ಇಬ್ಬರನ್ನು ಕೈಬಿಟ್ಟು, ಮೂವರಿಗೆ ಸಚಿವ ಸ್ಥಾನ ನೀಡಲು ಜೆಡಿಎಸ್ ನಾಯಕರ ಚಿಂತನೆ
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕಸರತ್ತು ಮುಂದುವರಿದಿದೆ. ತನ್ನ ...

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕಸರತ್ತು ಮುಂದುವರಿದಿದೆ. ತನ್ನ ಪಾಲಿನ 11 ಸಚಿವ ಸ್ಥಾನ ಹುದ್ದೆಗಳ ಪೈಕಿ ಖಾಲಿ ಇರುವ ಒಂದು ಸ್ಥಾನವನ್ನು ತುಂಬಲು ಜೆಡಿಎಸ್ ತನ್ನ ಇಬ್ಬರು ಸಚಿವರನ್ನು ಕೈಬಿಡುವ ಆಲೋಚನೆಯಲ್ಲಿದೆ ಎಂದು ಹೇಳಲಾಗುತ್ತಿದೆ.
ಲಿಂಗಾಯತ ಸಮುದಾಯದ 82 ವರ್ಷದ ತೋಟಗಾರಿಕೆ ಇಲಾಖೆ ಸಚಿವ ಎಂ ಸಿ ಮನಗುಳಿ ಅವರನ್ನು ಸಂಪುಟ ವಿಸ್ತರಣೆಗೆ ಮುನ್ನ ಕೈಬಿಟ್ಟು ಯುವಕರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸುವ ಯೋಜನೆಯಲ್ಲಿ ಜೆಡಿಎಸ್ ಇದೆ.
ಬಿಎಸ್ ಪಿ ಸಚಿವ ಎನ್ ಮಹೇಶ್ ಅವರಿಂದ ಹಲವು ವಿಷಯಗಳಲ್ಲಿ ಸಮಸ್ಯೆ ಎದುರಿಸುತ್ತಿರುವ ಜೆಡಿಎಸ್ ಗೆ ಅವರು ಅನಿವಾರ್ಯದಂತೆ ಕಂಡುಬರುತ್ತಿಲ್ಲ. ಇತ್ತೀಚೆಗೆ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಹೇಳಿಕೆ ನೀಡಿ ವಿವಾದ ಕೂಡ ಸೃಷ್ಟಿಸಿದ್ದಾರೆ. ಹೀಗಾಗಿ ಅವರನ್ನು ಕೂಡ ಕೈಬಿಡುವ ಯೋಜನೆಯಲ್ಲಿ ಜೆಡಿಎಸ್ ವರಿಷ್ಠರಿದ್ದಾರೆ ಎನ್ನುತ್ತವೆ ಮೂಲಗಳು.
ಬಿಎಸ್ಪಿಗೆ ಕರ್ನಾಟಕದಲ್ಲಿ ಯಾವ ಅಸ್ಥಿತ್ವ ಕೂಡ ಇಲ್ಲ. ಮಹೇಶ್ ಅವರು ಜೆಡಿಎಸ್ ಬೆಂಬಲದಿಂದ ಸಚಿವರಾಗಿದ್ದಾರೆ. ನಮ್ಮ ಪಕ್ಷದ ಹಿತಾಸಕ್ತಿ ಮತ್ತು ಕಾರ್ಯಕರ್ತರನ್ನು ರಕ್ಷಿಸುವುದು ಮುಖ್ಯವಾಗುತ್ತದೆ. ಸಚಿವ ಮಹೇಶ್ ಅವರು ನಮ್ಮ ಪಕ್ಷಕ್ಕೆ ಅನಿವಾರ್ಯವೇನಲ್ಲ, ಅವರು ಜೆಡಿಎಸ್ ವಿರುದ್ಧ ಮಾತನಾಡುತ್ತಾರೆ. ಅವರ ಅಗತ್ಯವಿಲ್ಲ ಎಂದು ಹೇಳಲು ಇನ್ನಷ್ಟು ಕಾರಣಗಳಿವೆ ಎಂದು ಜೆಡಿಎಸ್ ನಾಯಕರೊಬ್ಬರು ಹೇಳುತ್ತಾರೆ.
