ರಾಜಕೀಯ

'ಅನ್ಯರಿಗೆ ಪಾಠ ಹೇಳುವ ಮುನ್ನ ನಿಮ್ಮ ಪಕ್ಷದ ಹಿರಿಯರ ಗೌರವಿಸಿ': ಪ್ರಧಾನಿ ಮೋದಿಗೆ ಖರ್ಗೆ ತಿರುಗೇಟು

ದೇವೇಗೌಡರ ಕುರಿತಂತೆ ಕಾಂಗ್ರೆಸ್ ಪಕ್ಷಕ್ಕೆ 'ಹಿರಿಯರ ಗೌರವಿಸಿ' ಪಾಠ ಮಾಡುವ ಮುನ್ನ ನಿಮ್ಮದೇ ಪಕ್ಷದ ಹಿರಿಯರನ್ನು ಮೊದಲು ಗೌರವಿಸುವುದನ್ನು ಕಲಿಯಿರಿ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿಗೆ ತಿರುಗೇಟು ನೀಡಿದ್ದಾರೆ.

'ಅನ್ಯರಿಗೆ ಪಾಠ ಹೇಳುವ ಮುನ್ನ ನಿಮ್ಮ ಪಕ್ಷದ ಹಿರಿಯರ ಗೌರವಿಸಿ': ಪ್ರಧಾನಿ ಮೋದಿಗೆ ಖರ್ಗೆ ತಿರುಗೇಟು
ಸಂಗ್ರಹ ಚಿತ್ರ
Published On :
ಕಲಬುರಗಿ: ದೇವೇಗೌಡರ ಕುರಿತಂತೆ ಕಾಂಗ್ರೆಸ್ ಪಕ್ಷಕ್ಕೆ 'ಹಿರಿಯರ ಗೌರವಿಸಿ' ಪಾಠ ಮಾಡುವ ಮುನ್ನ ನಿಮ್ಮದೇ ಪಕ್ಷದ ಹಿರಿಯರನ್ನು ಮೊದಲು ಗೌರವಿಸುವುದನ್ನು ಕಲಿಯಿರಿ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿಗೆ ತಿರುಗೇಟು ನೀಡಿದ್ದಾರೆ.
ನಿನ್ನೆ ಚಾಮರಾಜನಗರ ಜಿಲ್ಲೆಯ ಹೊರವಲಯದ ಸಂತೆ ಮರಹಳ್ಳಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡು  ಮಾತನಾಡಿದ್ದ ಪ್ರಧಾನಿ ಮೋದಿ, ಜೆಡಿಎಸ್ ವರಿಷ್ಠ ದೇವೇಗೌಡರನ್ನು ಹಾಡಿ ಹೊಗಳಿಸಿದ್ದರು. ಕಾಂಗ್ರೆಸ್ ಪಕ್ಷದ ನಾಯಕರು ದೇವೇಗೌಡರನ್ನು ಪಕ್ಷದ ಸಭೆ ಸಮಾರಂಭಗಳಲ್ಲಿ ಅಗೌರವದಿಂದ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದರು. ಅಲ್ಲದೆ ತಾವು ದೇವೇಗೌಡರನ್ನು ಗೌರವದಿಂದ ನಡೆಸಿಕೊಳ್ಳುವುದಾಗಿಯೂ, ಯಾವಾಗಲೇ ದೆಹಲಿಗೆ ಬಂದರೂ ಅವರನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದರು. 
ಇದಕ್ಕೆ ಇಂದು ತಿರುಗೇಟು ನೀಡಿರುವ ಮಲ್ಲಿಕಾರ್ಜುನ ಖರ್ಗೆ ಅವರು, ಪ್ರಧಾನಿ ಮೋದಿ ಅವರು, ದೇವೇಗೌಡರು ಹಿರಿಯರು ಎನ್ನುವ ಕಾರಣಕ್ಕೆ ಗೌರವದಿಂದ ಮಾತನಾಡುತ್ತಿರಬಹುದು. ಆದರೆ ಮೊದಲು ಅವರ ಪಕ್ಷದ ಹಿರಿಯರಿಗೆ ಗೌರವ ಕೊಡುವುದನ್ನು ಮೋದಿ ಕಲಿಯಲಿ. ಅಡ್ವಾಣಿ, ಜೋಷಿ ನಮಸ್ಕಾರ ಹೇಳಿದರೂ ಪ್ರತಿ ನಮಸ್ಕಾರ ಹೇಳುವ ಸೌಜನ್ಯ ಮೋದಿಗೆ ಇಲ್ಲ ಎಂದು ಖರ್ಗೆ ಹೇಳಿದ್ದಾರೆ.
