14ನೇ ಕರ್ನಾಟಕ ವಿಧಾನಸಭೆಗೆ ತೆರೆ; ವಿದಾಯ ಭಾಷಣ ಮಾಡಿದ ಸಿಎಂ ಸಿದ್ದರಾಮಯ್ಯ
ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತರ ಕೊಟ್ಟ ನಂತರ ಹಣಕಾಸು ಮಸೂದೆಯ ಅನುಮೋದನೆ ನಂತರ ....

ಬೆಂಗಳೂರು: ಹಣಕಾಸು ಮಸೂದೆಯ ಅನುಮೋದನೆ ಬಳಿಕ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತರ ಕೊಟ್ಟ ನಂತರ 14ನೇ ಕರ್ನಾಟಕ ವಿಧಾನಸಭೆ ಕಲಾಪವನ್ನು ಸದನ ಸದಸ್ಯರ ನಿಷ್ಠುರ ಮಾತುಗಳೊಂದಿಗೆ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ಮೇಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕಾರಾವಧಿ ಮುಗಿಯಲಿದ್ದು, ಡಿ.ದೇವರಾಜ ಅರಸು ನಂತರ 5 ವರ್ಷಗಳ ಮುಖ್ಯಮಂತ್ರಿ ಪೂರ್ಣಾವಧಿಯನ್ನು ಪೂರೈಸಿದ ಎರಡನೇ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರರಾಗಲಿದ್ದಾರೆ.
ತಮ್ಮ ಸರ್ಕಾರದ ಅವಧಿ ಮುಗಿಯುವ ಹಂತದಲ್ಲಿ ಸದನ ಸದಸ್ಯರು ವಿಧಾನಸಭೆ ಚುನಾವಣೆಯ ಸಿದ್ಧತೆಯಲ್ಲಿರುವಂತಹ ಸಂದರ್ಭದಲ್ಲಿ ಕಲಾಪದಲ್ಲಿ ನಿನ್ನೆ ಮುಖ್ಯಮಂತ್ರಿಯವರ ಭಾಷಣ ವಿದಾಯದಂತಿತ್ತು. ಮತ್ತೆ ಅಧಿಕಾರಕ್ಕೆ ಬರಲು ನಾವು ಚುನಾವಣೆಗೆ ಸಿದ್ಧರಾಗಿದ್ದೇವೆ ಎಂದು ಹೇಳಿದ ಮುಖ್ಯಮಂತ್ರಿ ಈಗಿರುವ ಎಲ್ಲಾ 224 ಸದಸ್ಯರು ಮತ್ತೆ ಚುನಾಯಿತರಾಗಿ ಬರಲಿ ಎಂದು ಆಶಿಸಿದರು.
ಪ್ರತಿಪಕ್ಷಗಳ ನಾಯಕರಿಗೆ ಮತ್ತು ಎಲ್ಲಾ ಪಕ್ಷಗಳ ಸದಸ್ಯರಿಗೆ ಸದನದ ಕಲಾಪ ಸುಗಮವಾಗಿ ಸಾಗಲು ಸಹಕಾರ ನೀಡಿದ್ದಕ್ಕಾಗಿ ಅಪಾರವಾಗಿ ಧನ್ಯವಾದ ಹೇಳಿದ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಆರು ಬಾರಿ ಬಜೆಟ್ ಮಂಡಿಸಿದ್ದು ತಮಗೆ ಹೆಮ್ಮೆ ತಂದಿದೆ, ರಾಮಕೃಷ್ಣ ಹೆಗಡೆಯವರ ದಾಖಲೆಯನ್ನು ಸರಿಗಟ್ಟಿದ್ದೇನೆ ಎಂದು ಹೇಳಿದರು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಮತ್ತು ಹಣಕಾಸು ಸಚಿವರಾಗಿ ಒಟ್ಟು 13 ಬಾರಿ ಬಜೆಟ್ ಮಂಡಿಸಿದ್ದಾರೆ.
