ರಾಜಕೀಯ

ನಾನು ಸಾಫ್ಟ್ ಇರಬಹುದು, ಆದರೆ ನನ್ನ ನಿರ್ಧಾರಗಳು ಕಠಿಣ: ಸಂದರ್ಶನದಲ್ಲಿ ರಾಮಲಿಂಗಾ ರೆಡ್ಡಿ

ನಾನು ಮೃದುವಾಗಿ ಮಾತನಾಡಬಹುದು, ಜೊತೆಗೆ ಕಡಿಮೆ ಮಾತನಾಡಬಹುದು, ಆದರೆ ನನ್ನ ನಿರ್ಧಾರಗಳು ಕಠಿಣ ಮತ್ತು ಪ್ರಬಲವಾಗಿರುತ್ತವೆ, ನನ್ನ ಹತ್ತಿರದಿಂದ ನೋಡಿರುವವರಿಗೆ ಇದು ತಿಳಿದಿರುತ್ತದೆ. ಯಾವುದೇ ಕಾರಣಕ್ಕೂ ನಾನು..

ನಾನು ಸಾಫ್ಟ್ ಇರಬಹುದು, ಆದರೆ ನನ್ನ ನಿರ್ಧಾರಗಳು ಕಠಿಣ: ಸಂದರ್ಶನದಲ್ಲಿ ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ
Published On :
ಬೆಂಗಳೂರು: ನೂತನ ಗೃಹ ಸಚಿವರಾಗಿ ರಾಮಲಿಂಗಾರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬೆಂಗಳೂರು ನಗರದಲ್ಲಿನ ಹಲವು ಸಮಸ್ಯೆಗಳು ಸೇರಿದಂತೆ ನೂರಾರು ಪ್ರಾಬ್ಲಮ್ಸ್ ಕಣ್ಣ ಮುಂದಿವೆ, ಇವುಗಳನ್ನು ಬಗೆಹರಿಸುವುದೇ ಸಚಿವರ ಮುಂದಿರುವ ಬಹುದೊಡ್ಡ ಸವಾಲಾಗಿದೆ. ನೂತ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರ ಜೊತೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದ ಒಂದು ಕಿರು ನೋಟ ಇಲ್ಲಿದೆ.
ಪ್ರ: ಸಾರಿಗೆ ಸಚಿವರಾಗಿ ಮಾಡಿರುವ ಕೆಲಸ ತೃಪ್ತಿ ತಂದಿದೆಯೇ?
ಉ: ನಾಲ್ಕು ವರ್ಷ ಮೂರು ತಿಂಗಳು ನಾನು ಸಾರಿಗೆ ಸಚಿವನಾಗಿ ಕೆಲಸ ಮಾಡಿದ್ದೇನೆ, ಈ ವೇಳೆಯಲ್ಲಿ ಮಾಡಿರುವ ಕೆಲಸ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ನಾವು ನಂಬರ್ ಒನ್ ಸ್ಥಾನದಲ್ಲಿದ್ದೇವೆ ಎಂದು ಹೇಳಿದ್ದಾರೆ. ನನಗೆ ಇನ್ನೂ ಸ್ವಲ್ಪ ಸಮಯ ನೀಡಿದ್ದರೇ, ಮತ್ತೊಂದು ಹಂತಕ್ಕೆ ಇಲಾಖೆಯನ್ನು ಕೊಂಡೊಯ್ಯುತ್ತಿದ್ದೆ.
ಪ್ರ: ನಿಮಗೆ ಗೃಹಖಾತೆ ನೀಲಿದ್ದಾರೆ ಎಂಬ ನಿರೀಕ್ಷೆಯಿತ್ತೆ?
