ಮಾಗಡಿ : ಕಾಂಗ್ರೆಸ್, ಜೆಡಿಎಸ್ ನಡುವೆ ತೀವ್ರ ಪೈಪೋಟಿ : ಯಾರೇ ಗೆದ್ದರೂ ಅಂತರ ಕಡಿಮೆ
ರಾಮನಗರ ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಣ ಪ್ರತಿಷ್ಠೆಯ ಕಣವಾಗಿ ರೂಪುಗೊಂಡಿದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಮಾಗಡಿ ಕ್ಷೇತ್ರವೂ ಒಂದಾಗಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನೇರಾ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಇಲ್ಲಿ ನೇಪಥ್ಯ

ಮಾಗಡಿ : ರಾಮನಗರ ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಣ ಪ್ರತಿಷ್ಠೆಯ ಕಣವಾಗಿ ರೂಪುಗೊಂಡಿದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಮಾಗಡಿ ಕ್ಷೇತ್ರವೂ ಒಂದಾಗಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನೇರಾ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಇಲ್ಲಿ ನೇಪಥ್ಯ.

ಮಾಜಿ ಶಾಸಕ ಹೆಚ್. ಸಿ. ಬಾಲಕೃಷ್ಣ ಐದನೇ ಅವಧಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಜೆಡಿಎಸ್ ನಿಂದ ಜಿಲ್ಲಾ ಪಂಚಾಯಿತಿ ಸದಸ್ಯ ಎ. ಮಂಜು ಕಣಕ್ಕಿಳಿದಿದ್ದಾರೆ. ಹನುಮಂತರಾಜು ಅವರಿಗೆ ಬಿಜೆಪಿ ಬಿಜೆಪಿ ಟಿಕೆಟ್ ನೀಡಿದೆ. ಆದರೆ. ಅವರು ಆಟಕ್ಕುಂಟು ಲೆಕ್ಕಕಿಲ್ಲಾ ಎಂಬಂತಾಗಿದ್ದಾರೆ.
ಬದಲಾದ ರಾಜಕಾರಣದಲ್ಲಿ ಕಳೆದ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಲ್ಲಿದ್ದ ಹೆಚ್. ಸಿ. ಬಾಲಕೃಷ್ಣ ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಪರ ಮತ ಚಲಾಯಿಸಿದ ಹಿನ್ನೆಲೆಯಲ್ಲಿ ಅಮಾನುತುಗೊಂಡು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿದ್ದ ಎ. ಮಂಜು ಜೆಡಿಎಸ್ ಸೇರಿ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದಾರೆ.
ಜೆಡಿಎಸ್ ಭದ್ರಕೋಟೆ ಎಂದೇ ಜನಜನಿತವಾಗಿದ್ದ ಈ ಕ್ಷೇತ್ರವನ್ನು ಮತ್ತೆ ಉಳಿಸಿಕೊಳ್ಳಲು ಹಾಗೂ ಶಾಸಕ ಬಾಲಕೃಷ್ಣ ವಿರುದ್ಧ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ತಮ್ಮ ಪ್ರತಿಷ್ಠೆಯನ್ನು ಪಣಕಿಟ್ಟು, ಕ್ಷೇತ್ರದಾದ್ಯಂತ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಮಾಗಡಿಯ ಒಟ್ಟು 295 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು, 1, 12, 598 ಪುರುಷರು ಹಾಗೂ 1, 10, 520 ಮಹಿಳಾ ಮತದಾರರಿದ್ದಾರೆ. ಕ್ಷೇತ್ರದಾದ್ಯಂತ ಒಟ್ಟು 2, 23, 139 ಮತದಾರರಿದ್ದಾರೆ.ಈ ಪೈಕಿ 1, 18,000 ಒಕ್ಕಲಿಗ, 44, 000 ಪರಿಶಿಷ್ಟ ಜಾತಿ, 25, 000 ಮುಸ್ಲಿಂ, 16000 ಲಿಂಗಾಯಿತ ಮತ್ತಿತರ ಮತದಾರರಿದ್ದಾರೆ.
