ರಾಜಕೀಯ

ಹೌದು, ನಾನು ಜೈಲಿಗೆ ಹೋಗಿದ್ದೆ, ಆದರೆ ನನಗೆ ಶಿಕ್ಷೆಯಾಯಿತೆ? ಸಂದರ್ಶನದಲ್ಲಿ ಬಿಎಸ್ ವೈ ಪ್ರಶ್ನೆ

ವಿಧಾನಸಭೆ ಚುನಾವಣೆ ಮೂಡ್ ನಲ್ಲಿ ಎಲ್ಲಾ ಪಕ್ಷದ ನಾಯಕರಿದ್ದಾರೆ. ಜೊತೆಗೆ ಚುನಾವಣಾ ತಂತ್ರಗಾರಿಕೆಯಲ್ಲಿ ಮುಳುಗಿದ್ದಾರೆ. ಆಡಳಿತ ಪಕ್ಷ ಕಾಂಗ್ರೆಸ್ ತನ್ನ ಪರಮ ವೈರಿ ಬಿಜೆಪಿ ವಿರುದ್ಧ ...

ಹೌದು, ನಾನು ಜೈಲಿಗೆ ಹೋಗಿದ್ದೆ, ಆದರೆ ನನಗೆ ಶಿಕ್ಷೆಯಾಯಿತೆ? ಸಂದರ್ಶನದಲ್ಲಿ ಬಿಎಸ್ ವೈ  ಪ್ರಶ್ನೆ
ಬಿ.ಎಸ್ ಯಡಿಯೂರಪ್ಪ
Published On :
ಬೆಂಗಳೂರು: ಎಲ್ಲಾ ಪಕ್ಷದ ನಾಯಕರು ವಿಧಾನಸಭೆ ಚುನಾವಣೆ ಮೂಡ್ ನಲ್ಲಿದ್ದಾರೆ. ಜೊತೆಗೆ ಚುನಾವಣಾ ತಂತ್ರಗಾರಿಕೆಯಲ್ಲಿ ಮುಳುಗಿದ್ದಾರೆ. ಆಡಳಿತ ಪಕ್ಷ ಕಾಂಗ್ರೆಸ್ ತನ್ನ ಪರಮ ವೈರಿ ಬಿಜೆಪಿ ವಿರುದ್ಧ ಹೋರಾಡಲು ರಣತಂತ್ರ ರೂಪಿಸುತ್ತಿದೆ. ಈ ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ತಮ್ಮ ಚುನಾವಣಾ ಕಾರ್ಯ ವೈಖರಿ ಬಗ್ಗೆ ಮಾತನಾಡಿದ್ದಾರೆ, ಅವರ ಕಿರು ಸಂದರ್ಶನ ಇಲ್ಲಿದೆ.
ಪ್ರ. ನಿಮ್ಮ ಚುನಾವಣಾ ಸಿದ್ದತೆಗಳು ಹೇಗೆ ನಡೆಯುತ್ತಿವೆ?
ಉ: ಚುನಾವಣಾ ಸಿದ್ಧತೆಗಳು ನಡೆಯುತ್ತಿವೆ, ನವೆಂಬರ್ 2 ರಿಂದ ಪರಿವರ್ತನಾ ರ್ಯಾಲಿ ಅರಂಭಿಸುತ್ತೇವೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗವಹಿಸಿಲಿದ್ದಾರೆ. ಪರಿವರ್ತನಾ ರ್ಯಾಲಿಯನ್ನು 2 ಕಡೆ ಹಮ್ಮಿಕೊಳ್ಳಲಾಗಿದೆ, ದಕ್ಷಿಣ ಜಿಲ್ಲೆಗಳಿಗಾಗಿ ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಿಗಾಗಿ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದೆ, ಈ ಯಾತ್ರೆ ಸುಮಾರು 75ರಿಂದ 80 ದಿನಗಳ ಕಾಲ ನಡೆಯಲಿದೆ. ಪ್ರತಿದಿನ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಸಂಚರಿಸುತ್ತೇವೆ, ಸಿದ್ದರಾಮಯ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತೋರುತ್ತೇವೆ.
ಪ್ರ: ಸಿದ್ದರಾಮಯ್ಯ ಸರ್ಕಾರದ ಬಿಜೆಪಿ ಹೋರಾಟ ಶಕ್ತಿ ಕಳೆದುಕೊಂಡಂತೆ ತೋರುತ್ತಿದೆ?