ಉ: ನನ್ನ ರಾಜಕೀಯ ಜೀವನದಲ್ಲಿ ನನಗೆ ಗೃಹಖಾತೆ ಸಿಗುತ್ತದೆ ಎಂದು ಯಾವತ್ತೂ ನಿರೀಕ್ಷಿಸಿರಲಿಲ್ಲ, ಪರಮೇಶ್ವರ್ ರಾಜಿನಾಮೆ ನಂತರ ಗೃಹಖಾತೆ ಸಿಎಂ ಬಳಿಯಿತ್ತು. ಸಿಎಂ ತಮ್ಮ ಎಲ್ಲಾ ಸಮಯವನ್ನು ಗೃಹ ಖಾತೆಗೆ ಮೀಸಲಿರಿಸಲು ಸಾಧ್ಯವಿಲ್ಲ, ನಾನು ಬೆಂಗಳೂರು ಮೂಲದವನು, ಯಾವ ಸಮಯಕ್ಕೆ ಬೇಕಾದರೂ ನಾನು ಲಭ್ಯವಿರುತ್ತೇನೆ. ನನ್ನ 28 ವರ್ಷಗಳ ರಾಜಕೀಯ ಜೀವನದಲ್ಲಿ 23 ವರ್ಷಗಳು ಸಚಿವನಾಗಿ ಕೆಲಸ ಮಾಡಿದ್ದೇನೆ. ವೀರಪ್ಪ ಮೊಯ್ಲಿ, ಧರಂ ಸಿಂಗ್, ಎಸ್.ಎಂ ಕೃಷ್ಣ ಮತ್ತು ಸಿದ್ದರಾಮಯ್ಯ ಸಂಪುಟದಲ್ಲಿ ಕೆಲಸ ಮಾಡಿದ ಅನುಭವವಿದೆ. ಆದರೆ ಗೃಹ ಖಾತೆ ನನಗೆ ಹೊಸದು.
ಪ್ರ: ಗೃಹಖಾತೆ ನೀಡುವಂತೆ ನೀವು ಕೇಳಿದ್ದೀರಾ?
ಉ: ಇಲ್ಲ, ನಾನು ಕೇಳಿಲ್ಲ, ನನ್ನ ಕೆಲಸವನ್ನು ನೋಡಿ ಸಿಎಂ ನನಗೆ ಈ ಜವಾಬ್ದಾರಿ ನೀಡಿದ್ದಾರೆ. ಕಳೆದ ಎರಡು ತಿಂಗಳಿಂದ ಗೃಹಖಾತೆ ಹೊಣೆಗಾರಿಕೆ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ನನ್ನ ಸಂಪುಟ ಸಹೋದ್ಯೋಗಿಗಳಲ್ಲಿ ಯಾರಾದರೂ ಒಬ್ಬರಿಗೆ ಸಿಗಬಹುದೆಂದು ನಾನು ಎಣಿಸಿದ್ದೆ. ಕಳೆದ ವಾರ ಸಿಎಂ ನನಗೆ ಈ ಬಗ್ಗೆ ಮಾಹಿತಿ ನೀಡಿದರು. ನಾನು ಈ ಹಿಂದೆ ಕೆಲಸ ಮಾಡಿದ ಯಾವುದೇ ಇಲಾಖೆಗಳಲ್ಲಿ ಕೆಟ್ಟ ಹೆಸರು ಪಡೆದಿಲ್ಲ, ಇದು ಕೂಡ ನನ್ನ ಆಯ್ಕೆಗೆ ಒಂದು ಕಾರಣ ಇರಬಹುದು. ನಾನು ಮೊದಲ ಬಾರಿಗೆ ವಿಧಾನ ಸಭೆ ಚುನಾವಣೆಯಲ್ಲಿ ಸ್ಫರ್ದಿಸಿದಾಗ ಕೂಡ ನಾನು ಟಿಕೆಟ್ ಕೇಳಿರಲಿಲ್ಲ, ಜನರೇ ನನ್ನ ಹೆಸರನ್ನು ಸೂಚಿಸಿದರು. ಅದರಿಂದ ನನಗೆ ಅವಕಾಶ ಸಿಕ್ಕಿತು,. ವೀರಪ್ಪ ಮೊಯ್ಲಿ  ಕರೆದು ನನಗೆ ಟಿಕೆಟ್ ನೀಡಿದರು.
