ಅವರು ಮಡಿದು ಏಳು ವರ್ಷವಾಯಿತು, ಇನ್ನೂ ಶಿವಮೊಗ್ಗ ಜಿಲ್ಲಾ ರಾಜಕೀಯದಲ್ಲಿ ಎಸ್ ಬಂಗಾರಪ್ಪ ಹೆಸರು ಜೀವಂತ!
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಕಣ ರಂಗೇರುತ್ತಿದ್ದು ಮೂರು ಪ್ರಮುಖ ರಾಜಕೀಯ ...

ಶಿವಮೊಗ್ಗ: ನವೆಂಬರ್ 3ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರುತ್ತಿದೆ. ರಾಜ್ಯದ ಪ್ರಮುಖ ಮೂರು ರಾಜಕೀಯ ಪಕ್ಷಗಳು ತೀವ್ರ ಹಣಾಹಣಿಗಿಳಿದಿವೆ. ಈ ಮಧ್ಯೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಒಂದು ಮಾತು ಕೇಳಿಬರುತ್ತಿದೆ. ಅದು ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ.
ಎಸ್ ಬಂಗಾರಪ್ಪನವರು ತೀರಿಕೊಂಡು 7 ವರ್ಷ ಕಳೆದಿವೆ. ಆದರೂ ಕೂಡ ಈ ವರ್ಣರಂಜಿತ ರಾಜಕಾರಣಿ, ಮಾಸ್ ಲೀಡರ್ ನ ಹೆಸರು ಮೂರೂ ಪಕ್ಷಗಳ ರಾಜಕೀಯ ನಾಯಕರ ನಾಲಿಗೆಯಲ್ಲಿ ಹರಿದಾಡುತ್ತಿದೆ. ಅಂದರೆ ಬಂಗಾರಪ್ಪನವರು ತಮ್ಮ ಜೀವಿತಾವಧಿಯ ರಾಜಕೀಯ ಜೀವನದಲ್ಲಿ ಮೂರೂ ಪಕ್ಷಗಳೊಂದಿಗೆ ಮತ್ತು ಅದರ ನಾಯಕರೊಂದಿಗೆ ಗುರುತಿಸಿಕೊಂಡಿದ್ದರು.
ಕಾಂಗ್ರೆಸ್ ಗೆ ಆಗಾಗ ಹೋಗಿ ಬರುತ್ತಿದ್ದ ಬಂಗಾರಪ್ಪನವರು ಸಣ್ಣ ಅವಧಿಗೆ ಬಿಜೆಪಿಯಲ್ಲಿ ಕೂಡ ಇದ್ದರು. ನಂತರ ಸಮಾಜವಾದಿ ಪಕ್ಷ ಸೇರಿಕೊಂಡರು. ತಮ್ಮ ರಾಜಕೀಯದ ಕೊನೆಯ ಹಂತದಲ್ಲಿ ಅವರು ಇದ್ದದ್ದು ಜೆಡಿಎಸ್ ನಲ್ಲಿ. ಇದೀಗ ನವೆಂಬರ್ 3ರ ಉಪ ಚುನಾವಣೆಯಲ್ಲಿ ಮೂರೂ ಪಕ್ಷಗಳು ತಮ್ಮ ಪಕ್ಷದ ಜೊತೆ ಬಂಗಾರಪ್ಪನವರ ಹೆಸರನ್ನು ಗುರುತಿಸಿಕೊಂಡು ಮತದಾರರನ್ನು ಸೆಳೆಯಲು ಮುಂದಾಗಿವೆ.
ನಿನ್ನೆ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಚುನಾವಣಾ ಪ್ರಚಾರದ ವೇಳೆ ಮಾತನಾಡಿ, ಎಸ್ ಬಂಗಾರಪ್ಪನವರು ನನ್ನ ರಾಜಕೀಯ ಗುರುಗಳು. ಜೆಡಿಎಸ್ ವರಿಷ್ಠ ದೇವೇಗೌಡರು 1996ರಲ್ಲಿ ಪ್ರಧಾನ ಮಂತ್ರಿಯಾದಾಗ ಬಂಗಾರಪ್ಪನವರನ್ನು ಕೇಂದ್ರ ಸಚಿವರನ್ನಾಗಿ ಮಾಡುವ ಎಲ್ಲಾ ಅವಕಾಶಗಳು ಅವರ ಮುಂದಿದ್ದವು. ಆದರೆ ದೇವೇಗೌಡರು ಆಗ ಬಂಗಾರಪ್ಪನವರನ್ನು ಪರಿಗಣಿಸಲಿಲ್ಲ. ಆ ನೋವನ್ನು ಬಂಗಾರಪ್ಪನವರೇ ನನಗೆ ಹಲವು ಬಾರಿ ಹೇಳಿಕೊಂಡಿದ್ದರು ಎಂದಿದ್ದಾರೆ.
