ರಾಜಕೀಯ ಪ್ರಾಬಲ್ಯ ಸಾಧಿಸಲು ಶಕ್ತಿ ಪ್ರದರ್ಶನಕ್ಕೆ ವೀರಶೈವ, ಲಿಂಗಾಯತ ಮುಖಂಡರು ಮುಂದು
ಪ್ರತ್ಯೇಕ ಧಾರ್ಮಿಕ ಸ್ಥಾನಮಾನಕ್ಕಾಗಿ ವೀರಶೈವ ಮತ್ತು ಲಿಂಗಾಯತ ನಾಯಕರು ಒತ್ತಾಯ ಮಾಡುತ್ತಿರುವಂತಹ ಸಂದರ್ಭದಲ್ಲಿ...

Published On :
ಮೈಸೂರು: ಪ್ರತ್ಯೇಕ ಧಾರ್ಮಿಕ ಸ್ಥಾನಮಾನಕ್ಕಾಗಿ ವೀರಶೈವ ಮತ್ತು ಲಿಂಗಾಯತ ನಾಯಕರು ಒತ್ತಾಯ ಮಾಡುತ್ತಿರುವಂತಹ ಸಂದರ್ಭದಲ್ಲಿ, ಮೈಸೂರು ಪ್ರಾಂತ್ಯದಲ್ಲಿ ಎರಡೂ ಗುಂಪುಗಳ ಮುಖಂಡರು ಒಟ್ಟಾಗಿ ಸೇರಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಧರ್ಮದ ರಾಜಕೀಯ ಮುಖಂಡರಿಗೆ ಎಲ್ಲಾ ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಲು ಸಾಧ್ಯವಾದಷ್ಟು ಟಿಕೆಟ್ ಗಳನ್ನು ಪಡೆಯಲು ಹವಣಿಸುತ್ತಿದ್ದಾರೆ.
ಪ್ರಸ್ತುತ ಮೈಸೂರು ಭಾಗದಲ್ಲಿ 49 ವಿಧಾನಸಭಾ ಕ್ಷೇತ್ರಗಳಲ್ಲಿ ಲಿಂಗಾಯತ ಮತ್ತು ವೀರಶೈವ ಗುಂಪಿನ ಶಾಸಕರ ಸಂಖ್ಯೆ ಕೇವಲ ಇಬ್ಬರು.
ಈ ಸಮುದಾಯಗಳಿಂದ ಈ ಹಿಂದೆ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಇದ್ದರೂ ಕೂಡ ವರುಷಗಳು ಉರುಳುತ್ತಾ ಹೋದಂತೆ ಕೆಲವು ರಾಜಕೀಯ ಪಕ್ಷಗಳು ವೀರಶೈವಯೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದರಿಂದ ವೀರಶೈವ-ಲಿಂಗಾಯತ ಧರ್ಮದ ಶಾಸಕರ ಸಂಖ್ಯೆ ಕಡಿಮೆಯಾಯಿತು. ಒಕ್ಕಲಿಗ ಸಮುದಾಯದ ರಾಜಕೀಯ ಮುಖಂಡರು ಹೆಚ್ಚಿನ ಮತ ಗಳಿಸುವಲ್ಲಿ ಯಶಸ್ವಿಯಾಗುತ್ತಿದ್ದರು.
ರಾಜಕೀಯ ಪಕ್ಷಗಳಿಂದ ತಮಗೆ ಸಿಗುವ ಅನಾದರ ಮತ್ತು ಅಗೌರವಗಳಿಂದ ವೀರಶೈವ ಮುಖಂಡರು ಬೇಸತ್ತು ಹೋಗಿದ್ದರು. ಇದೀಗ ರಾಜಕೀಯ ಪಕ್ಷಗಳ ಮುಖಂಡರಿಗೆ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ. ಒಕ್ಕಲಿಗ ಸಮುದಾಯದವರು ಹೆಚ್ಚಾಗಿರುವ ಮೈಸೂರು ಭಾಗದಲ್ಲಿ ಒಂದೇ ಸೂರಿನಡಿ ತಮ್ಮ ಶಕ್ತಿ ಪ್ರದರ್ಶಿಸಲು ವೀರಶೈವ ಮತ್ತು ಲಿಂಗಾಯತ ಧರ್ಮದ ಮುಖಂಡರು ಮುಂದಾಗಿದ್ದಾರೆ.