ಪ್ರ: ನೀವು ಮೃದುವಾಗಿ ಮಾತನಾಡುವ ವ್ಯಕ್ತಿ, ನಿಮ್ಮಿಂದ ಗೃಹ ಖಾತೆ ನಿಭಾಯಿಸಲು ಸಾಧ್ಯವೇ?
ಉ: ನಾನು ಮೃದುವಾಗಿ ಮಾತನಾಡಬಹುದು, ಜೊತೆಗೆ ಕಡಿಮೆ ಮಾತನಾಡಬಹುದು, ಆದರೆ ನನ್ನ ನಿರ್ಧಾರಗಳು ಕಠಿಣ ಮತ್ತು ಪ್ರಬಲವಾಗಿರುತ್ತವೆ, ನನ್ನ ಹತ್ತಿರದಿಂದ ನೋಡಿರುವವರಿಗೆ ಇದು ತಿಳಿದಿರುತ್ತದೆ. ಯಾವುದೇ ಕಾರಣಕ್ಕೂ ನಾನು ಒಮ್ಮೆ ಇಟ್ಟ ಹೆಜ್ಜೆ ವಾಪಸ್ ಇಡುವುದಿಲ್ಲ. ಸಾಫ್ಟ್ ಆಗಿರುವವರು ಗೃಹಖಾತೆಯಲ್ಲಿ ಕೆಲಸ ಮಾಡಬಾರದೇ, ಲಾಲಾ ಬಹದ್ದೂರ್ ಶಾಸ್ತ್ರಿ, ಮನಮೋಹನ್ ಸಿಂಗ್ ಅವರುಗಳು ಕೂಡ ಮೃದುವಾಗಿ ಮಾತನಾಡುತ್ತಿದ್ದರು, ಅವರು ಮಾಡಿರುವ ಕೆಲಸಗಳ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ.
ಪ್ರ: ನಿಮ್ಮ ದೃಷ್ಟಿಯಲ್ಲಿ ಪೊಲೀಸ್?
ಉ: ನಾನು ಹಲವಾರು ವರ್ಷಗಳ ಕಾಲ ಶಾಸಕನಾಗಿದ್ದೆ. ಈ ವೇಳೆ ಯಾವ ಪೊಲೀಸ್ ಇನ್ಸ್ ಪೆಕ್ಟರ್ ಬಂದರೂ ಕ್ರಿಮಿನಲ್ ಗಳಿಗೆ ಭಯ ಹುಟ್ಟಿಸುವಂತೆ ಹೇಳಿದ್ದೆ.ಭಯದಿಂದ ಮಾತ್ರ ಅಪರಾಧಗಳ ಪ್ರಮಾಣ ಕಡಿಮೆ ಮಾಡಲು ಸಾಧ್ಯ. ಈ ವೇಳೆ ಶೇ, 50 ರಷ್ಟು ಅಪರಾಧ ಪ್ರಮಾಣ ಕಡಿಮೆಯಾಯಿತು, ಇದೇ ಮಾದರಿಯನ್ನು ಬೆಂಗಳೂರು ಮತ್ತು ರಾಜ್ಯಕ್ಕೆ ಅನ್ವಯಿಸಬಹುದು.
ಪ್ರ: ಇಲಾಖೆ ಮೇಲೆ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರ ಕರಿನೆರಳಿದೆ ಎಂಬ ಮಾತಿದೆಯಲ್ಲ?
