ರಾಜಕೀಯ

ಶ್ರೀರಾಮುಲು ಏನು ಉದ್ಭವ ಮೂರ್ತಿನಾ? ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಮುಂದಿನ ತಿಂಗಳು ನವೆಂಬರ್ 3ರಂದು ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪ ...

ಶ್ರೀರಾಮುಲು ಏನು ಉದ್ಭವ ಮೂರ್ತಿನಾ? ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ
ಶ್ರೀರಾಮುಲು, ಸಿದ್ದರಾಮಯ್ಯ(ಸಂಗ್ರಹ ಚಿತ್ರ)
Published On :

ಬಳ್ಳಾರಿ: ಮುಂದಿನ ತಿಂಗಳು ನವೆಂಬರ್ 3ರಂದು ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪ ಚುನಾವಣೆಗೆ ರಾಜಕೀಯ ನಾಯಕರ ಪ್ರಚಾರದ ಭರಾಟೆ ತೀವ್ರವಾಗಿದ್ದು, ಬಳ್ಳಾರಿ ಜಿಲ್ಲೆಯ ಹಂಪಸಾಗರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಪರ ಚುನಾವಣಾ ಪ್ರಚಾರ ಕೈಗೊಂಡರು. ಈ ಸಂದರ್ಭದಲ್ಲಿ ಪ್ರಚಾರ ಭಾಷಣದಲ್ಲಿ ಮೊಣಕಾಲ್ಮೂರು ಕ್ಷೇತ್ರದ ಶಾಸಕ ಬಿಜೆಪಿ ನಾಯಕ ಶ್ರೀರಾಮುಲು ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.

ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಯಲ್ಲಿ ಆರಿಸಿ ಬಂದ ನಂತರ ಶ್ರೀರಾಮುಲು ಪೂರ್ಣಾವಧಿ ಅಧಿಕಾರ ಪೂರೈಸಿದ್ದಿಲ್ಲ, ಮಧ್ಯದಲ್ಲಿಯೇ ರಾಜೀನಾಮೆ ನೀಡಿದವರು. ಅಂತವರನ್ನು ಕ್ಷೇತ್ರದ ಜನಪ್ರತಿನಿಧಿಯಾಗಿ ಮತದಾರರು ಏಕೆ ಆರಿಸಿ ಕಳುಹಿಸುತ್ತಾರೆ? ಕ್ಷೇತ್ರದ ಸಮಸ್ಯೆ ಬಗ್ಗೆ ಲೋಕಸಭೆಯಲ್ಲಿ ಒಂದು ದಿನವೂ ಶ್ರೀರಾಮುಲು ಮಾತನಾಡಿದ್ದಿಲ್ಲ. ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆ ಯಾವುದೂ ರಾಮುಲು ಅವರಿಗೆ ಗೊತ್ತಿಲ್ಲ. ಹಣ, ಅಹಂಕಾರದಿಂದ ಅವರು ರಾಜಕೀಯ ನಡೆಸುವವರು. ರೈತರ ಸಾಲ ಮನ್ನಾ ಮಾಡಿ ಎಂದು ಶ್ರೀರಾಮುಲು ಒಂದು ದಿನವೂ ಲೋಕಸಭೆಯಲ್ಲಿ ಒತ್ತಾಯ ಮಾಡಿಲ್ಲ. ಕನ್ನಡವೇ ಸರಿಯಾಗಿ ಮಾತನಾಡಲು ಬಾರದವರು ಏನು ಮಾತನಾಡಿಯಾರು? ರಾಜ್ಯ, ದೇಶ ಗೊತ್ತಿಲ್ಲದವರು ಲೋಕಸಭೆಗೆ ಏಕೆ ಹೋಗಬೇಕು? ಕೇಂದ್ರದಲ್ಲಿ ಬಿಜೆಪಿಯದ್ದೇ ಸರ್ಕಾರ ಇದೆ. ಶ್ರೀರಾಮುಲು ಒಂದಾದರೂ ಯೋಜನೆಯನ್ನು ಬಳ್ಳಾರಿಗೆ ತಂದಿದ್ದಾರೆಯೇ? ಎಂದು ಪ್ರಶ್ನಿಸಿದರು.

ಬಳ್ಳಾರಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿರುವ ಶಾಂತಾ ಅವರೂ ಈ ಹಿಂದೆ ಲೋಕಸಭೆಯಲ್ಲಿ ಮಾತನಾಡಿಲ್ಲ. ಕೇವಲ ಅಲಂಕಾರಕ್ಕಾಗಿ ಅವರನ್ನು ಅಲ್ಲಿಗೆ ಕಳುಹಿಸಬೇಕೇ? ಎಂದು  ವಾಗ್ಧಾಳಿ ನಡೆಸಿದರು.

ಲೋಕಸಭೆ ಉಪಚುನಾವಣೆಗೆ ಬಳ್ಳಾರಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ವಿ.ಎಸ್. ಉಗ್ರಪ್ಪ ಅವರನ್ನು ಬಿಜೆಪಿ ಹೊರಗಿನಿಂದ ಬಂದವರು ಎಂದು ಟೀಕಾಪ್ರಹಾರ ನಡೆಸುತ್ತಿದೆ. ಇದಕ್ಕೆ ತಿರುಗೇಟು ನೀಡಿರುವ ಸಿದ್ದರಾಮಯ್ಯ ಉಗ್ರಪ್ಪನವರನ್ನು ಹೊರಗಿನವರು ಎಂದು ಹೇಳುವುದಾದರೆ ಶ್ರೀರಾಮುಲು ಬಾದಾಮಿಯಲ್ಲಿ ನನ್ನ ವಿರುದ್ಧ ಸ್ಪರ್ಧೆ ಮಾಡಿರಲಿಲ್ಲವೇ? ಅವರೇನು ಉದ್ಭವಮೂರ್ತಿನಾ ಎಂದು ಪ್ರಶ್ನಿಸಿದರು.

ಶ್ರೀರಾಮುಲು ಕಣ್ಣು ಬಿಡುವ ಮೊದಲೇ ಉಗ್ರಪ್ಪ ಅವರು ರಾಜಕೀಯಕ್ಕೆ ಪದಾರ್ಪಣೆ ಮಾಡಿದವರು. ಅವರು ಲೋಕಸಭೆಗೆ ಹೋದರೆ ಅಲ್ಲಿ ಬಳ್ಳಾರಿ ಸದ್ದು ಮಾಡುತ್ತದೆ. ಶಾಂತಾ ಅವರು ಹೋದರೆ ಏನೂ ಪ್ರಯೋಜನವಿಲ್ಲ, ಶ್ರೀರಾಮುಲು ಅವರಿಗೆ ಹೋಲಿಸಿದರೆ ರಾಜಕೀಯದಲ್ಲಿ ಉಗ್ರಪ್ಪ ಅವರದ್ದು ಮೇರು ವ್ಯಕ್ತಿತ್ವ ಎಂದು ಸಿದ್ದರಾಮಯ್ಯ ಉಗ್ರಪ್ಪ ಅವರನ್ನು ಕೊಂಡಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.