ಉ: ಹಾಗೇನು ಇಲ್ಲ, ಸರಿಯಾದ ಸಮಯದಲ್ಲಿ ಪ್ರತಿಭಟನೆಗಳನ್ನು ಆರಂಭಿಸುತ್ತೇವೆ. ಪರಿವರ್ತನಾ ರ್ಯಾಲಿಯಿಂದ ನಮ್ಮ ಮುಂದಿನ ಹೋರಾಟ ಆರಂಭವಾಗುತ್ತದೆ. ಪ್ರತಿಯೊಂದು ತಾಲೂಕು ಹಾಗೂ ಜಿಲ್ಲೆಯಲ್ಲೂ  ರ್ಯಾಲಿ ನಡೆಯುತ್ತದೆ. ನಮ್ಮ ಕಾರ್ಯಕರ್ತರು ಪ್ರತಿ ಹಳ್ಳಿಗೆ ಹೋಗಿ, ಪ್ರತಿ ಮನೆಯನ್ನು ತಲುಪಲಿದ್ದಾರೆ, ಸಿದ್ದರಾಮಯ್ಯ ಅವರ ಅನ್ನಭಾಗ್ಯ ಯೋಜನೆ ಲಾಭ ಮೋದಿ ಸರ್ಕಾರಕ್ಕೆ ತಲುಪಬೇಕು.
ಪ್ರ: ನಿಮ್ಮ ಹೋರಾಟ ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ, ನೀವು ಡಿ.ಕೆ ಶಿವಕುಮಾರ್ ಮತ್ತು ಕೆ.ಜೆ ಜಾರ್ಜ್ ರಾಜಿನಾಮೆ ಕೇಳಿದ್ದೀರಿ, ಆದರೆ ಜಾರ್ಜ್ ಸ್ವಲ್ಯ ಸಮಯದಲ್ಲೇ ಸಂಪುಟಕ್ಕೆ ಮರಳಿದರಲ್ಲ?
ಉ: ರಾಜ್ಯ ಸರ್ಕಾರಕ್ಕೆ ದಪ್ಪ ಚರ್ಮವಿದೆ, ಅವರು ರಾಜಕೀಯ ಪಕ್ಷಗಳ ಪ್ರತಿಭಟನೆ ಹಾಗೂ ಜನರ ಬೇಡಿಕೆಗಳಿಗೆ ಕೇರ್ ಮಾಡುವುದಿಲ್ಲ, ನಿಜವಾಗಿ ಹೇಳಬೇಕೆಂದರೇ ಅವರಿಗೆ ಜೋರಾಗಿ ಚುಚ್ಚುವ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಅದನ್ನು ಮಾಡುತ್ತೇವೆ.
ಪ್ರ: ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನಸಭೆ ಉಪ ಚುನಾವಣೆಯಲ್ಲಿ ಗೆದ್ದ ನಂತರ ಸಿದ್ದರಾಮಯ್ಯ ಅವರ ಸಾಮರ್ಥ್ಯ ಮತ್ತಷ್ಟು ಹೆಚ್ಚಿದೆ ಅಲ್ಲವೇ?
ಉ: ಅದೊಂದು ಭಾವನೆ ಅಷ್ಟೆ, ನಾವು ಅವರ ನಿಜ ಬಣ್ಣ ಬಯಲು ಮಾಡಲು ನಮ್ಮದೇ ಆದ ತಂತ್ರ ರೂಪಿಸುತ್ತಿದ್ದೇವೆ, ಸಿದ್ದರಾಮಯ್ಯ ಹಲವು ಸರಣಿ ಹಗರಣಗಳಲ್ಲಿ ಪಾಲ್ಗೋಂಡಿದ್ದಾರೆ, ಜೊತೆಗೆ ಅವರ ಕುಟುಂಬ ಸದಸ್ಯರು ಮತ್ತು ಸಂಪುಟ ಸಹೋದ್ಯೋಗಿಗಳು ಕೂಡ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ತಾವು ಮಿ. ಕ್ಲೀನ್ ಎಂದು ಕರೆದುಕೊಳ್ಳುವ ಸಿಎಂ ವಿರುದ್ಧ ಪ್ರತಿ ಮೂರು ದಿನಗಳಿಗೊಮ್ಮೆ ದಾಖಲೆ ಬಿಡುಗಡೆ ಮಾಡುತ್ತೇವೆ, ಪ್ರತಿ ಮನೆಗೆ ತೆರಳಿ,  ಸಿದ್ದರಾಮಯ್ಯ ವಿರುದ್ಧ ಕರಪತ್ರ ಹಂಚುತ್ತೇವೆ ಎಂದು ಹೇಳಿದ್ದಾರೆ.