ತಮ್ಮ ಮಾತನ್ನು ಮುಂದುವರಿಸುತ್ತಾ ಹಾಲಪ್ಪ, ಇಂದು ಜೆಡಿಎಸ್ ನವರು ಬಂಗಾರಪ್ಪನವರನ್ನು ಗುಣಗಾನ ಮಾಡುತ್ತಾರೆ. ಅವರ ಪುತ್ರ ಮಧು ಬಂಗಾರಪ್ಪನವರ ಪರ ಪ್ರಚಾರ ಮಾಡುವಾಗ ಬಂಗಾರಪ್ಪನವರ ಹೆಸರನ್ನು ಬಳಸಿಕೊಳ್ಳುತ್ತಾರೆ ಎಂದು ಟೀಕಿಸಿದರು.ಬಂಗಾರಪ್ಪನವರ ಹೆಸರು ಹೇಳಿಕೊಂಡು ಜೆಡಿಎಸ್ ನವರು ಮೊಸಳೆ ಕಣ್ಣೀರು ಹಾಕುವುದನ್ನು ಮೊದಲು ಬಿಡಬೇಕು ಎಂದರು.
ಇನ್ನೊಂದೆಡೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಿದರೆ ಅವರ ತಂದೆ ಎಸ್ ಬಂಗಾರಪ್ಪನವರಿಗೆ ಗೌರವ ಸಲ್ಲಿಸಿದಂತೆ ಎಂದಿದ್ದಾರೆ. ಜೆಡಿಎಸ್ ವರಿಷ್ಠ ದೇವೇಗೌಡರು, ಬಂಗಾರಪ್ಪನವರು ಜೆಡಿಎಸ್ ಗೆ ಸೇರಿದರೂ ಅವರನ್ನು ನಮಗೆ ಹೆಚ್ಚು ಸಮಯ ಉಳಿಸಿಕೊಳ್ಳಲಾಗಲಿಲ್ಲ. ಅವರ ಪುತ್ರ ಮಧು ಬಂಗಾರಪ್ಪ ನಮ್ಮ ಜೊತೆಗೆ ಸೇರಿ ಶಾಸಕ ಕೂಡ ಆಗಿದ್ದಾರೆ. ಕಾಂಗ್ರೆಸ್ ನ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರ ಒಪ್ಪಿಗೆ ಮೇರೆಗೆ ಸಹಮತದಿಂದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಮಧು ಬಂಗಾರಪ್ಪನವರನ್ನು ಕಣಕ್ಕಿಳಿಸಿದ್ದೇವೆ, ಅವರನ್ನು ಆಶೀರ್ವದಿಸಿ ಎಂದಿದ್ದಾರೆ.
ಎಸ್ ಬಂಗಾರಪ್ಪನವರು ಕಾಂಗ್ರೆಸ್ ನಲ್ಲಿದ್ದಾಗ ಕಾಗೋಡು ತಿಮ್ಮಪ್ಪ ಅವರಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದರು. ಅವರಿಬ್ಬರೂ ಒಟ್ಟಾಗಿ ಕೆಲಸ ಮಾಡುತ್ತಿದ್ದರೆ 80 ಮತ್ತು 90ರ ದಶಕದಲ್ಲಿ ಬಗರ್ ಹುಕುಂ ಸಮಸ್ಯೆಯನ್ನು ಬಗೆಹರಿಸಬಹುದಾಗಿತ್ತು. ಇದೀಗ ಮಧು ಬಂಗಾರಪ್ಪನವರನ್ನು ಕಣಕ್ಕಿಳಿಸುವ ಮೂಲಕ ಕಾಗೋಡು ತಿಮ್ಮಪ್ಪ ಸೌಜನ್ಯ ಮೆರೆದಿದ್ದಾರೆ ಎಂದು ದೇವೇಗೌಡ ಹೇಳಿದ್ದಾರೆ.
2004ರಲ್ಲಿ ಬಂಗಾರಪ್ಪನವರು ಬಿಜೆಪಿ ಸೇರಿದಾಗ ಜಿಲ್ಲಾ ಘಟಕದಲ್ಲಿ ಬದಲಾವಣೆ ಕಂಡುಬಂತು. ಈಡಿಗ ಸಮುದಾಯದಿಂದ ಬಿಜೆಪಿಗೆ ಬಲ ಬಂದಿತು. ಬಂಗಾರಪ್ಪನವರ ಶಿಷ್ಯ ಹರತಾಳು ಹಾಲಪ್ಪ ಮತ್ತು ಬೇಲೂರು ಗೋಪಾಲಕೃಷ್ಣ ಬಿಜೆಪಿಗೆ ಸೇರಿ ಶಾಸಕರಾದರು. 2005ರಲ್ಲಿ ಬಂಗಾರಪ್ಪನವರು ಬಿಜೆಪಿ ತೊರೆದಾಗ ಇವರಿಬ್ಬರು ಬಿಟ್ಟು ಹೋಗಲಿಲ್ಲ. ಇದೀಗ ಕುಮಾರ ಬಂಗಾರಪ್ಪ ಕೂಡ ಬಿಜೆಪಿಯಲ್ಲಿದ್ದು ಪಕ್ಷಕ್ಕೆ ಬಲ ಸಿಕ್ಕಿದೆ. ಈಡಿಗ ಸಮುದಾಯದವರ ಬೆಂಬಲವಿದೆ. ಹೀಗಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಪಕ್ಷಗಳಿಗೆ ಉಪ ಚುನಾವಣೆಯಲ್ಲಿ ಈಡಿಗ ಸಮುದಾಯದಿಂದ ಬೆಂಬಲ ಸಿಗುವುದು ಕಷ್ಟ ಎನ್ನಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