ಮಾಜಿ ಶಾಸಕ ಹೆಚ್. ಸಿ ಬಾಲಕೃಷ್ಣ ಪ್ರಬಲ ಒಕ್ಕಲಿಗ ಜನಾಂಗಕ್ಕೆ ಸೇರಿದವರಾಗಿದ್ದು, 1995, 2004, 2008 ಹಾಗೂ 2013ರ ಅವಧಿಯಲ್ಲಿ ಶಾಸಕರಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಕಳೆದ ಬಾರಿಯ ಚುನಾವಣೆಯಲ್ಲಿ ಹೆಚ್. ಸಿ. ಬಾಲಕೃಷ್ಣ 74, 821 ಮತಗಳನ್ನು ಪಡೆದರೆ, ಎ. ಮಂಜು 60, 462, ಬಿಜೆಪಿಯಿಂದ ಸ್ಪರ್ಧಿಸಿದ್ದ ಹೆಚ್. ಎಂ. ಕೃಷ್ಣಮೂರ್ತಿ 27, 143 ಮತಗಳನ್ನು ಪಡೆದಿದ್ದರು.
ಹೆಚ್. ಸಿ ಬಾಲಕೃಷ್ಣ ಕೈಗೊಂಡಿರುವ ಅಭಿವೃದ್ದಿ ಕಾಮಗಾರಿಗಳು
ಬೆಂಗಳೂರು- ಮಾಗಡಿ ಮಾರ್ಗದ ರಸ್ತೆ ಅಭಿವೃದ್ದಿ, ತಿರುಮಲೆ ರಂಗನಾಥ ಸ್ವಾಮಿ ದೇವಾಲಯ ಜೀರ್ಣೋದ್ದಾರ, ಸುಸಜ್ಜಿತ ಸರ್ಕಾರಿ ಬಸ್ ನಿಲ್ದಾಣ, ಪ್ರಥಮ ದರ್ಜೆ ಕಾಲೇಜು ನಿರ್ಮಾಣ , ಕುಡಿಯುವ ನೀರಿನ ಪೂರೈಕೆ , ಮತ್ತಿತರ ಹಲವು ಅಭಿವೃದ್ದಿ ಕಾಮಗಾರಿಗಳು ಬಾಲಕೃಷ್ಣ ಅವರು ಶಾಸಕರಾಗಿದ್ದ ಅವಧಿಯಲ್ಲಿ ಆಗಿದ್ದು, ಈ ಜನಪರ ಕಾರ್ಯಕ್ರಮಗಳೇ ತಮ್ಮ ಗೆಲುವಿಗೆ ಶ್ರೀ ರಕ್ಷೆಯಾಗಲಿವೆ ಎಂದು ಮಾಜಿ ಶಾಸಕ ಹೆಚ್. ಸಿ. ಬಾಲಕೃಷ್ಣ ಹೇಳುತ್ತಾರೆ.
ಹೆಚ್. ಸಿ. ಬಾಲಕೃಷ್ಣ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ನಂತರ ಮತಗಳು ವಿಭಜನೆಯಾಗಬಹುದೆಂಬ ಆತಂಕವಿತ್ತು, ಆದರೆ, ಆ ಆತಂಕ ಸುಳ್ಳಾಗಿದೆ. ಬಾಲಕೃಷ್ಣ ಅವರ ಅಭಿಮಾನಿಗಳು ಕಾಂಗ್ರೆಸ್ ಬೆಂಬಲಿಸುತ್ತಿದ್ದು,ಎಲ್ಲಾ ಕಡೆ ಉತ್ತಮ ಜನ ಬೆಂಬಲ ವ್ಯಕ್ತವಾಗುತ್ತಿದ್ದು, ಬಾಲಕೃಷ್ಣ ಅವರು ಜಯಗಳಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಬೆಸ್ಕಾಂ ನಿರ್ದೇಶಕ ಜಯರಾಮು ವಿಶ್ವಾಸ ವ್ಯಕ್ತಪಡಿಸಿದರು.
