ರಾಜಕೀಯ

ಸಿಎಂ ಸಿದ್ದರಾಮಯ್ಯ ಲೆಕ್ಕಾಚಾರದ ನಡೆ; ಆದರೆ ಆಂತರಿಕ ಭಿನ್ನಮತಕ್ಕೆ ಕೊನೆಯಿಲ್ಲ!

ಸಿದ್ದರಾಮಯ್ಯ ದಲಿತ ಎಡಗೈ ಮುಖಂಡ ಎಂಎಲ್ ಸಿ ಆರ್ ಬಿ ತಿಮ್ಮಾಪುರ ಅವರಿಗೆ ಸಚಿವ ಸ್ಥಾನ ನೀಡಿ ಪರಮೇಶ್ವರ್ ಅವರಿಗೆ ಮತ್ತೊಮ್ಮೆ ಚೆಕ್ ಮೇಟ್ ಮಾಡುವಲ್ಲಿ...

ಸಿಎಂ ಸಿದ್ದರಾಮಯ್ಯ ಲೆಕ್ಕಾಚಾರದ ನಡೆ; ಆದರೆ ಆಂತರಿಕ ಭಿನ್ನಮತಕ್ಕೆ ಕೊನೆಯಿಲ್ಲ!
ಸಿದ್ದರಾಮಯ್ಯ ಮತ್ತು ಪರಮೇಶ್ವರ್
Published On :
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಸಂಪುಟ ಸದಸ್ಯರ ಸಂಖ್ಯೆ 34 ಕ್ಕೇರಿಕೆಯಾಗಿದೆ, ವಿಧಾನಸಭೆ ಚುನಾವಣೆ  ಗಮನದಲ್ಲಿರಿಸಿಕೊಂಡು ಸಿಎಂ ಚತುರ ಹೆಜ್ಜೆ ಇರಿಸಿದ್ದಾರೆ. 
ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಪಕ್ಷ ಹಪಹಪಿಸುತ್ತಿದೆ.
ಪ್ರಿಯಾಂಕ್ ಖರ್ಗೆ, ಪ್ರಮೋದ್ ಮದ್ವರಾಜ್, ಈಶ್ವರ್ ಖಂಡ್ರೆ, ಮತ್ತು ರುದ್ರಪ್ಪ ಲಮಾಣಿ ಅವರಿಗೆ ಸಂಪುಟ ದರ್ಜೆಯ ಸ್ಥಾನ ನೀಡಿ ಸಿಎಂ ಬುದ್ದಿವಂತಿಕೆಯ ಹೆಜ್ಜೆ ಇರಿಸಿದ್ದಾರೆ. ಸಂಪುಟದಲ್ಲಿ ಯುವಕರಿಗೆ ಆದ್ಯತೆ ನೀಡಿರುವುದು ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಲಾಭ ತಂದುಕೊಡಲಿದೆ ಎಂಬುದು ಸಿದ್ದು ಲೆಕ್ಕಾಚಾರ.
ತಮ್ಮ ನಿಷ್ಠ ಬೆಂಬಲಿಗರಿಗೆ ಆದ್ಯತೆ ನೀಡಿರುವುದು ಸಿಎಂ ತಮ್ಮ ವಿರೋಧಿಗಳಾದ ಮೂಲ ಕಾಂಗ್ರೆಸಿಗರಿಂದ ರಕ್ಷಿಸಿಕೊಳ್ಳಲು ಸಹಾಯವಾಗಲಿದೆ. 
ಕುರುಬ ಖೋಟಾದಲ್ಲಿ ಎಚ್.ಎಂ ರೇವಣ್ಣ ಹೆಸರು ಕೇಳಿ ಬಂದಿತ್ತು. ಎಚ್ ವೈ ಮೇಟಿ ಅವರ ರಾಜಿನಾಮೆಯಿಂದ ಪ್ರಾದೇಶಿಕ ಸಮತೋಲನದ ಪ್ರಶ್ನೆ ಎದ್ದಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷದ ಪ್ರಾತಿನಿಧ್ಯವನ್ನು ಹೆಚ್ಚಿಸಲು ಮೇಟಿ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. 
ತಮ್ಮದೇ ಕುರುಬ ಸಮುದಾಯಕ್ಕೆ ಸೇರಿದ ಎಂಎಲ್ ಸಿ ರೇವಣ್ಣ ಅವರಿಗೆ ಸಚಿವ ಸ್ಥಾನ ನೀಡಿರುವುದು,  ಮಂತ್ರಿಗಿರಿ ಆಕಾಂಕ್ಷಿಗಳಾಗಿದ್ದ ಎಂಟಿಬಿ ನಾಗರಾಜ್, ಭೈರತಿ ಬಸವರಾಜು ಸೇರಿದಂತೆ ಹಲವು ಕುರುಬ ಸಮುದಾಯದ ಮುಖಂಡರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ.
ದಲಿತ ಮತ್ತು ಲಿಂಗಾಯತ ಸಮುದಾಯದನವರಿಗೆ ಸಿಎಂ ತಮ್ಮ ಸಂಪುಟ ವಿಸ್ತರಣೆಯಲ್ಲಿ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಆದರೆ ದಲಿತ ಸಮುದಾಯದ ಬಲಗೈ ಆದ್ಯತೆ ನೀಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಸಿಎಂ ವಿರುದ್ಧ ಮುನಿಸಿಕೊಂಡಿದ್ದಾರೆ. 
ತಮ್ಮ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ತಮ್ಮದೇ ಬಲಗೈ ಬಣಕ್ಕೆ ಸಚಿವ ಸ್ಥಾನ ನೀಡಬೇಕೆಂದು ಪರಮೇಶ್ವರ್ ಬಯಸಿದ್ದರು. 
