ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೋರಾಟಕ್ಕೆ ಸಿದ್ದರಾಮಯ್ಯ ಶಕ್ತಿ ಅತಿಮುಖ್ಯ!
ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯನವರು ಕೇವಲ ಮಾಜಿ ಮುಖ್ಯಮಂತ್ರಿಗಳು ಮಾತ್ರವಲ್ಲ. ಅವರು...

ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯನವರು ಕೇವಲ ಮಾಜಿ ಮುಖ್ಯಮಂತ್ರಿಗಳು ಮಾತ್ರವಲ್ಲ. ಅವರು ಬೇರೆ ಮಾಜಿ ಮುಖ್ಯಮಂತ್ರಿಗಳಿಂದ ಭಿನ್ನ. ಪ್ರಸ್ತುತ ರಾಜಕಾರಣದಲ್ಲಿ ಕಾಂಗ್ರೆಸ್ ಗೆ ಅವರ ಅನಿವಾರ್ಯತೆ ಸಾಕಷ್ಟಿದೆ. ಪಕ್ಷದ ಅತಿ ದೊಡ್ಡ ನಿರ್ಧಾರ ಮಾಡುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಅವರೇ ಈಗ ಉಸ್ತುವಾರಿ.
ಸಿದ್ದರಾಮಯ್ಯನವರ ರಾಜಕೀಯ ಅನುಭವ, ಅವರ ಸಾಮೂಹಿಕ ವರ್ಚಸ್ಸು, ದಲಿತ ಸಮುದಾಯದವರ ನಾಯಕ ಎಂಬ ಹಣೆಪಟ್ಟಿ, ವಿಧಾನಸಭೆ ಚುನಾವಣೆಗೆ ಮುನ್ನ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದು, ಪ್ರಧಾನಿ ಮೋದಿ ವಿರುದ್ಧವೇ ರಾಜಕೀಯ ಹೋರಾಟ, ಮೂಲ ಕಾಂಗ್ಗೆಸ್ಸಿಗರಲ್ಲ ಎಂಬ ಇಮೇಜ್ ಇವೆಲ್ಲವೂ ಸಿದ್ದರಾಮಯ್ಯನವರಿಗೆ ವರವಾಗಿದ್ದು ಇದರ ಫಲವೇ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅವರನ್ನು ಹೈಕಮಾಂಡ್ ಮುಖ್ಯವಾಹಿನಿಗೆ ತರಲಿಚ್ಛಿಸುತ್ತಿರುವುದು.
ಸಿದ್ದರಾಮಯ್ಯನವರು ಮೂಲ ಕಾಂಗ್ರೆಸ್ಸಿಗ ಅಲ್ಲ, ಹೊರಗಿನಿಂದ ಬಂದವರು ಎಂಬ ಮಾತು ಅವರ ರಾಜಕೀಯ ಜೀವನದಲ್ಲಿ ಅವರಿಗೆ ಟಾಂಗ್ ನೀಡುತ್ತಲೇ ಇತ್ತು. ಆದರೆ ಅದೇ ಮಾತು ಅವರಿಗೀಗ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ವಿರುದ್ಧವಾಗಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದೇ ಹೇಳಲಾಗುತ್ತಿದೆ. ಕಾಂಗ್ರೆಸ್ಸೇತರ ಎಂಬ ಸಿದ್ದರಾಮಯ್ಯನವರ ಹಣೆಪಟ್ಟೆ ಅವರನ್ನು ಮುಂದಿನ ಚುನಾವಣೆಯಲ್ಲಿ ಇತರ ಬೇರೆ ಪಕ್ಷಗಳನ್ನು ಒಗ್ಗೂಡಿಸಿ ಬಿಜೆಪಿ ವಿರುದ್ಧ ಹೋರಾಡಲು ಪ್ರಮುಖ ಅಸ್ತ್ರ ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ಹೈಕಮಾಂಡ್ ನದ್ದು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿನ ರಾಜಕೀಯ ಹೋರಾಟ ಸಿದ್ದರಾಮಯ್ಯ ವರ್ಸಸ್ ಮೋದಿಯವರ ಮಧ್ಯೆ ಏರ್ಪಟ್ಟಂತೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೂಡ ಸಿದ್ದರಾಮಯ್ಯನವರನ್ನು ಮುಂದೆ ಇಟ್ಟುಕೊಂಡು ರಾಜಕೀಯ ಹೋರಾಟಕ್ಕೆ ಧುಮುಕುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದ್ದಂತಿದೆ.