ಬಾಲಕೃಷ್ಣ ಅವರ ಅವಧಿಯಲ್ಲಿ ತಾಲೂಕು ಕೇಂದ್ರವಾದ ಮಾಗಡಿ ಸಾಕಷ್ಟು ಅಭಿವೃದ್ದಿಯಾಗಿದ್ದು, ಹಳ್ಳಿಗಳ ಅಭಿವೃದ್ದಿಗೂ ನೆರವಾಗಿದ್ದಾರೆ ಎಂದು ಚಕ್ರಬಾವಿಯ ಯುವ ಮುಖಂಡ ಸಿ. ಟಿ. ನಾಗರಾಜ್ ಹೇಳಿದರು.
ಜೆಡಿಎಸ್ ಆರೋಪ
ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಾಗಡಿ ತಾಲೂಕು ಕೇಂದ್ರ ಅಭಿವೃದ್ದಿಯಾಗಿದೆ. ಆದರೆ ಹಳ್ಳಿಗಳ ಅಭಿವೃದ್ದಿಯಾಗಿಲ್ಲ, ಎಷ್ಟೋ ಹಳ್ಳಿಗಳಿಗೂ ಇಂದಿಗೂ ಕುಡಿಯುವ ನೀರಿಲ್ಲ, ಇಲ್ಲಿ ಯಾವುದೇ ಕೈಗಾರಿಕೆಗಳಿಲ್ಲದಿರುವುದರಿಂದ ಯುವಕರು ಉದ್ಯೋಗ ಅರಸಿ ಬೆಂಗಳೂರಿಗೆ ಹೋಗುವಂತಾಗಿದೆ. ರೈತರಿಗೂ ಸರ್ಕಾರದ ಯೋಜನೆಗಳು ಸರಿಯಾಗಿ ತಲುಪಿಸುವ ನಿಟ್ಟಿನಲ್ಲಿ ಬಾಲಕೃಷ್ಣ ಮುಂದಾಗಿರಲಿಲ್ಲ ಎಂಬುದು ಜೆಡಿಎಸ್ ನಾಯಕರ ಆರೋಪವಾಗಿದೆ.
ಈ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯ ಅಧಿಕ ಸಂಖ್ಯೆಯಲ್ಲಿದ್ದು, ಈ ಸಮುದಾಯದ ಮತಗಳೇ ನಿರ್ಣಾಯಕವಾಗಲಿದೆ. ಜೆಡಿಎಸ್ ನಿಂದ ಸ್ಪರ್ಧಿಸಿರುವ ಎ. ಮಂಜು ಕೂಡಾ ಇದೇ ಸಮುದಾಯಕ್ಕೆ ಸೇರಿದವಾಗಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯರಾಗಿರುವ ಎ. ಮಂಜು ಅಷ್ಟಾಗಿ ಜನರಿಗೆ ಇನ್ನೂ ಹತ್ತಿರವಾಗಿಲ್ಲ, ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಆಡಳಿತಾವಧಿಯಲ್ಲಿನ ಕೆಲಸಗಳನ್ನು ಮುಂದಿಟ್ಟುಕೊಂಡು ಮತಯಾಚಿಸುತ್ತಿದ್ದಾರೆ. ಕಿಮ್ಸ್ ನಿರ್ದೇಶಕ ಕೃಷ್ಣಮೂರ್ತಿ ಹಾಗೂ ಜೇಡರಹಳ್ಳಿ ಕೃಷ್ಣಪ್ಪ ಎ. ಮಂಜು ಪರ ಪ್ರಚಾರದಲ್ಲಿ ನಿರತವಾಗಿದ್ದು, ಗೆಲ್ಲುವು ನಮ್ಮದೇ ಎಂದು ಹೇಳುತ್ತಿದ್ದಾರೆ.
ಆದರೆ, ಯಾರೇ ಗೆದ್ದರೂ ಅಂತರ ಕಡಿಮೆ ಪ್ರಮಾಣದಾಗಿರುತ್ತದೆ. ಮತದಾರ ಪ್ರಭು ಯಾರ ಕೊರಳಿಗೆ ವಿಜಯಮಾಲೆ ಹಾಕಲಿದ್ದಾರೆ ಎಂಬುದನ್ನು ತಿಳಿಯಲು ಮೇ 15ರವರೆಗೂ ಕಾಯಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


