ಮಹಿಳೆಯನ್ನು ನಿಂದಿಸಿದ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿ: ಹೆಚ್'ಡಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದ ಬಳಿ ಮಹಿಳೆಯನ್ನು ನಿಂದಿಸಿದ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿ, ಇಲ್ಲದೆ ಹೋದರೆ ಸಿಎಂ ನಿವಾಸದ ಬಳಿ ಧರಣಿ ನಡೆಸಬೇಕಾಗುತ್ತದೆ...

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದ ಬಳಿ ಮಹಿಳೆಯನ್ನು ನಿಂದಿಸಿದ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿ, ಇಲ್ಲದೆ ಹೋದರೆ ಸಿಎಂ ನಿವಾಸದ ಬಳಿ ಧರಣಿ ನಡೆಸಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಗಳವಾರ ಬೆದರಿಕೆ ಹಾಕಿದ್ದಾರೆ.
ಜನತಾದರ್ಶನದಲ್ಲಿ ಹೊಸಹಳ್ಳಿ ನಿವಾಸಿ ದಲಿತ ಮಹಿಳೆಗೆ ಕಿರುಕುಳ ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸುದ್ಧಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಪೊಲೀಸರ ಬಳಿ ಯಾವುದಾದರೂ ದಾಖಲೆಗಳಿದ್ದರೆ ಅದನ್ನು ತೋರಿಸಲಿ. ಜನರ ಸಮಸ್ಯೆಗಳಿಗೆ ಸ್ಪಂದಿಸಿದಿದ್ದರೆ ಜನತಾದರ್ಶನ ಮಾಡುತ್ತಿರುವುದು ಯಾವ ಪ್ರಯೋಜನಕ್ಕೆ? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ಸಿಎಂ ನಿವಾಸದ ಬಳಿ ದಲಿತ ಮಹಿಳೆಯನ್ನು ಕೂಡಿ ಹಾಕಿ, ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ. ವೇಶ್ಯಾವಾಟಿಕೆ ಪ್ರಕರಣ ಹಾಕಿದ್ದಾರೆ. ಬೆದರಿಕೆ ಹಾಕಿದ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಅಮಾನುಷವಾಗಿ ನಡೆದುಕೊಂಡವರ ವಿರುದ್ಧ ಕ್ರಮಕೈಗೊಳ್ಳಬೇಕು. ಮೂರು ದಿನದೊಳಗಾಗಿ ಯಾವುದೇ ಕ್ರಮ ಕೈಗೊಳ್ಳದೇ ಹೋದರೆ ಪಕ್ಷದ ಕಾರ್ಯಕರ್ತರ ಜೊತೆ ಸಿಎಂ ಗೃಹ ಕಚೇರಿ ಕೃಷ್ಣಾ ಮುಂದೆ ಧರಣಿ ಕೂರುತ್ತೇನೆಂದು ಬೆದರಿಕೆ ಹಾಕಿದ್ದಾರೆ.
ಇನ್ನು ಸುದ್ಧಿಗೋಷ್ಠಿಯಲ್ಲಿ ನೊಂದ ಮಹಿಳೆ ಸವಿತಾ ಕೂಡ ಹಾಜರಿದ್ದು, ಅವರು ಕೂಡ ಪೊಲೀಸರ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಮೇ.17 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಗೃಹ ಕಚೇರಿಗೆ ಹೋಗಿದ್ದೆ. ಈ ಸಂದರ್ಭದಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾದೆ ಎಂದು ಆರೋಪಿಸಿದ್ದಾರೆ.
ಆರೋಪ ತಳ್ಳಿಹಾಕಿದ ಮೇಘರಿಕ್
ಜನತಾದರ್ಶನಕ್ಕೆ ಆಗಮಿಸಿದ್ದ ಮಹಿಳೆ ಮೇಲೆ ದೌರ್ಜನ್ಯ ನಡೆಸಲಾಗಿದೆ, ಕಿರುಕುಳ ನೀಡಲಾಗಿದೆ ಎಂಬ ಕುಮಾರಸ್ವಾಮಿ ಆರೋಪ ಸುಳ್ಳು. ಈ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.
