ಕರ್ನಾಟಕದಲ್ಲಿ ಮೋದಿ ಅಲೆ ಕೆಲಸ ಮಾಡಿದೆ, ಬಿಜೆಪಿ ಸರ್ಕಾರ ರಚಿಸಲಿದೆ: ಜಗದೀಶ್ ಶೆಟ್ಟರ್
ಪ್ರಧಾನ ಮಂತ್ರಿ ನರೇಂದ್ರ ಮೋದಿ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಭವಿಷ್ಯವನ್ನೇ ...

ಹುಬ್ಬಳ್ಳಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಭವಿಷ್ಯವನ್ನೇ ಬದಲಾಯಿಸಿದ್ದಾರೆ. ಅವರು ನಗರಕ್ಕೆ ಭೇಟಿ ನೀಡಿ ಯುವ ಮತದಾರರನ್ನು ಅದರಲ್ಲೂ ಮೊದಲ ಬಾರಿ ಮತ ಹಾಕಿದ ಯುವ ಸಮೂಹವನ್ನು ಸೆಳೆದಿದ್ದಾರೆ ಎನ್ನುತ್ತಾರೆ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್.
ಮೋದಿಯವರಿಗೆ ಯುವ ಸಮುದಾಯದ ಬೆಂಬಲವಿರುವುದು ಕಂಡು ಖುಷಿಯಾಗಿದೆ. ಅವರ ಭೇಟಿ ಮತ್ತು ಭಾಷಣ ಈ ಬಾರಿಯ ಚುನಾವಣೆ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ ಎಂದು ಜಗದೀಶ್ ಶೆಟ್ಟರ್ ಹುಬ್ಬಳ್ಳಿಯ ಬಾದಾಮಿ ನಗರದ ತಮ್ಮ ನಿವಾಸದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಗೆ ತಿಳಿಸಿದ್ದಾರೆ. ತಾವು ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ಅವರು ಹೊಂದಿದ್ದಾರೆ.
ಈ ಬಾರಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಿದ್ದಾರೆ ಮತ್ತು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ನನ್ನ ವಿರುದ್ಧವಾದ ಅಭಿಪ್ರಾಯ ಖಂಡಿತಾ ಜನರಲ್ಲಿಲ್ಲ. ನನಗೆ ಸಿಗುತ್ತಿರುವ ಜನ ಬೆಂಬಲ ನೋಡಿ ಕಾಂಗ್ರೆಸ್ ಆತಂಕಗೊಂಡಿದೆ. ಕಾಂಗ್ರೆಸ್ ನಾಯಕರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.
ಹಲವರ ಹೆಸರುಗಳ ಚುನಾವಣಾ ಆಯೋಗದ ಪಟ್ಟಿಯಲ್ಲಿ ಇಲ್ಲದಿರುವುದರಿಂದ ಹಲವರಿಗೆ ಮತ ಚಲಾಯಿಸಲು ಸಾಧ್ಯವಾಗಿಲ್ಲ, ಇದಕ್ಕೆ ಚುನಾವಣಾ ಆಯೋಗ ಕಾರಣ ಎಂದು ಆರೋಪಿಸಿದರು.
ಹಲವರ ಬಳಿ ಚುನಾವಣಾ ಗುರುತು ಪತ್ರವಿದ್ದರೂ ಕೂಡ ಅವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದುದರಿಂದ ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ನನ್ನನ್ನು ಸೋಲಿಸಲು ಯಾರೋ ಪಿತೂರಿ ನಡೆಸಿದ್ದಾರೆ ಎಂದು ನನಗನಿಸುತ್ತದೆ. ಲೋಪದೋಷವಿಲ್ಲದ ಮತದಾರರ ಪಟ್ಟಿಯನ್ನು ತಯಾರಿಸುವುದು ಚುನಾವಣಾ ಆಯೋಗದ ಕೆಲಸವಾಗಿದೆ. ಬೆಂಗಳೂರಿನಿಂದ ಕುಟುಂಬವೊಂದು ಇಲ್ಲಿಗೆ ಮತದಾನ ಮಾಡಲು ಬಂದಿತ್ತು, ಆದರೆ ಮತದಾರರ ಪಟ್ಟಿಯಲ್ಲಿ ಹೆಸರಿರಲಿಲ್ಲ ಎಂಬ ಕಾರಣಕ್ಕೆ ಮತದಾನ ಮಾಡದೆ ಹಿಂತುರುಗಬೇಕಾಯಿತು ಎಂದರು.
ಯಾವುದೇ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧ: ತಾವು ಸತತ ಆರನೇ ಬಾರಿಗೆ ವಿಧಾನಸೌಧ ಪ್ರವೇಶಿಸಲಿದ್ದು ಸರಳ ಬಹುಮತದಿಂದ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸರ್ಕಾರ ರಚನೆ ಮಾಡಿದರೆ ತಾವು ಯಾವ ಖಾತೆ ವಹಿಸಿಕೊಳ್ಳಲು ಸಿದ್ದರಿದ್ದೀರಿ ಎಂದು ಕೇಳಿದ್ದಕ್ಕೆ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ನನಗೆ ಏನು ಬೇಕೆಂದು ನಾನು ಇದುವರೆಗೆ ಕೇಳಲಿಲ್ಲ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ವಹಿಸಿಕೊಳ್ಳುತ್ತೇನೆ. ನಾನು ಯಾವುದೇ ಬೇಡಿಕೆಯಿಡುವುದಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರೇ ಮುಂದಿನ ಮುಖ್ಯಮಂತ್ರಿ ಎಂದು ಜಗದೀಶ್ ಶೆಟ್ಟರ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