ಪ್ರ: ನೀವು ಜೈಲಿಗೆ ಹೋಗಿ ಬಂದಿದ್ದೀರಿ, ಹೀಗಾಗಿ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನೈತಿಕತೆ ಬಗ್ಗೆ ಕಾಂಗ್ರೆಸ್ ಪ್ರಶ್ನಿಸುತ್ತಿದೆ?
ಉ: ಹೌದು, ನಾನು ಜೈಲಿಗೆ ಹೋಗಿದ್ದೆ, ಏಕೆಂದರೆ ನನಗೆ ಜಾಮೀನು ಸಿಗಲಿಲ್ಲ,  ಆದರೆ ನನಗೆ ಶಿಕ್ಷೆಯಾಯಿತೆ? ಇದುವರೆಗೂ ನನ್ನ ವಿರುದ್ಧದ ಆರೋಪಗಳಲ್ಲಿ ಯಾವುದೇ ಒಂದೇ ಒಂದು ಆರೋಪ ಸಾಬೀತಾಗಿಲ್ಲ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೂಡ ಜಾಮೀನಿನ ಮೇಲೆ ಹೊರಗಿಲ್ಲವೇ?  ಇನ್ನೂ ಮರಳು ಹಗರಣದಲ್ಲಿ ಭಾಗಿಯಾಗಿರುವ ಲೋಕೋಪಯೋಗಿ ಸಚಿವ ಮಹಾದೇವಪ್ಪ ಅವರ ಪುತ್ರ ಕೂಡ ಜಾಮೀನಿನ ಮೇಲೆ ಹೊರಗಿದ್ದಾರೆ.
ಪ್ರ: ಲಿಂಗಾಯತ ಧರ್ಮ ಪ್ರಕರಣವನ್ನು ಸಮುದಾಯಗಳ ವಿಭಜನೆಗೆ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ ಎಂದು ಎನಿಸುತ್ತಿದೆಯಲ್ಲವೇ?
ಉ: ಪ್ರತ್ಯೇಕ ಲಿಂಗಾಯತ- ವೀರಶೈವ ಧರ್ಮದ ವಿಚಾರವಾಗಿ ನಾವು ಮೌನ ವಹಿಸಲು ನಿರ್ಧರಿಸಿದ್ದೇವೆ. ತಮ್ಮ ಸರ್ಕಾರದ ವೈಫಲ್ಯಗಳನ್ನ ಮುಚ್ಚಿ ಹಾಕಲು ಜನರ ಗಮನವನ್ನು ಬೇರೆಡೆ ಸೆಳೆಯಲು ಸಿದ್ದರಾಮಯ್ಯ ಈ ತಂತ್ರ ರೂಪಿಸುತ್ತಿದ್ದಾರೆ. ಇದರ ಬಗ್ಗೆ ಆಳವಾಗಿ ಮಾತನಾಡಲು ನಾನು ಬಯಸುವುದಿಲ್ಲ, ಕೆಲವು ದಿನ ಕಾಯ್ದು ನೋಡಿ.
ಪ್ರ: ಅಮಿತ್ ಶಾ ಅವರ ಕಠಿಣ ಸಂದೇಶದ ನಡುವೆಯೂ ರಾಜ್ಯ ಬಿಜೆಪಿಯಲ್ಲಿ ಗುಂಪುಗಾರಿಕೆ ಒಳಜಗಳ ಮುಂದುವರಿದಿದೆ?
ಉ: ಹೌದು, ಅದು ನಿಜ, ನನ್ನ ಮತ್ತು ಈಶ್ವರಪ್ಪ ನಡುವಿನ ಭಿನ್ನಾಬಿಪ್ರಾಯಗಳಿತ್ತು, ಆದರೆ ಅದು ಈಗ ಮುಗಿದ ಅಧ್ಯಾಯ. ಪಕ್ಷದ ಸಂಘಟನಾ ಕಾರ್ಯದರ್ಶಿ ಸಂತೋಷ್ ಮತ್ತು ನನ್ನ ನಡುವೆ ಒಳಜಗಳವಿದೆ ಎಂದು ವರದಿಯಾಗಿತ್ತು.  ಇದೊಂದು ಆಧಾರ ರಹಿತ ಆರೋಪ. ಜನರನ್ನು ದಾರಿ ತಪ್ಪಿಸಲು ಇಂತಹ ವದಂತಿಗಳನ್ನು ಹರಡಲಾಗುತ್ತಿದೆ. ನಾವಿಬ್ಬರೂ ಜೊತೆಯಾಗಿಯೇ ಕೆಲಸ ಮಾಡುತ್ತೇವೆ, ಪ್ರತಿದಿನ ಒಬ್ಬರಿಗೊಬ್ಬರು ಸಂವಹನ ಮಾಡುತ್ತೇವೆ.