ಉ: ಯಾವುದೇ ನಿರ್ಧಾರ ತೆಗೆದುಕೊಳ್ಳುವ ಅನುಭವ ಮತ್ತು ಜ್ಞಾನ ನನಗಿದೆ. ಯಾವುದೇ ವ್ಯಕ್ತಿ ಸಲಹೆ ನೀಡಬಹುದು, ಸಾರ್ವಜನಿಕರು, ವಿರೋಧ ಪಕ್ಷದವರು, ಮಾಧ್ಯಮಗಳು ಕೂಡ, ಆದರೆ ನನ್ನ ನಿರ್ಧಾರವೇ ಅಂತಿಮವಾಗಿರುತ್ತದೆ.  ಎಲ್ಲರು ಹೇಳಬಹುದು ನಾನು ರಬ್ಬರ್ ಸ್ಟಾಂಪ್ ಅಲ್ಲ. ಎಲ್ಲ ಸಚಿವರುಗಳಿಗೂ ಸಿಎಂ ಸ್ವಾತಂತ್ರ್ಯ ನೀಡಿದ್ದಾರೆ, ಅವರವರ ಇಲಾಖೆಗಳಲ್ಲಿ ತೆಗೆದು ಕೊಳ್ಳುವ ನಿರ್ಧಾರಗಳಲ್ಲಿ ಸಿಎಂ ಹಸ್ತಕ್ಷೇಪ ಮಾಡುವುದಿಲ್ಲ, ಎಲ್ಲಾ ಸಮಸ್ಯೆಗಕಳಿಗೂ ಪರಿಹಾರವಿರುತ್ತದೆ. ನಮ್ಮ ಎಲ್ಲಾ ನಿರ್ಧಾರಗಳಿಗೂ ಸಿಎಂ ಬೆಂಬಲ ನೀಡುತ್ತಾರೆ.
ಪ್ರ: ನಿಮಗೆ ಸಲಹೆಗಾರರ ಅವಶ್ಯಕತೆಯಿದೆಯೆ?
ಉ: ಕೆಂಪಯ್ಯ ಅವರು ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆಗೆ ಸಲಹೆಗಾರರು, ಆದರೆ ರಾಮಲಿಂಗಾರೆಡ್ಡಿಗಲ್ಲ, ಕೆಂಪಯ್ಯ ಸೇರಿ ಎಲ್ಲರಿಂದಲೂ ನಾನು ಉತ್ತಮ ಸಲಹೆಗಳನ್ನು ಪಡೆಯುತ್ತೇನೆ.
ಪ್ರ: ಇದರರ್ಥ, ನೀವು ಕೆಂಪಯ್ಯ ಅವರ ಮಾತಿಗೆ ಬೆಲೆ ನೀಡುವುದಿಲ್ಲ ಎಂದೇ?
ಉ: ಸಲಹೆಗಳು ಉತ್ತಮವಾಗಿದ್ದರೇ ಕೆಂಪಯ್ಯ ಸೇರಿದಂತೆ ಯಾರಾದರೂ ನೀಡಬಹುದು. ನಾನು ಈಗ ಗೃಹ ಇಲಾಖೆಗೆ ಕಾಲಿಟ್ಟಿದ್ದೇನೆ, ನನಗೆ ಸ್ವಲ್ಪ ಸಮಯಾವಕಾಶ ನೀಡಿ, ನನ್ನ ಕೆಲಸ ನೋಡಿ, ನನ್ನ  ಐಡಿಯಾ ಹಾಗೂ ತಂತ್ರಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸುತ್ತೇನೆ.
ಪ್ರ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ, ಕರಾವಳಿ ಭಾಗದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನವಾಗುವ ಸಾಧ್ಯತೆಯಿದೆ,ಹೇಗೆ ನಿಭಾಯಿಸುತ್ತೀರಿ?
