ಚುನಾವಣೋತ್ತರ ಮೈತ್ರಿ: ಜೆಡಿಎಸ್ ತನ್ನ ನಿಲುವು ಸ್ಪಷ್ಟಪಡಿಸಲಿ: ರಾಹುಲ್ ಗಾಂಧಿ
ಜೆಡಿಎಸ್ ಯಾವುದಾದರೊಂದು ಪಕ್ಷವನ್ನು ಆಯ್ಕೆ ಮಾಡಿಕೊಳ್ಳಬೇಕು, ಇದರ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಕೋಲಾರ: ಶನಿವಾರ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಯಾವ ಪಕ್ಷವನ್ನು ಬೆಂಬಲಿಸಲಿದೆ ಎಂಬುದು ನಿರಂತರ ಊಹಾಪೋಹಗಳಿಗೆ ಕಾರಣವಾಗಿದೆ. ಜೆಡಿಎಸ್ ಯಾವುದಾದರೊಂದು ಪಕ್ಷವನ್ನು ಆಯ್ಕೆ ಮಾಡಿಕೊಳ್ಳಬೇಕು, ಇದರ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಮಾಲೂರಿನಲ್ಲಿ ಇಂದು ಮಧ್ಯಾಹ್ನ ರೋಡ್ ಶೋ ನಡೆಸಿ ಮಾತನಾಡಿದ ರಾಹುಲ್ ಗಾಂಧಿ, ಜೆಡಿಎಸ್ ಬಿಜೆಪಿಯನ್ನು ಬೆಂಬಲಿಸಲಿದೆಯೇ ಅಥವಾ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲಿದೆಯೇ ಎಂಬುದನ್ನು ರಾಜ್ಯದ ಜನರು ತಿಳಿಯಬೇಕಿದೆ ಎಂದರು.
ಈ ಮಧ್ಯೆ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಜೆಡಿಎಸ್ ನೊಂದಿಗೆ ಮೈತ್ರಿ ಇಲ್ಲ ಎಂದು ಎಲ್ಲೆಡೆ ಹೇಳುತ್ತಿದ್ದರೆ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ. ಕುಮಾರಸ್ವಾಮಿ ಸಹ ಕಾಂಗ್ರೆಸ್ ಅಥವಾ ಬಿಜೆಪಿಯೊಂದಿಗೆ ಸೇರಿವುದಿಲ್ಲ ಎಂದು ಹೇಳುತ್ತಿದ್ದಾರೆ.
ರಾಹುಲ್ ಗಾಂಧಿ ರೋಡ್ ಶೋ ವೇಳೆ ಜನಸಾಗರ
ರಾಹುಲ್ ಗಾಂಧಿ ಮಾಲೂರಿನಲ್ಲಿ ರೋಡ್ ಶೋ ನಡೆಸುವ ವೇಳೆಯಲ್ಲಿ ಜನಸಾಗರವೇ ಹರಿದುಬಂದಿತ್ತು. ಸೈಕಲ್ ಏರಿ ರೋಡ್ ಶೋ ನಡೆಸಿದ ರಾಹುಲ್ ಗಾಂಧಿ ನಕಲಿ ಸಿಲಿಂಡರ್ ಹಿಡಿದು ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರಮೋದಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷ ಮತ್ತು ಬಸವಣ್ಣ ಒಂದು ಕಡೆ ಇದ್ದರೆ, ಬಿಜೆಪಿ, ಆರ್ ಎಸ್ ಎಸ್, ಮತ್ತು ನರೇಂದ್ರಮೋದಿ ಮತ್ತೊಂದು ಕಡೆಯಲ್ಲಿದ್ದಾರೆ. ಬಿಜೆಪಿಯಲ್ಲಿಯೇ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದರು.
ಜೈಲಿಗೆ ಹೋಗಿ ಬಂದಿರುವ ಯಡಿಯೂರಪ್ಪ ಅವರನ್ನು ವೇದಿಕೆಯ ಮೇಲೆ ಕುಳ್ಳಿರಿಸಿಕೊಂಡೇ ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ರೆಡ್ಡಿ ಸಹೋದರರು 35 ಸಾವಿರ ಕೋಟಿ ರೂ. ದೋಚಿಸಿದ್ದಾರೆ. ಅಂತಹವರನ್ನು ಮತ್ತೆ ವಿಧಾನಸೌಧಕಕ್ಕೆ ಕರೆದುಕೊಳ್ಳಲು ಉತ್ಸುಕರಾಗದ್ದಾರೆ. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಏಕೆ ಏನನ್ನೂ ಹೇಳಲ್ಲ ಎಂದು ಪ್ರಶ್ನಿಸಿದರು.
ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರಮೋದಿ ಕರ್ನಾಟಕ ಹಾಗೂ ಇಲ್ಲಿನ ರೈತರಿಗೆ ಏನು ಮಾಡಿದ್ದಾರೆ. ಮೋದಿ ಮನಸ್ಸು ಮಾಡಿದ್ದರೆ ದೇಶದ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬಹುದಿತ್ತು. ಆದರೆ. ಆದರೆ, ಹಾಗೆ ಮಾಡಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು ಎಂದು ಹೇಳಿದರು.
ಗುಜರಾತಿನಲ್ಲಿ ನರೇಂದ್ರಮೋದಿ ಎಲ್ಲಾ ಕಾಲೇಜುಗಳನ್ನು ಖಾಸಗೀಕರಣಗೊಳಿಸುವ ಮೂಲಕ ಶಿಕ್ಷಣವನ್ನು ದುಬಾರಿಗೊಳಿಸಿದ್ದಾರೆ. ಒಂದು ಕೋರ್ಸಿಗಾಗಿ ಅಲ್ಲಿ 15 ಲಕ್ಷ ವ್ಯಯ ಮಾಡಬೇಕಿದೆ. ಕರ್ನಾಟಕದಲ್ಲಿ ಸಾರಿಗೆಯಲ್ಲಿ ಎಲ್ಲರಿಗೂ ಸಹಾಯಧನ ಒದಗಿಸಲಾಗಿದೆ. ಎಲ್ಲಾ ಪಟ್ಟಣಗಳಲ್ಲಿಯೂ ಇಂದಿರಾ ಕ್ಯಾಂಟೀನ್ ತೆರೆಯಲಾಗಿದೆ. ಆದರೆ ಮೋದಿ ಬಡವರಿಗಾಗಿ ಏನನ್ನಾದರೂ ಒಂದು ಮಾಡಿದ್ದಾರೆ ಹೇಳಿ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಆಡಳಿತಾವಧಿಯಲ್ಲಿ ಕರ್ನಾಟಕ ಹಾಳಾಗಿತ್ತು, ಮಹಿಳೆಯರು ಮನೆಯಿಂದ ಹೊರಗೆ ಬರಲಾಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ಯಡಿಯೂರಪ್ಪ ಎಷ್ಟು ಬಾರಿ ಜೈಲಿಗೆ ಹೋಗಿದ್ದಾರೆ , ಎಷ್ಟು ದೋಚಿದ್ದಾರೆ ಎಂಬುದರ ಬಗ್ಗೆ ನರೇಂದ್ರಮೋದಿ ಹೇಳಬೇಕು ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ನರೇಂದ್ರಮೋದಿ ಬಸವಣ್ಣ ಪ್ರತಿಮೆಗೆ ನಮನ ಸಲ್ಲಿಸುತ್ತಾರೆ ಆದರೆ, ಅವರು ಹೇಳಿದ ಹಾಗೆ ನುಡಿದಂತೆ ನಡೆಯುವುದಿಲ್ಲ, ಅಂಬೇಡ್ಕರ್ ಪ್ರತಿಮೆ ಮುಂಭಾಗವೂ ಮೋದಿ ನಿಲ್ಲುತ್ತಾರೆ , ಆದರೆ, ಅವರ ಸಿದ್ದಾಂತಗಳನ್ನು ನಿತ್ಯವೂ ಧಿಕ್ಕರಿಸುತ್ತಾರೆ. ರೋಹಿತ್ ವೇಮುಲ್ ಸಾವು, ಬಿಹಾರದಲ್ಲಿ ದಲಿತರ ಹತ್ಯೆ ಬಗ್ಗೆ ಏನನ್ನೂ ಮಾತನಾಡಲಿಲ್ಲ ಎಂದರು.
ಸಂಪುಟದ ಸಚಿವರೊಬ್ಬರು ಸಂವಿಧಾನ ಬದಲಿಸುತ್ತೇವೆ ಎಂಬ ಹೇಳಿಕೆ ನೀಡಿದ್ದಾಗಲೂ ಮೌನ ವಹಿಸುತ್ತಾರೆ. ಮೋದಿ ಅಥವಾ ಬಿಜೆಪಿ, ಅಥವಾ ಆರ್ ಎಸ್ ಎಸ್ ಯಾರೇ ಆಗಲೀ ದೇಶದ ಸಂವಿಧಾನವನ್ನು ಮುಟ್ಟಲು ಸಹ ಅವಕಾಶ ನೀಡುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


