ರಾಜಕೀಯ

ದೆಹಲಿಯಲ್ಲಿ ಯಡಿಯೂರಪ್ಪ: ಪಕ್ಷದಿಂದ ಈಶ್ವರಪ್ಪ ಉಚ್ಚಾಟಿಸಲು ವರಿಷ್ಠರ ಮೇಲೆ ಒತ್ತಡ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪನವರ ವಿರುದ್ಧ ಸಮರ ಸಾರಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ..

ದೆಹಲಿಯಲ್ಲಿ ಯಡಿಯೂರಪ್ಪ: ಪಕ್ಷದಿಂದ ಈಶ್ವರಪ್ಪ ಉಚ್ಚಾಟಿಸಲು ವರಿಷ್ಠರ ಮೇಲೆ ಒತ್ತಡ
ಈಶ್ವರಪ್ಪ ಮತ್ತು ಯಡಿಯೂರಪ್ಪ
Published On :
ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪನವರ ವಿರುದ್ಧ ಸಮರ ಸಾರಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ವರಿಷ್ಠರ ಮೇಲೆ ಒತ್ತಡ ಹೇರಲು ಬಿಎಸ್ ವೈ ಮುಂದಾಗಿದ್ದಾರೆ. 
ಶುಕ್ರವಾರ ದೆಹಲಿಗೆ ತೆರಳಿರುವ ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಲು ಯತ್ನಿಸಿದ್ದಾರೆ, ಆದರೆ ಅಮಿತ್ ಶಾ ಜಮ್ಮು ಕಾಶ್ಮೀರಕ್ಕೆ ತೆರಳಿದ ಕಾರಣ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಪಕ್ಷದ ರಾಜ್ಯ ಉಸ್ತುವಾರಿ ಮುರುಳಿಧರ್ ರಾವ್  ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಲಾಲ್ ಅವರನ್ನು ಶನಿವಾರ ಭೇಟಿ ಮಾಡಿ ಚರ್ಚಿಸಲಿದ್ದಾರೆ.
ಈಶ್ವರಪ್ಪ ಆಯೋಜಿಸಿದ್ದ ಸೇವ್ ಬಿಜೆಪಿ ಸಮಾರಂಭದ ಸಿಡಿಯನ್ನು ಯಡಿಯೂರಪ್ಪ  ಕೊಂಡೊಯ್ದಿದ್ದು, ಈಶ್ವರಪ್ಪ ಅವರನ್ನು ಉಚ್ಚಾಟಿಸಲು ಒತ್ತಾಯಸಿದ್ದಾರೆ. ಪಕ್ಷದಿಂದ ಈಶ್ವರಪ್ಪ ಅವರನ್ನು ಉಚ್ಛಾಟಿಸುವ ಮೂಲಕ ತಮ್ಮ ವಿರೋಧಿಗಳಿಗೆ ಪ್ರಬಲ ಸಂದೇಶ ರವಾನಿಸಲು ಬಿಎಸ್ ವೈ ಸಿದ್ಧತೆ ನಡೆಸಿದ್ದಾರೆ.
ಪಕ್ಷದ ಎಲ್ಲರೊಂದಿಗೂ ನಾನು ಒಗ್ಗಟ್ಟಾಗಿ ಕೆಲಸ ಮಾಡಲು ಬಯಸಿದ್ದೇನೆ, ಆದರೆ ಕೆಲ ನಾಯಕರು ತಮ್ಮ ಮಿತಿ ಮೀರುತ್ತಿದ್ದಾರೆ. ಅವರ ಹೇಳಿಕೆಗಳು ಹಲವು ಶಾಸಕರು ಆಕ್ರೋಶಗೊಂಡಿದ್ದಾರೆ. ಅವರ ದಾರಿಯನ್ನು ನಾನು ಸರಿಪಡಿಸಲು ಬಯಸುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಇನ್ನೂ ವಿಧಾನ ಪರಿಷತ್ ವಿರೋಧ ಪಕ್ಷದ ಸ್ಥಾನದಿಂದ ಈಶ್ವರಪ್ಪ ಅವರನ್ನು ತೆಗೆದು ಹಾಕಲು ಯಡಿಯೂರಪ್ಪ ವೇದಿಕೆ ಸಿದ್ಧಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಂಎಲ್ ಸಿ ಡಿ.ಎಸ್ ವೀರಯ್ಯ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ರಾಜ್ಯದ ಬಿಜೆಪಿ ಅಧ್ಯಕ್ಷರ ವಿರುದ್ಧ ದಂಗೆ ಎದ್ದಿರುವ ಈಶ್ವರಪ್ಪ ಅವರನ್ನು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಮುಂದುವರಿಸಬೇಕೆ ಎಂಬ ಬಗ್ಗೆ ಪ್ರಶ್ನೆ ಎದ್ದಿದೆ.