ಉ: ಚುನಾವಣೆ ಸಮಯಕ್ಕೂ ಮುನ್ನ ಇಂಥಹ ಪರಿಸ್ಥಿತಿಗಳು ಎದುರಾಗುತ್ತವೆ. ನಾವು ಹೆಚ್ಚಿನ ಗಮನ ವಹಿಸುವ ಅವಶ್ಯಕತೆಯಿರುತ್ತದೆ. ನಮ್ಮ ಬಳಿ ಒಳ್ಳೆಯ ಹಾಗೂ ಅನುಭವಿ ಪೊಲೀಸ್ ಅಧಿಕಾರಿಗಳಿದ್ದಾರೆ. ಅವರು ಪರಿಸ್ಥಿತಿ ನಿಭಾಯಿಸಲಿದ್ದಾರೆ, ಎಲ್ಲಾವನ್ನು ನಾನು ಈಗಲೇ ಬಹಿರಂಗಗೊಳಿಸಲು ಸಾಧ್ಯವಿಲ್ಲ, ಸಮಯ ಬಂದಾಗ ನಾವು ಕೆಲಸ ಮಾಡುತ್ತೇವೆ. ನಾನು ಇದನ್ನು ಸವಾಲಾಗಿ ಸ್ವೀಕರಿಸುತ್ತೇನೆ, ಇದು ಪ್ರಜಾ ಪ್ರಜಾ ಪ್ರಭುತ್ವ,ಅಂಥಹ ಪರಿಸ್ಥಿತಿ ಬಂದರೇ ನಾವು ವಿರೋಧ ಪಕ್ಷಗಳ ನೆರವು ಕೋರುತ್ತೇವೆ, ಯಾವುದೇ  ವ್ಯಕ್ತಿ ಅಥವಾ ಸಂಘಟನೆಗಳು  ಸಮಾಜದ ಶಾಂತಿ ಕದಲು ಸಮಾಜ ವಿರೋಧಿ ಚಟುವಟಿಕೆ ನಡೆಸಿದರೇ, ಯಾವುದೇ ರಾಜಕೀಯ ನಂಟು ಇದ್ದರೂ ಅಂಥವರನ್ನು ಸುಮ್ಮನೆ ಬಿಡುವುದಿಲ್ಲ.
ಪ್ರ: ಗುಪ್ತಚರ ಇಲಾಖೆಯ ಪುನಶ್ಚೇತನ ಮಾಡುವ ಅವಶ್ಯಕತೆಯಿದೆಯೇ?
ಉ: ಆ ಖಾತೆ ನನ್ನ ಬಳಿಯಿಲ್ಲ, ಅದು ಮುಖ್ಯಮಂತ್ರಿ ಜೊತೆಗಿದೆ.
ಪ್ರ: ಪೊಲೀಸ್ ಇಲಾಖೆಯಲ್ಲಿ ಇನ್ನೂ ಆರ್ಡರ್ಲಿ ವ್ಯವಸ್ಥೆ ಇದೆ, ಇದಕ್ಕೆ ಅಂತ್ಯ ಹಾಡ್ತೀರಾ?
ಉ: ನಾನು ಶಿಕ್ಷಣ ಹಾಗೂ ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ,  ಅಲ್ಲಿನ ಸಿಬ್ಬಂದಿಗೆ ಸಾವಿರಾರು ಸಮಸ್ಯೆಗಳಿದ್ದವು. ನಾನು ಇಲ್ಲಿರುವ ಸಮಸ್ಯೆಗಳನ್ನು ಖಂಡಿತ ಬಗೆಹರಿಸುತ್ತೇನೆ. ಆರ್ಡರ್ಲಿ ವ್ಯವಸ್ಥೆ ಅಂತ್ಯಗೊಳ್ಳಬೇಕು, ನಾನು ಆರ್ಡರ್ಲಿ ವ್ಯವಸ್ಥೆಯನ್ನು ವಿರೋಧಿಸುತ್ತೇನೆ.
ಪ್ರ: ನಿಮಗೆ ಗೃಹ ಖಾತೆ ನೀಡಿದ್ದಕ್ಕೆ ಪಕ್ಷದಲ್ಲಿ ಕೆಲವರಿಗೆ ಅಸಮಾಧಾನ ಇದೆ ಎಂದು ನಿಮಗೆ ಅನಿಸುತ್ತಿದ್ದೆಯೇ?
