ಕರ್ನಾಟಕ ವಿಧಾನಸಭೆ ಚುನಾವಣೆ: ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಪ್ರಬಲ ರಾಜಕೀಯ ಕದನ!
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪರ್ಧಿಸುತ್ತಿರುವ ಕ್ಷೇತ್ರ ಅಥವಾ ಬಿ.ಎಸ್.ಯಡಿಯೂರಪ್ಪನವರು ....

Published On :
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪರ್ಧಿಸುತ್ತಿರುವ ಕ್ಷೇತ್ರ ಅಥವಾ ಬಿ.ಎಸ್.ಯಡಿಯೂರಪ್ಪನವರು ಶಿವಮೊಗ್ಗದಲ್ಲಿ ಕಣಕ್ಕಿಳಿಯುತ್ತಿರುವ ಕ್ಷೇತ್ರವಲ್ಲ ಹೆಚ್ಚು ಸುದ್ದಿ ಮಾಡುತ್ತಿರುವುದು.
ಬೆಂಗಳೂರು ಗ್ರಾ ಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬರುವ ವಿಧಾನಸಭೆ ಕ್ಷೇತ್ರಗಳಲ್ಲಿ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರ ಕುಟುಂಬದವರು ಮತ್ತು ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರು ಸ್ಪರ್ಧಿಸುತ್ತಿರುವ ಕ್ಷೇತ್ರಗಳು ದಿನೇ ದಿನೇ ಕಾವೇರುತ್ತಿವೆ.
ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಅವರ ಕುಟುಂಬದ ಮತ್ತೊಂದು ಕುಡಿ ಹೆಚ್.ಡಿ.ರೇವಣ್ಣ ಅವಪ ಪುತ್ರ ಪ್ರಜ್ವಲ್ ರೇವಣ್ಣ ರಾಜಕೀಯ ಕಣಕ್ಕಿಳಿದು ಡಿಕೆಶಿ ಸೋದರರ ವಿರುದ್ಧ ಸ್ಪರ್ಧಿಸಲಿದ್ದಾರೆ. ಕರ್ನಾಟಕ ಚುನಾವಣಾ ಯುದ್ಧದ ಕುರುಕ್ಷೇತ್ರ ಎಂದೇ ಈ ಕ್ಷೇತ್ರಗಳನ್ನು ಕರೆಯಲಾಗುತ್ತಿದ್ದು ಒಂದು ಚುನಾವಣೆಯಲ್ಲಿ ಕಂಡುಬರುವ ಎಲ್ಲಾ ಅಂಶಗಳಾದ ದ್ವೇಷ, ಒಳಸಂಚು, ಮೋಸ ಮತ್ತು ರಹಸ್ಯ ಒಪ್ಪಂದಗಳು ಇವೆಲ್ಲವೂ ಇಲ್ಲಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತವೆ.