ಸಿದ್ದರಾಮಯ್ಯನವರನ್ನು ಹಲವು ಸಲ ರಾಜಕಾರಣದಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ಹೋಲಿಸಿದ್ದುಂಟು. ಸ್ಥಳೀಯ ಮಟ್ಟದಲ್ಲಿ ಮೈತ್ರಿ ರಚಿಸುವ ಸಾಮರ್ಥ್ಯ ಅವರಿಗಿದೆ ಎಂದು ಹೇಳಲಾಗುತ್ತಿದೆ. ಆ ಮಟ್ಚಿನ ವರ್ಚಸ್ಸು ಮತ್ತು ಸಾಮರ್ಥ್ಯ ಕಾಂಗ್ರೆಸ್ ನಲ್ಲಿ ಕೆಲವರಿಗೆ ಮಾತ್ರ ಇದೆಯಷ್ಟೆ. ರಾಹುಲ್ ಗಾಂಧಿಯವರಿಗೆ ಸಿದ್ದರಾಮಯ್ಯನವರನ್ನು ಕಂಡು ತುಸು ಪ್ರೀತಿ ಹೆಚ್ಚು. ಹೀಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಸ್ಥಾನ ನೀಡುವ ಒಲವಿನಲ್ಲಿದ್ದಾರೆ. ಆದರೆ ಸಿದ್ದರಾಮಯ್ಯನವರೇ ಅದಕ್ಕೆ ಒಪ್ಪುತ್ತಿಲ್ಲ ಎನ್ನುತ್ತಾರೆ ಕಾಂಗ್ರೆಸ್ ನ ಶಾಸಕರೊಬ್ಬರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಈ ಮಾತನ್ನು ಒಪ್ಪುತ್ತಾರೆ. ಎಲ್ಲಾ ಪಕ್ಷಗಳಲ್ಲಿಯೂ ಸಿದ್ದರಾಮಯ್ಯನವರಿಗೆ ಆಪ್ತರು ಇದ್ದಾರೆ. ತೃತೀಯ ರಂಗ ರಾಷ್ಟ್ರೀಯ ಮಟ್ಟದಲ್ಲಿ ರಚನೆಯಾದರೆ ಅಲ್ಲಿ ಸಿದ್ದರಾಮಯ್ಯನವರು ಪ್ರಮುಖ ಪಾತ್ರ ವಹಿಸುತ್ತಾರೆ ಎನ್ನುತ್ತಾರೆ.
ಆದರೆ ಕೆಲವು ರಾಜಕೀಯ ವಿಶ್ಲೇಷಕರು ಈ ಮಾತನ್ನು ಒಪ್ಪುವುದಿಲ್ಲ. ಸಿದ್ದರಾಮಯ್ಯನವರಿಗೆ ಎಲ್ಲಾ ಪಕ್ಷಗಳಲ್ಲಿ ಆಪ್ತರು ಇದ್ದಾರೆ ನಿಜ, ಆದರೆ ಅವರು ಪಕ್ಷವನ್ನು ನಿರ್ಧರಿಸುವವರು ಆಗುತ್ತಾರೆಯೇ ಎಂದು ಕೇಳುತ್ತಾರೆ ರಾಜಕೀಯ ತಜ್ಞ ಡಾ ಸಂದೀಪ್ ಶಾಸ್ತ್ರಿ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಸಿದ್ದರಾಮಯ್ಯನವರ ಸೇರ್ಪಡೆ ಕಾಂಗ್ರೆಸ್ ಗೆ ಕರ್ನಾಟಕ ಎಷ್ಟು ಅನಿವಾರ್ಯ ಎಂಬುದನ್ನು ತೋರಿಸುತ್ತದೆ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಹಿಂದುಳಿದ ನಾಯಕ ಸಿದ್ದರಾಮಯ್ಯನವರಿಗೆ ಸ್ಥಾನ ನೀಡಲಾಗುತ್ತಿದೆ. ಕಾಂಗ್ರೆಸ್ ಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೆಚ್ ಡಿ ಕುಮಾರಸ್ವಾಮಿಯವರು ಮುಖ್ಯವಾಗುವುದಿಲ್ಲ. ಬಿಜೆಪಿ ವಿರುದ್ಧ ಎಲ್ಲಾ ಪಕ್ಷಗಳ ಒಗ್ಗಟ್ಟನ್ನು ತೋರಿಸಲು ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಹೆಚ್ ಡಿ ಕುಮಾರಸ್ವಾಮಿ ಪ್ರಮಾಣವಚನ ವೇದಿಕೆಯಾಗಿತ್ತು.
ರಾಷ್ಟ್ರಮಟ್ಟದಲ್ಲಿ ಮಾಯಾವತಿ, ಲಾಲೂ ಪ್ರಸಾದ್ ಯಾದವ್, ಮುಲಾಯಂ ಸಿಂಗ್ ಯಾದವ್ ಮತ್ತು ಶರದ್ ಪವಾರ್ ಅವರ ಜೊತೆಗೆ ಸಿದ್ದರಾಮಯ್ಯನವರನ್ನು ದಲಿತ ಮುಖಂಡನಾಗಿ ಗುರುತಿಸಲು ಕಾಂಗ್ರೆಸ್ ಹೈಕಮಾಂಡ್ ಬಯಸಿದಂತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