ಉ: ಇಲ್ಲಿಯವರೆಗೂ ಯಾರೊಬ್ಬರೂ ಅಸಮಾಧಾನಗೊಂಡಿಲ್ಲ, ನಮ್ಮ ಪಕ್ಷದಲ್ಲಾಗಲಿ ಅಥವಾ ಹೊರಗಾಗಲಿ ನನಗೆ ಶತೃಗಳಿಲ್ಲ, ಒಂದು ವೇಳೆ ಅಂಥ ವಿರೋಧಗಳಿದ್ದರೇ ಅದಕ್ಕೆ ಏನು ಮಾಡಲು ಸಾಧ್ಯವಿಲ್ಲ. ಜನರ ಹಿತರಕ್ಷಣೆಯಷ್ಟೇ ಮುಖ್ಯ.
ಪ್ರ: ನಿಮ್ಮಿಂದ ಗೃಹ ಇಲಾಖೆ ಜವಾಬ್ದಾರಿ ನಿರ್ವಹಿಸುವುದು ಕಷ್ಟ ಎಂಬುದು ಕೆಲ ಬಿಜೆಪಿ ನಾಯಕರ ಅಭಿಪ್ರಾಯ?
ಉ: ಅವರು ಕಾದು ನನ್ನ ಕಾರ್ಯ ವೈಖರಿ ನೋಡಲಿ, ಬೇರೆ ಎಲ್ಲಾ ಇಲಾಖೆಗಳಲ್ಲಿ ಹೇಗೆ ಕಾರ್ಯ ನಿರ್ವಹಿಸಿದ್ದೆನೋ ಹಾಗೆಯೇ ಗೃಹ ಇಲಾಖೆಯಲ್ಲೂ ಕೂಡ ಕೆಲಸ ಮಾಡುತ್ತೇನೆ. ಪರಿಣಾಮಕಾರಿಯಾಗಿ ಕೆಲಸ ಮಾಡಿದರೇ, ಸಿಎಂ, ಹೈಕಮಾಂಡ್ ಹಾಗೂ ವಿರೋಧ ಪಕ್ಷಗಳು ಕೂಡ ನಿಮ್ಮನ್ನು ಗುರುತಿಸುತ್ತಾರೆ. 
ಪ್ರ: ನಿಮ್ಮ ಮುಂದಿರುವ ಬಹುದೊಡ್ಡ ಸವಾಲುಗಳು ಯಾವುವು?
ಉ: ಕಾನೂನು ಸುವ್ಯವಸ್ಥೆ ನಿರ್ವಹಣೆ, ಚುನಾವಣೆ ಸಮೀಪ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದೇ ಬಹುದೊಡ್ಡ ಸವಾಲು.
ಪ್ರ: ಬೆಂಗಳೂರು ಟ್ರಾಫಿಕ್ ಬಗ್ಗೆ?
ಉ: ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ರಸ್ತೆಗಳ ಅಗಲೀಕರಣದ ಅವಶ್ಯಕತೆಯಿದೆ. 
ಪ್ರ: ಪೊಲೀಸ್ ಇಲಾಖೆ ಸುಧಾರಣೆ ಬಗ್ಗೆ ನಿಮ್ಮ ಯೋಜನೆ?
ಉ: ರಾಜ್ಯದ ಎಲ್ಲಾ ವಿಭಾಗಗಳಿಗೂ ಭೇಟಿ ನೀಡಿ, ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ, ಹಿಂದಿನ ಗೃಹ ಸಚಿವರುಗಳಿಂದ ಸಲಹೆ ಪಡೆಯುತ್ತೇನೆ, ನನಗೆ ನನದೇ ಆದ ಕೆಲವು ಯೋಜನೆಗಳಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.