ತಾವು ಸಚಿವ ಸ್ಥಾನದಲ್ಲಿ ಮುಂದುವರಿಯಬೇಕೆ, ಬೇಡವೇ ಎಂಬುದನ್ನು ಪಕ್ಷದ ನಾಯಕಿ ಮಾಯಾವತಿಯವರ ಬಳಿ ಕೇಳಿ ನಿರ್ಧರಿಸುವುದಾಗಿ ಕೂಡ ಮಹೇಶ್ ಹೇಳಿದ್ದರು. ಇನ್ನೊಂದೆಡೆ ಮಧ್ಯಪ್ರದೇಶ ಮತ್ತು ರಾಜಸ್ತಾನ ಚುನಾವಣೆಗಳಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳದಿರಲು ತೀರ್ಮಾನಿಸಿರುವುದು ಕೂಡ ಜೆಡಿಎಸ್ ಗೆ ಎನ್ ಮಹೇಶ್ ಅವರನ್ನು ಸಂಪುಟದಿಂದ ಕೈಬಿಡಲು ಇನ್ನಷ್ಟು ವಿಶ್ವಾಸ ನೀಡಿದೆ ಎನ್ನಲಾಗುತ್ತಿದೆ.
ಮನಗುಳಿಯವರ ವಿಚಾರ ತೆಗೆದುಕೊಂಡರೆ, ಅವರಿಗೆ ವಯಸ್ಸಾಗಿರುವುದರಿಂದ ಸಣ್ಣ ವಯಸ್ಸಿನ ಇನ್ನಷ್ಟು ದಕ್ಷ ಶಾಸಕರನ್ನು ಸಚಿವರನ್ನಾಗಿ ಮಾಡಲು ಜೆಡಿಎಸ್ ನಾಯಕರು ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ. ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕೆಂದು ಜೆಡಿಎಸ್ ವರಿಷ್ಠ ದೇವೇಗೌಡರು ಮನಗುಳಿಯವರ ಹೆಸರು ಸೂಚಿಸಿದ್ದರು. ಆದರೆ ಅವರು ತಮ್ಮ ಖಾತೆಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಹಲವು ಸಭೆಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಜೆಡಿಎಸ್ ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಮೂವರು ಶಾಸಕರಿಗೆ ಸಚಿವ ಸ್ಥಾನ ನೀಡಲು ಮುಂದಾಗಿದೆ. ಬಿ ಎಂ ಫಾರೂಖ್, ಬಸವರಾಜ್ ಹೊರಟ್ಟಿ ಮತ್ತು ಶರವಣ ಅವರನ್ನು ಸೇರ್ಪಡೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ನಲ್ಲಿ ಸಂಪುಟದಲ್ಲಿ ಈಗಿರುವ ಸಚಿವರನ್ನು ಕೈಬಿಡುವ ಆಲೋಚನೆಯನ್ನು ಸದ್ಯಕ್ಕೆ ಹೊಂದಿಲ್ಲ. ಸಚಿವರನ್ನು ಕೈಬಿಡುವ, ಶಾಸಕರನ್ನು ಸೇರ್ಪಡೆ ಮಾಡುವ ಕೆಲಸವನ್ನು ಕಾಂಗ್ರೆಸ್ ಅಳೆದು ತೂಗಿ ಮಾಡುತ್ತಿದೆ.
ಈ ಮಧ್ಯೆ ನಿನ್ನೆ ಹೆಚ್ ಡಿ ದೇವೇಗೌಡರು, ಕಾಂಗ್ರೆಸ್ ನ ರಾಜ್ಯ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದರು. ರಾಜ್ಯದಲ್ಲಿ ಎರಡು ಕ್ಷೇತ್ರಗಳಲ್ಲಿ ಉಪ ಚುನಾವಣೆ ಹೊರತುಪಡಿಸಿ ಸಂಪುಟ ವಿಸ್ತರಣೆ ಕುರಿತು ಇಬ್ಬರೂ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


