲಿ ಭಾವನಾತ್ಮಕ ಭಾಷಣ ಮಾಡಿ ಸುದ್ದಿಯಾಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಶುಕ್ರವಾರ ಮತ್ತೆ ಅದೇ ರೀತಿಯ ಮಾತುಗಳನ್ನಾಡಿದ್ದಾರೆ.

ನವೆಂಬರ್ 3ರಂದು ನಡೆಯುವ ಉಪ ಚುನಾವಣೆಗೆ ಇಂದು ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು,  ನಾನು ಈ ಹಿಂದೆ ಇಸ್ರೇಲ್ ಗೆ ಅಧ್ಯಯನ ಪ್ರವಾಸ ಕೈಗೊಂಡಿದ್ದಾಗಲೇ ಸಾಯಬೇಕಾಗಿತ್ತು. ದೇವರ ದಯೆಯಿಂದ ಬದುಕಿ ಬಂದೆ. ಆದರೆ ಎಷ್ಟು ದಿನ ಬದುಕಿರುತ್ತೇನೆ ಗೊತ್ತಿಲ್ಲ, ಬದುಕಿರುವವರೆಗೂ ಜನರ ಸೇವೆಯನ್ನು ಮಾಡುತ್ತೇನೆ ಎಂದರು.

ಮುಂದುವರಿದು ಮಾತನಾಡಿದ ಸಿಎಂ ಕುಮಾರಸ್ವಾಮಿ, ಜನರ ಮೇಲೆ ನನಗಿರುವ ಪ್ರೀತಿಯನ್ನು ಹಾಳು ಮಾಡಲು ಈ ಜನ್ಮದಲ್ಲಿ ಯಾರಿಗೂ ಸಾಧ್ಯವಿಲ್ಲ. ನಾನು ಬದುಕಿರುವುದೇ ನಿಮ್ಮಂತಹವರ ಸೇವೆಗೆ. ನಾನು ಹಣ ಸಂಪಾದಿಸಬೇಕಿಲ್ಲ. ಹಣ ಸಂಪಾದನೆ ಮಾಡುವುದು ನನ್ನ ಉದ್ದೇಶವೂ ಅಲ್ಲ.  ಎಷ್ಟು ದಿನ ಬದುಕುತ್ತೇನೆ ಎಂಬುದೂ ಮುಖ್ಯವಲ್ಲ.  ದೇವರು ನನಗೆ ಕೊಟ್ಟಿರುವ ಈ ಅಧಿಕಾರವನ್ನು ಜನರ ಶ್ರೇಯೋಭಿವೃದ್ಧಿಗೆ ಬಳಸಿ, ಪ್ರತಿಯೊಂದು ಕುಟುಂಬವನ್ನು ಯಾವ ರೀತಿ ಬದುಕಿಸುತ್ತೇನೆ ಎಂಬುದೇ ನನ್ನ ಮುಂದಿರುವ ಸವಾಲು ಎಂದು ಹೇಳಿದರು.

ಸಾಲಮನ್ನಾ ವಿಷಯ ಪ್ರಸ್ತಾಪಿಸಿದ ಅವರು, ಐದು ತಿಂಗಳಾದರೂ ರೈತರಿಗೆ ದುಡ್ಡು ಕೊಟ್ಟಿಲ್ಲ ಅನ್ನುವ ಭಯ ನಿಮಗೇಕೆ? ಇದು ದೇವರು ಕೊಟ್ಟ ಸರ್ಕಾರ. ಮಂಡ್ಯ ಜಿಲ್ಲೆ ಜನರನ್ನು ಕೊನೆಯ ಉಸಿರಿರುವವರೆಗೂ ನಾನು ಮರೆಯಲ್ಲ. ಮಂಡ್ಯ ಹೆಸರನ್ನು ಹೇಳಿದರೆ, ಬಿಜೆಪಿಯವರು ಮಂಡ್ಯ ಬಜೆಟ್, ಮಂಡ್ಯಕ್ಕೆ ಮತ ಕೇಳಲು ಬಂದಿದ್ದಾರೆ ಎಂದು ಆಡಿಕೊಳ್ಳುತ್ತಿದ್ದಾರೆ. ಆದರೆ ಅವರಿಗೆ ಏನು ಗೊತ್ತು? ನನ್ನ ಹೃದಯದಲ್ಲಿ ಯಾವ ರೀತಿಯ ನೋವು ಇದೆ ಅನ್ನೋದನ್ನ ಅರ್ಥ ಮಾಡಿಕೊಂಡಿಲ್ಲ. ನನಗೆ ನನ್ನ ಪ್ರಾಣಕ್ಕಿಂತಲೂ ನಾಡಿನ ಜನರ ಹಿತ ಮುಖ್ಯ. ರೈತರ ಸಾಲಮನ್ನಾಗೆ ನಾನು ಅಭಿವೃದ್ಧಿಗೆ ಇಟ್ಟಿರುವ ಹಣವನ್ನು ಬಳಸಿಕೊಳ್ಳುವುದಿಲ್ಲ. ಖಾಸಗಿ ಸಾಲಮನ್ನಾ ಮಾಡಲು ಋಣ ಭಾರ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ. ಮುಂದಿನ 15 ದಿನಗಳಲ್ಲಿ ರಾಷ್ಟ್ರಪತಿಗಳು ಅಂಕಿತ ಹಾಕುವ ವಿಶ್ವಾಸ ಇದೆ ತಿಳಿಸಿದರು.

ಮಾಧ್ಯಮಗಳು ರಾಜ್ಯವನ್ನು ಸರ್ಕಾರ ಕತ್ತಲೆಗೆ ದೂಡುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿವೆ. ಇದು ಅಪಪ್ರಚಾರವಲ್ಲವೇ? ನನ್ನ ನಾಡಿನ ಜನರನ್ನು ಕತ್ತಲೆಗೆ ದೂಡುವಷ್ಟು ದುಷ್ಟನೇ? ದ್ರೋಹಿನಾ ಎಂದು ಪ್ರಶ್ನಿಸಿ, ನನ್ನ ಜನತೆಗೆ ದ್ರೋಹ ಮಾಡಿದ ದಿನ ನಾನು ಬದುಕಿದ್ದು ಸತ್ತಂತೆ. ನನ್ನನ್ನು ತುಳಿಯುವುದರಿಂದ ನಿಮಗೇನು ಲಾಭವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.