ಕಾಂಗ್ರೆಸ್ ತೊರೆಯಲು ಸಿದ್ಧರಿದ್ದ ನಾಯಕರನ್ನು ಉಳಿಸಿಕೊಳ್ಳಲು ಉಪಚುನಾವಣೆ ಫಲಿತಾಂಶ ನೆರವು!
ನಂಜನಗೂಡು, ಗುಂಡ್ಲು ಪೇಟೆ ವಿಧಾನಸಭಾ ಚುನಾವಣೆಯ ಅಚ್ಚರಿ ಫಲಿತಾಂಶ ಕಾಂಗ್ರೆಸ್ ತೊರೆಯಲು ಸಿದ್ಧವಾಗಿದ್ದ ಹಲವು ನಾಯಕರಿಗೆ ತಮ್ಮ ನಿರ್ಧಾರ, ಕಾರ್ಯತಂತ್ರವನ್ನು ಪುನಃ ಪರಿಶೀಲಿಸುವಂತೆ ಮಾಡಿದೆ.

Published On :
ಬೆಂಗಳೂರು: ನಂಜನಗೂಡು, ಗುಂಡ್ಲು ಪೇಟೆ ವಿಧಾನಸಭಾ ಚುನಾವಣೆಯ ಅಚ್ಚರಿ ಫಲಿತಾಂಶ ಕಾಂಗ್ರೆಸ್ ತೊರೆಯಲು ಸಿದ್ಧವಾಗಿದ್ದ ಹಲವು ನಾಯಕರಿಗೆ ತಮ್ಮ ನಿರ್ಧಾರ, ಕಾರ್ಯತಂತ್ರವನ್ನು ಪುನಃ ಪರಿಶೀಲಿಸುವಂತೆ ಮಾಡಿದೆ.
ವಿಧಾನಸಭೆ ಉಪಚುನಾವಣೆಯ ಫಲಿತಾಂಶದಿಂದ ಕಾಂಗ್ರೆಸ್ ರಾಜ್ಯದಲ್ಲಿ ಸಂಪೂರ್ಣವಾಗಿ ಎಲ್ಲವನ್ನೂ ಕಳೆದುಕೊಂಡಿಲ್ಲ ಎಂಬ ಸಂದೇಶ ರವಾನೆಯಾಗಿದೆ. ಚುನಾವಣೆಗೂ ಮುನ್ನ ಮಾಜಿ ಸಿಎಂ ಎಸ್ಎಂ ಕೃಷ್ಣ, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಜಯಪ್ರಕಾಶ್ ಹೆಗ್ಡೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಇದಕ್ಕೂ ಮುನ್ನ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಶ್ರೀನಿವಾಸ್ ಪ್ರಸಾದ್ ಅವರು ತಮ್ಮನ್ನು ಸಚಿವ ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ಅಸಮಾಧಾನಗೊಂಡು ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು.
ಈ ಬೆಳವಣಿಗೆಗಳ ಬೆನ್ನಲ್ಲೇ ಹಲವು ಕಾಂಗ್ರೆಸ್ ನಾಯಕರು ಬಿಜೆಪಿ ಸೇರಲು ಬಯಸುತ್ತಿದ್ದಾರೆ, ಉಪಚುನಾವಣೆ ಫಲಿತಾಂಶದ ಬಳಿಕ ಪಕ್ಷಕ್ಕೆ ಸೇರುತ್ತಾರೆ ಎಂದು ಬಿಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಅನೇಕ ನಾಯಕರು ಹೇಳಿಕೆ ನೀಡಿದ್ದರು. ಸಿದ್ದರಾಮಯ್ಯ ಕಾರ್ಯನಿರ್ವಹಣೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಸಿಕೆ ಜಾಫರ್ ಷರೀಫ್, ಎಂ.ವಿ ರಾಜಶೇಖರನ್, ಸೇರಿದಂತೆ ಅನೇಕ ನಾಯಕರು ಬಿಜೆಪಿ ಸೇರುತ್ತಾರೆ ಎಂದು ವಿಶ್ಲೇಷಿಸಲಾಗುತ್ತಿತ್ತು. ಆದರೆ ಸಿಕೆ ಜಾಫರ್ ಷರೀಫ್ ಹಾಗೂ ಎಂವಿ ರಾಜಶೇಖರನ್ ಈ ಬಗ್ಗೆ ಸ್ಪಷ್ಟನೆ ನೀಡಿ ಬಿಜೆಪಿ ಸೇರುವುದಿಲ್ಲ ಎಂದಿದ್ದರು.
ಮೂಲಗಳ ಪ್ರಕಾರ ಕಾಂಗ್ರೆಸ್ ನಾಯಕರಾದ ಎಂ ಹೆಚ್ ಅಂಬರೀಷ್ ಅವರನ್ನು ಪಕ್ಷಕ್ಕೆ ಕರೆತರಲು ಬಿಜೆಪಿ ಚಿಂತನೆ ನಡೆಸಿತ್ತು. ಈ ಮೂಲಕ ಮಂಡ್ಯದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಬಹುದು ಎಂಬ ಉದ್ದೇಶ ಬಿಜೆಪಿಯದ್ದಾಗಿತ್ತು. ಆದರೆ ಕಾಂಗ್ರೆಸ್ ತೊರೆಯುವುದರ ಬಗ್ಗೆ ಸ್ಪಷ್ಟನೆ ನೀಡಿದ್ದ ಅಂಬರೀಷ್ ಪಕ್ಷ ತೊರೆಯುವುದಿಲ್ಲ ಎಂದಿದ್ದರು.
ಇನ್ನು ಸಿಎಂ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಗೆ ಕರೆತರುವುದರಲ್ಲಿ ಮುಖ್ಯ ಪಾತ್ರ ವಹಿಸಿದ್ದ ಮಾಜಿ ಸಂಸದ ವಿಶ್ವನಾಥ್ ಅವರು ಪಕ್ಷ ಹಾಗೂ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಜೆಡಿಎಸ್ ಸೇರುತ್ತಾರೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಕಾಂಗ್ರೆಸ್ ತೊರೆಯಲು ತುದಿಗಾಲಲ್ಲಿ ನಿಂತಿದ್ದ ನಾಯಕರಿಗೆ ತಮ್ಮ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಮಾಡಿದೆ. ಇತ್ತ ಬಿಜೆಪಿ ಮಾತ್ರ 2018 ರ ವಿಧಾನಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್ ನಿಂದ ಹಲವು ನಾಯಕರು ಪಕ್ಷಕ್ಕೆ ಸೇರುತ್ತಾರೆ ಎಂಬ ನಿರೀಕ್ಷೆಯಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Congressಕಾಂಗ್ರೆಸ್bjpಬಿಜೆಪಿAssembly electionsವಿಧಾನಸಭಾ ಚುನಾವಣೆKarnataka bypolls 2017ಕರ್ನಾಟಕ ವಿಧಾನಸಭಾ ಉಪ ಚುನಾವಣೆ 2017
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