ಪ್ರ: ವಿಧಾನಸಭೆ ಚುನಾವಣೆ ಗೆಲ್ಲಲು ರಾಜ್ಯ ಬಿಜೆಪಿ ಅತಿಯಾಗಿ ಮೋದಿ ಬ್ರಾಂಡ್  ಮೊರೆ ಹೋಗಿದೆ?
ಉ: ಮೋದಿ ಸರ್ಕಾರದ ಸಾಧನೆಗಳು ನಮ್ಮ ಚುನಾವಣಾ ಪ್ರಚಾರದ ಒಂದು ಭಾಗ, ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಇದರ ಬಗ್ಗೆ ನಾವು ಸರಿಯಾದ ಅಂಕಿ ಅಂಶ ನೀಡುತ್ತೇವೆ, ಎನ್ ಡಿಎ ಸರ್ಕಾರ ವಿಪತ್ತು ಪರಿಹಾರಕ್ಕಾಗಿ 1,145 ಕೋಟಿ ರು ಹಣ ಬಿಡುಗಡೆ ಮಾಡಿದೆ. ಆದರೆ ಯುಪಿಎ ಸರ್ಕಾರ ಕೇವಲ 6.67 ಕೋಟಿ ರು ಹಣ ಬಿಡುಗಡೆ ಮಾಡಿತ್ತು, ಮೋದಿ ಆಡಳಿತದ 5 ವರ್ಷ ಅವಧಿಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 2.19 ಲಕ್ಷ ಕೋಟಿ ಅನುದಾನ ನೀಡಿದೆ, ಈ ಹಿಂದೆ ಇದ್ದ ಯುಪಿಎ ಸರ್ಕಾರ 88, 583ಕೋಟಿ ಮಾತ್ರ ನೀಡಿದೆ. ಅದರ ಹೊರತಾಗಿ ರಾಜ್ಯದಲ್ಲಿ ಈ ಹಿಂಗೆ ಬಿಜೆಪಿ ಸರ್ಕಾರದ ಆಡಳಿತ ಇದ್ದಾಗ ಮಾಡಿದ ಸಾಧನೆಗಳನ್ನು ಜನರಿಗೆ ತಿಳಿಸಲಿದ್ದೇವೆ,  ನಾವು ಹಿಂದುಳಿ ವರ್ಗಗಳಿಗಾಗಿ ನಾವು ದೊಡ್ಡ ಮಟ್ಟದ ರ್ಯಾಲಿಗಳನ್ನು ಹಮ್ಮಿಕೊಳ್ಳಲಿದ್ದೇವೆ.
ಪ್ರ: ಮಹಾದಾಯಿ ವಿವಾದದಲ್ಲಿ ಮೋದಿ ಮದ್ಯ ಪ್ರವೇಶಿಸಲು ನಿರಾಕರಿಸಿದ್ದಕ್ಕಾಗಿ ಉತ್ತರ ಕರ್ನಾಟಕದಲ್ಲಿ ದೊಡ್ಡ ಮಟ್ಟದ ಬೆಲೆ ತೆರಬೇಕಾಗುತ್ತದೆಯೆ?
ಉ:  ಹಿಂದಿನ ಯುಪಿಎ ಸರ್ಕಾರ ಉದ್ದೇಶ ಪೂರ್ವಕವಾಗಿಯೇ ವಿವಾದವನ್ನು ದೊಡ್ಡದಾಗಿ ಮಾಡಿದೆ, ಇವತ್ತಿಗೂ ಕೂಡ ಕಾಂಗ್ರೆಸ್ ವಿವಾದವನ್ನ ಜೀವಂತವಾಗಿಡಲು ಯತ್ನಿಸುತ್ತಿದೆ. ನಾವು ಗೋವಾ ಮತ್ತು ಮಹಾರಾಷ್ಟ್ರಗಳ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇವೆ. ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ.
ಪ್ರ: ನೀವು ಉತ್ತರ ಕರ್ನಾಟಕದಿಂದ ಸ್ಪರ್ಧಿಸಬೇಕೆಂದು ಅಮಿತ್ ಶಾ ಬಯಸಿದ್ದಾರಲ್ಲ?