ಆದರೆ ಸಿದ್ದರಾಮಯ್ಯ ದಲಿತ ಎಡಗೈ ಮುಖಂಡ ಎಂಎಲ್ ಸಿ ಆರ್ ಬಿ ತಿಮ್ಮಾಪುರ ಅವರಿಗೆ ಸಚಿವ ಸ್ಥಾನ ನೀಡಿ ಪರಮೇಶ್ವರ್ ಅವರಿಗೆ ಮತ್ತೊಮ್ಮೆ ಚೆಕ್ ಮೇಟ್ ಮಾಡಲು ಯಶಸ್ವಿಯಾಗಿದ್ದಾರೆ. 
ಮೋಟಮ್ಮ, ಪಿ.ಎಂ ನರೇಂದ್ರ ಸ್ವಾಮಿ ಅವರಿಗೆ ಸಚಿವ ಸ್ಥಾನಕ್ಕಾಗಿ ಪರಮೇಶ್ವರ್ ಬ್ಯಾಟಿಂಗ್ ಮಾಡಿದ್ದರು, ಆದರೆ ಇದನ್ನು ಪರಿಗಣಿಸದ ಸಿದ್ದರಾಮಯ್ಯ, ಗೀತಾ ಮಹಾದೇವ ಪ್ರಸಾದ್ ಗೆ ಸಚಿವ ಸ್ಥಾನ ನೀಡಿದ್ದಾರೆ. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಗೀತಾ ಅವರಿಗೆ ಮಂತ್ರಿ ಸ್ಥಾನ ನೀಡಿರುವುದು ಲಿಂಗಾಯತ ಸಮುದಾಯಕ್ಕೆ ಸೇರಿದ ಹಲವು ಹಿರಿಯ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.
ಸಂಪುಟ ವಿಸ್ತರಣೆ ಕಸರತ್ತು ಆರಂಭವಾದಾಗಿನಿಂದ ತಿಪಟೂರು ಶಾಸಕ ಷಡಕ್ಷರಿ ಹೆಸರು ಪ್ರಬಲವಾಗಿ ಕೇಳಿ ಬಂದಿತ್ತು, ಆದರೆ ಕೊನೆಯ 24 ಗಂಟೆಗಳಲ್ಲಿ ಷಡಕ್ಷರಿಗೆ ಅವಕಾಶ ಕೈ ತಪ್ಪಿತು.
ಎ.ಬಿ ಮಾಲಕರೆಡ್ಡಿ,  ಶಿವಾನಂದ ಪಾಟೀಲ್, ಅಪ್ಪಾಜಿ ನಾಡಗೌಡ, ಅಶೋಕ್ ಪಟ್ಟಣ್, ಮತ್ತು ಶಿವಾನಂದ ಪಾಟೀಲ್ ಸೇರಿದಂತೆ ಹಲವು ಲಿಂಗಾಯತ ಸಮುದಾಯದ ಮುಖಂಡರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು ಲಾಬಿ ನಡೆಸಿದ್ದರು.
ಮಾಲಕರೆಡ್ಡಿಗೆ 2016ರ ಸಂಪುಟ ವಿಸ್ತರಣೆಯಲ್ಲಿ ಅವಕಾಶ ತಪ್ಪಿತ್ತು, ಹೀಗಾಗಿ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದರು. 
ರಾಮಲಿಂಗಾ ರೆಡ್ಡಿ ಅವರಿಗೆ ಗೃಹ ಖಾತೆ ನೀಡುವ ಮೂಲಕ ಸಿಎಂ ತಮ್ಮ ಚತುರ ನಡೆ ಪ್ರದರ್ಶಿಸಿದ್ದಾರೆ. ಈ ಮೊದಲು ಗೃಹ ಖಾತೆಯನ್ನು ತಮ್ಮ ಬಳಿಯಿರಿಸಿಕೊಳ್ಳಲು ಸಿಎಂ ನಿರ್ಧರಿಸಿದ್ದರು, ಆದರೆ ಹೈ ಕಮಾಂಡ್ ಮತ್ತು ಪಕ್ಷದ ಹಿರಿಯ ಮುಖಂಡರ ಸಲಹೆಯಂತೆ, ಪ್ರಮಾಣ ವಚನ ಸ್ವೀಕರಿಸರುವ ಕೆಲವೇ ಕ್ಷಣಗಳಲ್ಲಿ ತಮ್ಮ ನಿರ್ಧಾರ ಬದಲಿಸಿದ ಸಿಎಂ ರಾಮಲಿಂಗಾ ರೆಡ್ಡಿಗೆ ಗೃಹಖಾತೆ ನೀಡಿದ್ದಾರೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ. 
ಮೊದಲಿಗೆ ಅರಣ್ಯ ಸಚಿವ ರಮಾನಾಥ ರೈ ಅವರಿಗೆ ಗೃಹ ಖಾತೆ ನೀಡಲು ಸಿಎಂ ನಿರ್ಧರಿಸಿದ್ದರು, ಆದರೆ ಕರಾವಳಿಯಲ್ಲಿ ನಡೆದ ಹಲವು ಕೋಮು ಗಲಭೆಗಳ ಹಿನ್ನೆಲೆಯಲ್ಲಿ, ರಮಾನಾಥ ರೈಗೆ ಗೃಹ ಖಾತೆ ಹೊಣೆಗಾರಿಕೆ ನೀಡಿದ್ದರೇ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಎಚ್ಚರಿಕೆ ನೀಡಿತ್ತು, ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸಿಎಂ ಸಿದ್ದರಾಮಯ್ಯ ಯಾವುದೇ ವಿವಾದವಿಲ್ಲದ ರಾಮಲಿಂಗಾ ರೆಡ್ಡಿ ಅವರಿಗೆ ಗೃಹಖಾತೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.