ಈಶ್ವರಪ್ಪ ಬೆನ್ನಿಗೆ ನಿಂತಿರುವ ಮಾಸ್ಟರ್ ಮೈಂಡ್ ಬಿ.ಎಲ್ ಸಂತೋಷ್ ಅವರ ವಿರುದ್ಧವೂ ದೂರು ಸಲ್ಲಿಸುವ ಸಾಧ್ಯತೆಯಿದೆ. ಬಿಜೆಪಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಹಲವಾರು ಜವಾಬ್ದಾರಿಗಳಿರುತ್ತವೆ, ಹೀಗಾಗಿ ಅವರನ್ನು ಈ ಪ್ರಕರಣದಲ್ಲಿ  ಭಾಗಿಯಾಗುವಂತೆ ಹೇಳಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಟೈಪಿಸ್ಟ್‌ ಮಲ್ಲಿಕಾರ್ಜುನ ಎಂಬುವವರನ್ನು ಸಂತೋಷ್‌ ಪರ ಕೆಲಸ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ವಜಾ ಮಾಡಲಾಗಿದೆ.
ಗುರುವಾರ ಅರಮನೆ ಮೈದಾನದಲ್ಲಿ ನಡೆದ ಅತೃಪ್ತರ ಸಭೆಗೆ ಪೊಲೀಸರಿಂದ ಅನುಮತಿ ಪಡೆಯುವ ಪತ್ರವನ್ನು ಕಚೇರಿಯಿಂದಲೇ ಸಿದ್ಧಪಡಿಸಿ ಕೊಟ್ಟಿದ್ದರು. ಅಲ್ಲದೆ, ಪಕ್ಷದ ಚಟುವಟಿಕೆಯ ಪತ್ರಗಳ ಪ್ರತಿಗಳನ್ನು ಸಂತೋಷ್‌ ಅವರಿಗೆ ಕಳುಹಿಸುತ್ತಿದ್ದರು ಎಂಬ ಕಾರಣಕ್ಕೆ ಅವರನ್ನು ವಜಾ ಮಾಡಲಾಗಿದೆ
ಬಿ.ಜೆ. ಪುಟ್ಟಸ್ವಾಮಿಗೆ ಘೇರಾವ್
ಮೈಸೂರು: ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಅವರಿಗೆ ಮೈಸೂರಿನಲ್ಲಿ ಸ್ಥಳೀಯ ಕೆಲ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಘೇರಾವ್‌ ಹಾಕಿದರು. ಮಹಾನಗರ ಪಾಲಿಕೆಯ ಜೆಡಿಎಸ್‌ ಸದಸ್ಯ ನಟರಾಜ್ ಅವರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರಿದ ನಂತರ ಸುದ್ದಿಗಾರರೊಂದಿಗೆ ಪುಟ್ಟಸ್ವಾಮಿ ಮಾತನಾಡಿದರು.‘ಕೆ.ಎಸ್. ಈಶ್ವರಪ್ಪ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ’ ಎಂದರು. ಕೂಡಲೇ  ಕಾರ್ಯಕರ್ತರು ಮುತ್ತಿಗೆ ಹಾಕಿದರು, ಒಂದು ಗುಂಪು ಈಶ್ವರಪ್ಪ ಪರವಾಗಿ ಜೈಕಾರ ಹಾಕಿತು. ಇನ್ನೊಂದು ಕಡೆ ಬಿ.ಎಸ್‌.ಯಡಿಯೂರಪ್ಪ ಪರವಾಗಿ ಜೈಕಾರ ಕೂಗಿದರು. ಕೊನೆಗೆ ಪೊಲೀಸರು ಗುಂಪು ಚದುರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.