ಉ: ಶಿಕಾರಿಪುರ ಜನತೆ ನನ್ನನ್ನು ಎಲ್ಲಿಯೂ ಹೋಗಲು ಬಿಡುವುದಿಲ್ಲ, ಅಲ್ಲಿನ ಜನಗಳ ಪ್ರೀತಿ ಮತ್ತು ಆಶೀರ್ವಾದದಿಂದ ನಾನು ಶಾಸಕ, ಮುಖ್ಯಮಂತ್ರಿಯಾಗಿದ್ದೇನೆ, ನಾನು ಪ್ರಚಾರಕ್ಕೆ ಹೋಗದೇ ಇದ್ದರು ನನ್ನನ್ನು ಗೆಲ್ಲಿಸುವುದಾಗಿ ಜನಗಳು ನನಗೆ ಪ್ರಮಾಣ ಮಾಡಿದ್ದಾರೆ. ಹೀಗಾಗಿ ನನ್ನ ಪ್ರಚಾರದ ಸಮಯವನ್ನು ನಾನು ಬೇರೆ ಕ್ಷೇತ್ರಕ್ಕೆ ನೀಡಬಹುದು. ಶಿಕಾರಿಪುರದ ಜೊತೆ ನನಗೆ ಅಪಾರ ಬಾಂಧವ್ಯವಿದೆ. ಅದನ್ನು ಮುರಿಯಲು ನನಗೆ ಕಷ್ಟ, 
ಪ್ರ:  ಒಂದು ವೇಳೆ ನೀವು ಅಧಿಕಾರಕ್ಕೆ ಬಂದರೇ ಬೆಂಗಳೂರಿಗರಿಗಾಗಿ ಏನು ಪ್ಲಾನ್ ಮಾಡಿದ್ದೀರಿ?
ಉ: ಬೆಂಗಳೂರನ್ನು ನಾಶ ಮಾಡಿದವರು ಕಾಂಗ್ರೆಸ್ಸಿಗರು, ಬೆಂಗಳೂರನ್ನು ಕೊಂದವರು ಕಾಂಗ್ರೆಸ್ಸಿಗರು, ಬೆಂಗಳೂರು ಮುಳುಗುವಂತೆ ಮಾಡಿದವರು ಕಾಂಗ್ರೆಸ್ಸಿಗರು, ಮಳೆ ಬಂದರೆ ಬೆಂಗಳೂರು ರಸ್ತೆಗಳು ಪ್ರವಾಹ ದಂತಾಗುತ್ತವೆ, ರಸ್ತೆಗಳ ಗುಂಡಿಗಳಿಂದಾಗಿ ಅನೇಕ ನಾಗರಿಕರು ಜೀವ ಕಳೆದುಕೊಳ್ಳುವಂತಾಗಿದೆ. ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದೆ,  ಬೆಂಗಳೂರು ಮೂಲಭೂತ ಸೌಕರ್ಯ ಹದಗೆಡಿಸಿರುವ ಕಾಂಗ್ರೆಸ್ ಗೆ ನಾಚಿಕೆಯಾಗಬೇಕು. ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ಸಿದ್ದರಾಮಯ್ಯ ಸರ್ಕಾರ ಲೂಟಿ ಮಾಡುತ್ತಿದೆ. ಬೆಂಗಳೂರು ನಗರವೊಂದರಲ್ಲೇ 28 ವಿಧಾನಸಭೆ ಕ್ಷೇತ್ರಗಳಿದ್ದು, ಮಿಷನ್ 150 ಗೆ ಬೆಂಗಳೂರು ನಗರ ಬಹಳ ಪ್ರಮುಖ ಪಾತ್ರ ವಹಿಸುತ್ತದೆ.
ಮೊದಲಿಗೆ ಬೆಂಗಳೂರು ಅಭಿವೃದ್ಧಿ ಹೆಸರಲ್ಲಿ ಲೂಟಿ ಮಾಡಿರುವವ ಬಣ್ಣ ಬಯಲು ಮಾಡುತ್ತೇವೆ. ನಗರದ ಅಭಿವೃದ್ಧಿಯ ಬಗ್ಗೆ ಕಾಂಕ್ರೀಟ್ ಯೋಜನೆ ರೂಪಿಸುತ್ತೇವೆ. ರಸ್ತೆಗಳನ್ನು ಪೂರ್ಣವಾಗಿ ಕಾಂಕ್ರೀಟಿಕರಣಗೊಳಿಸಿ,  ಯಾವುದೇ ವಿಳಂಬ ಮಾಡದೇ ಒತ್ತುವರಿಯಾಗಿರುವ ರಾಜ ಕಾಲುವೆಗಳನ್ನು ತೆರವು ಮಾಡಿಸುತ್ತೇವೆ. ಬೆಂಗಳೂರು ನಗರದ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ನೆರವು ಪಡೆದುಕೊಳ್ಳುತ್ತೇವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.