ಅನಿತಾ ಮತ್ತು ಪ್ರಜ್ವಲ್ ಸ್ಪರ್ಧೆಗೆ ಸಿದ್ಧ: ನಿರ್ಮಾಪಕ ಶಾಸಕ ಮುನಿರತ್ನ ಅವರ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರ ಕುರುಕ್ಷೇತ್ರ ರಾಜ್ಯ ವಿಧಾನಸಭೆ ಚುನಾವಣೆ ಹೊತ್ತಿಗೆ ತೆರೆಗೆ ಬರುವ ನಿರೀಕ್ಷೆಯಿದ್ದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣರನ್ನು ಚುನಾವಣಾ ಕಣಕ್ಕಿಳಿಸಿದರೆ ಚುನಾವಣಾ ಕಾವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಮುನಿರತ್ನ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಮೂಲಕ ಸ್ಪರ್ಧಿಸಿದರೆ ಯಾವುದೇ ಆಶ್ಚರ್ಯವಿಲ್ಲ. ರಾಮನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕುಮಾರಸ್ವಾಮಿಯವರಿಗೆ ಈ ಬಾರಿ ಹಾದಿ ಸುಗಮವಾಗಿದೆ ಎನ್ನಬಹುದು. ಏಕೆಂದರೆ ಕಾಂಗ್ರೆಸ್ ಮತ್ತು ಬಿಜೆಪಿ ಇಲ್ಲಿ ಸ್ಪರ್ಧೆಗಿಳಿಯಲು ಇನ್ನೂ ಪ್ರಬಲ ಅಭ್ಯರ್ಥಿಗಳನ್ನು ಹುಡುಕುತಿದ್ದಾರೆ. ಇದೇ ರೀತಿ ಪಿ.ಜಿ.ಆರ್.ಸಿಂಧ್ಯಾ ಅವರಿಂದ ಕಸಿದುಕೊಂಡ ಕನಕಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಡಿ.ಕೆ.ಶಿವಕುಮಾರ್ ಎದುರು ಕೂಡ ಜೆಡಿಎಸ್ ಮತ್ತು ಬಿಜೆಪಿಯ ಪ್ರಬಲ ಸ್ಪರ್ಧಿಗಳಿಲ್ಲ.
ಯೋಗೇಶ್ವರ್ ಸೋಲಿಸಲು ಕಾಂಗ್ರೆಸ್-ಜೆಡಿಎಸ್ ಒಪ್ಪಂದ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಈ ಬಾರಿಯ ಚುನಾವಣೆಯಲ್ಲಿ ಕುತೂಹಲ ಮೂಡಿಸಲಿದ್ದು, ಸಮಾಜವಾದಿ ಪಕ್ಷದ ಶಾಸಕ ಸಿ.ಪಿ.ಯೋಗೇಶ್ವರ್ ಬಿಜೆಪಿ ಸೇರಿಕೊಂಡಿದ್ದಾರೆ. ಒಕ್ಕಲಿಗ ಸಮುದಾಯದವರು ಹೆಚ್ಚಾಗಿರುವ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಈ ಬಾರಿ ಕಮಲ ಅರಳುವ ಸಾಧ್ಯತೆಯಿದೆ.
ಕೆಲ ದಿನಗಳ ಹಿಂದೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ 571 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಿದ್ದಾರೆ. ಇಲ್ಲಿ ತಮ್ಮ ಸಾಮಾನ್ಯ ಶತ್ರು ಯೋಗೇಶ್ವರ್ ರನ್ನು ಸೋಲಿಸಲು ಡಿ.ಕೆ.ಶಿವಕುಮಾರ್ ಮತ್ತು ಹೆಚ್.ಡಿ.ಕುಮಾರಸ್ವಾಮಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅನಿತಾ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಿ ಗೆಲ್ಲಿಸುವುದು ಇವರ ತಂತ್ರ, ಇದಕ್ಕೆ ಈಗಾಗಲೇ ರಹಸ್ಯ ಒಪ್ಪಂದಗಳು ಕೂಡ ನಡೆದಿವೆಯೆಂದು ರಾಜಕೀಯ ಪಂಡಿತರು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಯೋಗೇಶ್ವರ್ ಅವರನ್ನು ರಾಜಕೀಯವಾಗಿ ಮುಗಿಸಲು ಅಗತ್ಯಬಿದ್ದರೆ ಡಿ.ಕೆ.ಸುರೇಶ್ ಸ್ಪರ್ಧೆಗಿಳಿಯುವುದಾಗಿ ಹೇಳಿಕೊಂಡಿದ್ದಾರೆ. ಇಲ್ಲಿ ಯೋಗೇಶ್ವರ್ ಪ್ರಬಲ ಸ್ಪರ್ಧಿಯಾಗಿದ್ದು, ತಮ್ಮ ಸ್ವಂತ ಬಲದಿಂದ ಗೆಲ್ಲುವ ತಾಕತ್ತು ಹೊಂದಿದ್ದಾರೆ.

ಮಾಗಡಿ ಕ್ಷೇತ್ರ ಇನ್ನೊಂದು ಕುತೂಹಲಕ್ಕೆ ಕಾರಣವಾಗಿರುವ ವಿಧಾನಸಭಾ ಕ್ಷೇತ್ರ. ಇಲ್ಲಿ ಈಗಾಗಲೇ ಇರುವ ಜೆಡಿಎಸ್ ಶಾಸಕ ಬಾಲಕೃಷ್ಣ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಡಿ.ಕೆ.ಶಿವಕುಮಾರ್ ಇವರನ್ನು ತಮ್ಮ ಪಕ್ಷದತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದು ಈ ಮೂಲಕ ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಮಂಡ್ಯ ಕ್ಷೇತ್ರಗಳನ್ನು ಭದ್ರ ಮಾಡಿಕೊಳ್ಳುವ ಆಕಾಂಕ್ಷೆ ಡಿಕೆ ಸೋದರರದ್ದು.
ತಮ್ಮ ಪುತ್ರ ಹೆಚ್.ಡಿ.ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿಯೇ ತೀರಬೇಕೆಂದು ಪಣತೊಟ್ಟಿರುವ ದೇವೇಗೌಡರು, ಸಿ.ಪಿ.ಯೋಗೇಶ್ವರ್ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಕ್ಕಲಿಗ ಮತಗಳನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿರುವ ಬಿಜೆಪಿಯಿಂದಾಗಿ ಈ ಬಾರಿಯ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಖಂಡಿತಾ ಕುತೂಹಲ ಮೂಡಿಸುವುದರಲ್ಲಿ ಸಂಶಯವಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
DK ShivakumarHD Kumaraswamyಡಿಕೆ ಶಿವಕುಮಾರ್ಹೆಚ್ ಡಿ ಕುಮಾರಸ್ವಾಮಿCP YogeshwarBengaluru Ruralಬೆಂಗಳೂರು ಗ್ರಾಮಾಂತರDK Sureshಡಿಕೆ ಸುರೇಶ್ಸಿಪಿ ಯೋಗೇಶ್ವರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