ಸವಿತಾ ಅವರು ಸಿಎಂ ಗೃಹ ಕಚೇರಿಗೆ ರಾತ್ರಿ 8ರ ಸುಮಾರಿಗೆ ಬಂದಿದ್ದರು. ಈ ವೇಳೆ ಹಕ್ಕು ನೀಡದಿದ್ದರೆ ವಿಷ ಕುಡಿದು ಸಾಯುವುದಾಗಿ ಬೆದರಿಕೆ ಹಾಕಿದ್ದರು. ಹೀಗಾಗಿ ಅವರನ್ನು ಬಂಧನಕ್ಕೊಳಪಡಿಸಿ ಮಹಿಳಾ ನಿಲಯಕ್ಕೆ ಕಳುಹಿಸಲಾಗಿತ್ತು. ಮಹಿಳೆಯನ್ನು ಯಾರೂ ನಿಂದಿಸಿಲ್ಲ, ಕಿರುಕುಳ ನೀಡಿಲ್ಲ. ಇದಕ್ಕೆ ನಮ್ಮ ಬಳಿ ವಿಡಿಯೋ ಸಾಕ್ಷಿ ಇದೆ ಎಂದು ಹೇಳಿದ್ದಾರೆ.
ಪ್ರಕರಣದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಹೆಚ್.ಡಿ.ಕೆ: ಸಿದ್ದರಾಮಯ್ಯ
ದಲಿತ ಮಹಿಳೆ ವಿಚಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜಕೀಯ ಮಾಡುತ್ತಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ನಿನ್ನೆ ನಗರ ಪ್ರದಕ್ಷಿಣೆ ಮುಗಿಸಿದ ಬಳಿಕೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸವಿತಾ ಅವರನ್ನು ನಾನು ಭೇಟಿಯಾಗಿಲ್ಲ. ಗೃಹ ಕಚೇರಿ ಬಳಿ ಬಂದು ಗಲಾಟೆ ಮಾಡಿದ್ದರು, ಹೀಗಾಗಿ ಅವರನ್ನು ಪೊಲೀಸರು ಮಹಿಳಾ ನಿಲಯದಲ್ಲಿ ಇರಿಸಿದ್ದರು. ಒಂದು ವೇಳೆ ಮಹಿಳೆಗೆ ಅನ್ಯಾಯವಾಗಿದ್ದರೆ ಅದನ್ನು ಸರಿಪಡಿಸುತ್ತೇನೆ. ಹಕ್ಕು ಪತ್ರವನ್ನೂ ನೀಡುತ್ತೇನೆ. ಈ ವಿಚಾರದಲ್ಲಿ ಹೆಚ್ ಡಿಕೆ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕೆಂದು ಹೇಳಿದ್ದಾರೆ.
ಇನ್ನು ಪ್ರಕರಣ ಕುರಿತಂತೆ ಜೆಡಿಎಸ್ ಮುಖ್ಯಸ್ಥ ದೇವೇಗೌಡ ಅವರು ಮಾತನಾಡಿದ್ದು, ದಲಿತ ಮಹಿಳೆಗೆ ಬೆಂಬಲ ನೀಡುವುದರಲ್ಲಿ ಯಾವುದೇ ರಾಜಕೀಯ ಪ್ರೇರಣೆಯಿಲ್ಲ. ಪ್ರಕರಣವನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಬೇಕು. ಸವಿತಾ ಅವರು ಸಮಾಜದಲ್ಲಿ ಗೌರವಯುತವಾಗಿ ಬದುಕಬೇಕೆಂದಿರುವ ಮಹಿಳೆ. ಅವರ ಪತಿಗೆ ಯಾರೂ ಆಟೋವನ್ನು ಬಾಡಿಗೆಗೆ ನೀಡುತ್ತಿಲ್ಲ ಎಂಬ ವಿಚಾರ ತಿಳಿದಿದೆ. ನಾನು ಅವರಿಗೆ ಆಟೋವನ್ನು ನೀಡುತ್ತೇನೆಂದು ಹೇಳಿದ್ದಾರೆ.
ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಮಾತಾನಾಡಿ, ವೈಯಕ್ತಿಕವಾಗಿ ಸವಿತಾ ಅವರನ್ನು ಭೇಟಿಯಾಗುತ್ತೇನೆ. ಮಹಿಳೆ ನ್ಯಾಯವನ್ನು ಒದಗಿಸುತ್ತೇನೆಂದು ಭರವಸೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