ಈ ಹಿಂದೆ ವೀರೇಂದ್ರ ಪಾಟೀಲ್, ಜೆ.ಹೆಚ್.ಪಟೇಲ್ ಮತ್ತು ಎಸ್.ಆರ್.ಬೊಮ್ಮಾಯಿ ಅವರಂಥ ನಾಯಕರಿಗೆ ಜೆಡಿಎಸ್ ನಾಯಕ ಹೆಚ್.ಡಿ.ದೇವೇಗೌಡ ಅವರು ನಂಬಿಕೆಗೆ ದ್ರೋಹವೆಸಗಿದ್ದರು ಎಂದು ಕೋಪವಿದ್ದರೂ ಕೂಡ ಇದೀಗ ಹಳೆಯ ಕೋಪ, ದ್ವೇಷಗಳನ್ನೆಲ್ಲ ಮರೆತು ತಮ್ಮ ಸಮುದಾಯಗಳ ಆಕಾಂಕ್ಷಿಗಳಿಗೆ ಟಿಕೆಟ್ ಪಡೆಯಲು ಜೆಡಿಎಸ್ ನ ಬಾಗಿಲು ತಟ್ಟುತ್ತಿದ್ದಾರೆ.
ತಮಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂದು ಒತ್ತಾಯಿಸಿ ಮೈಸೂರು ನಗರದಲ್ಲಿ ರ್ಯಾಲಿ ನಡೆಸಲು ವೀರಶೈವ-ಲಿಂಗಾಯತ ವೇದಿಕೆ ಅಧ್ಯಕ್ಷ ಮತ್ತು ಮಾಜಿ ಶಾಸಕ ಹೆಚ್.ಸಿ.ಬಸವರಾಜು ಮುಂದಾಗಿದ್ದಾರೆ.
ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ವೀರಶೈವ ಶಾಸಕರ ಸಂಖ್ಯೆ ವಿಧಾನಸಭೆಯಲ್ಲಿ ಕಡಿಮೆಯಾಗಿದೆ. ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಹೆಚ್ ಡಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಮೈಸೂರು ಭಾಗದಲ್ಲಿ ವೀರಶೈವ-ಲಿಂಗಾಯತ ಅಭ್ಯರ್ಥಿಗಳಿಗೆ ಹೆಚ್ಚು ಟಿಕೆಟ್ ನೀಡಬೇಕೆಂದು ಮನವಿ ಮಾಡಲು ನಿರ್ಧರಿಸಿದ್ದೇವೆ ಎಂದರು.
ಹಳೆ ಮೈಸೂರು ಭಾಗಗಳಲ್ಲಿ ಒಕ್ಕಲಿಗ ಸಮುದಾಯದ ಪ್ರಾಬಲ್ಯ ಮುಂದುವರಿದಿದ್ದು, ಇಲ್ಲಿ ವೀರಶೈವ ಮುಖಂಡರ ಮಧ್ಯೆ ಒಗ್ಗಟ್ಟು ಇಲ್ಲವಾಗಿದೆ. ಈ ನಿಟ್ಟಿನಲ್ಲಿ ತಮ್ಮ ಸಮುದಾಯದಲ್ಲಿ ಒಗ್ಗಟ್ಟಿನ ಶಕ್ತಿ ಪ್ರದರ್ಶಿಸಲು ಬೀದಿಗಿಳಿದು ರ್ಯಾಲಿ ನಡೆಸಲು ಮುಂದಾಗಿದ್ದೇವೆ ಎಂದು ಶಾಸಕ ಗುರುದೇವ್ ತಿಳಿಸಿದ್ದಾರೆ.
ಮೈಸೂರಿನ 49 ವಿಧಾನಸಭಾ ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಾದರೂ ವೀರಶೈವ ಮತ್ತು ಲಿಂಗಾಯತ ಅಭ್ಯರ್ಥಿಗಳು ಗೆಲ್ಲಬೇಕೆಂದು ವೀರಶೈವ-ಲಿಂಗಾಯತ ವೇದಿಕೆಯ ಸದಸ್ಯರು ಬಯಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Lingayatಲಿಂಗಾಯತpolitical representationರಾಜಕೀಯ ಪ್ರಾತಿನಿಧ್ಯVeerashaivaವೀರಶೈವMysore divisionಮೈಸೂರು ಭಾಗಗಳು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