ಕಲಬುರಗಿಯಲ್ಲಿ ಪಕ್ಷದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರು, ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿಗೆ ಗೌರವ ನೀಡದ ಪ್ರಧಾನಿ‌‌ ಮೋದಿ  ಚುನಾವಣೆಗಾಗಿ ಈ ರೀತಿ ಮಾಡುವ ಗಿಮಿಕ್ ನಡೆಯೋದಿಲ್ಲ. ಕಾರ್ಪೆಟ್ ಬಾಂಬಿಂಗ್ ಮಾಡ್ತಿನಿ ಎನ್ನುವ ಮೋದಿಯ ಬಾಂಬ್ ಡೆಫ್ಯೂಸ್ ಮಾಡುವ ಅಸ್ತ್ರಗಳು ನಮ್ಮಲ್ಲಿವೆ. ನಮ್ಮಲ್ಲಿನ ಪ್ರತ್ಯಾಸ್ತ್ರಗಳ ಮೂಲಕ ಮೋದಿ ಬಾಂಬ್ ರೆಫ್ಯೂಸ್ ಮಾಡುವ ಕಲೆ ನಮಗೂ ಗೊತ್ತು . ಕಾಂಗ್ರೆಸ್ ನಾಶ ಮಾಡಲು ನೀವು ಎಷ್ಟೇ ಮಣ್ಣೊಳಗೆ ಹೂತರೂ ಸಸಿಯಾಗಿ ಮೇಲೆಳುವುದೇ ಅದರ ಗುಣ ಎಂದು ತಿರುಗೇಟು ನೀಡಿದರು.
ಇದೇ ವೇಳೆ ಪ್ರಧಾನಿ ಮೋದಿ ಅಶಕ್ತ ಬಿಜೆಪಿಗೆ ಟಾನಿಕ್ ಕೊಡಲು ಬಂದಿಲ್ಲ. ಕಾಂಗ್ರೆಸ್ ನಾಶ ಮಾಡುವ ಮಾತನಾಡಲು ಬಂದಿದ್ದಾರೆ. ಇದನ್ನು ಜನ ತೀರ್ಮಾನಿಸಬೇಕೇ ಹೊರತು ಮೋದಿಯಲ್ಲ. ಕರ್ನಾಟಕದ ಜನ ಮೋದಿ, ಬಿಜೆಪಿ, ಆರ್‌ಎಸ್‌ಎಸ್‌ ಗುಲಾಮರಾಗಲು ಇಷ್ಟಪಡುತ್ತಿಲ್ಲ. ಗುಜರಾತ್ ಜನ ಮೋದಿಗೆ ಯಾವ ರೀತಿ ಪೆಟ್ಟು ಕೊಟ್ಟಿದ್ದಾರೆ ಎಂಬುದು ಇನ್ನೂ ಅವರ ಅರಿವಿಗೆ ಬಂದಂತಿಲ್ಲ. ಹೋದಲೆಲ್ಲಾ ನೆಹರೂ ಕಟುಂಬವನ್ನೂ ಕೀಳಾಗಿ ಟೀಕಿಸುತ್ತಿದ್ದಾರೆ. ದೇಶದ ಅಭಿವೃದ್ಧಿಯ ಮಾತು ಬಿಟ್ಟು ಸಣ್ಣ ಸಣ್ಣ ಮಾತನಾಡುವುದು ಸರಿಯಲ್ಲ ಎಂದು ಖರ್ಗೆ ಕಿಡಿಕಾರಿದರು.
ದೇಶದಲ್ಲಿ ಅಲ್ಪಸಂಖ್ಯಾತರು, ದಲಿತರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದೆ. NCRB ವರದಿ ಪ್ರಕಾರ ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ ಸೇರಿ ಇತರೆಡೆ ಶೇಕಡ 27ರಷ್ಟು ಅಪರಾಧ ಪ್ರಕರಣಗಳು ಹೆಚ್ಚಿದೆ. ಫಸಲ್ ಭೀಮಾ ಯೋಜನೆ ಸೇರಿ ಕೇಂದ್ರದ ಎಲ್ಲ ಯೋಜನೆಗಳು ಕಾರ್ಪೋರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡುವಂತದ್ದು. ‘ಹಸಿರು ಕ್ರಾಂತಿ’ ‘ಬಿಳಿ ಕ್ರಾಂತಿ’ ನಮ್ಮ ಸರ್ಕಾರ ಮಾಡಿರುವಂತದ್ದು. ನಾವು ಜನಪರ ಕೆಲಸ ಮಾಡಿದ್ದೇವೆ, ಅವರು ಕೇವಲ ಮಾತುಗಳನ್ನಾಡುತ್ತಾರೆ ಎಂದು ಖರ್ಗೆ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.