ಕಲಾಪದ ಕೊನೆಯ ದಿನವಾದ ನಿನ್ನೆ ಸದನದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪಗಳು ಕೇಳಿಬಂದವು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಮೊನ್ನೆ ಮಂಡಿಸಿದ ಬಜೆಟ್ ಗೆ ವಿವರಣೆ ನೀಡುತ್ತಿದ್ದರು. ತೀವ್ರ ಗದ್ದಲದ ವಾತಾವರಣ ಕಂಡುಬಂದ ಹಿನ್ನೆಲೆಯಲ್ಲಿ ಕಲಾಪವನ್ನು ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಎರಡು ಬಾರಿ ಮುಂದೂಡಬೇಕಾಗಿ ಬಂತು.
ಬಿಜೆಪಿ ಸದಸ್ಯರು ಧರಣಿ ನಡೆಸಿ ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯ ಕೆ.ಎನ್.ರಾಜಣ್ಣ ಹೇಳಿಕೆಯನ್ನು ಖಂಡಿಸಿದರು. ನೀರವ್ ಮೋದಿ ಮತ್ತು ವಿಜಯ್ ಮಲ್ಯ ಭಾಗಿಯಾದ ಕೋಟ್ಯಂತರ ರೂಪಾಯಿ ಬ್ಯಾಂಕಿಂಗ್ ಹಗರಣಕ್ಕೆ ಬಿಜೆಪಿ ಸರ್ಕಾರ ಕಾರಣ ಎಂದು ರಾಜಣ್ಣ ಆರೋಪಿಸಿದ್ದರು. ಇದು ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಕಲಾಪವನ್ನು ಕೆಲ ಸಮಯದವರೆಗೆ ಮುಂದೂಡಬೇಕಾಯಿತು.
ಸದನ ಮತ್ತೆ ಸೇರುತ್ತಿದ್ದಂತೆ ಅನುಮೋದನೆಯಾಗಬೇಕಿದ್ದ ಮಸೂದೆ ಪ್ರತಿಯನ್ನು ಬಿಜೆಪಿ ಸದಸ್ಯರು ಹರಿದುಹಾಕಿದರು.
ರಾಜ್ಯದಲ್ಲಿ ಬಿಜೆಪಿ ಗೂಂಡಾ ಸಂಸ್ಕೃತಿಯನ್ನು ಹೊಂದಿದ್ದು ಕಾಂಗ್ರೆಸ್ ಅಲ್ಲ ಎಂದು ಆರೋಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿಯವರನ್ನು ಭ್ರಷ್ಟಾಚಾರದ ಅನುಕೂಲಕರ ಎಂದು ಆರೋಪಿಸಿದರು. ಕೇಂದ್ರದಲ್ಲಿ ಪ್ರಧಾನಿಯವರು ಭ್ರಷ್ಟಾಚಾರಕ್ಕೆ ಪ್ರೇರಣೆ ನೀಡುತ್ತಿದ್ದಾರೆ ಎಂದು ದೂರಿದರು. 2.09 ಲಕ್ಷ ಕೋಟಿಯ ಬಜೆಟ್ ನ್ನು ಸಂಪೂರ್ಣವಾಗಿ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.
ಬಿಜೆಪಿ ಸದಸ್ಯರು ಧರಣಿ ಮುಂದುವರಿಸುತ್ತಿದ್ದಾಗ ಸ್ಪೀಕರ್ ಕೋಳಿವಾಡ ಅವರು, ಮೀಸಲಾತಿ ಮಸೂದೆಗೆ ಮತ ಚಲಾಯಿಸಲು ಮೂರು ತಿಂಗಳು ಸಮಯಾವಕಾಶ ನೀಡಿದರು. ನಂತರ ಅದನ್ನು ಧ್ವನಿ ಮತದ ಮೂಲಕ ಅನುಮೋದಿಸಲಾಯಿತು.
ನಾವು ಕಳೆದ 5 ವರ್ಷಗಳಲ್ಲಿ ಜನರಿಗೆ ಸ್ಥಿರ ಮತ್ತು ಜನಸ್ನೇಹಿ ಸರ್ಕಾರ ನೀಡಿದ್ದೇವೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮೂವರು ಮುಖ್ಯಮಂತ್ರಿಗಳಿದ್ದರು. ನಾನು ಪೂರ್ತಿ 5 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದೇನೆ ಎಂದು ಸಿದ್ದರಾಮಯ್ಯ ಹೆಮ್ಮೆಯಿಂದ ಹೇಳಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


