ರಾಜಕೀಯ

ನಾನು ಮಂತ್ರಿಯಾಗಿದ್ದರಿಂದ ನಮ್ಮ ತಂದೆಯವರ ಪ್ರಾಬಲ್ಯ ಕಡಿಮೆಯಾಗಿಲ್ಲ: ಪ್ರಿಯಾಂಕ್ ಖರ್ಗೆ

ನಾನು ಮಂತ್ರಿಯಾಗಿರುವುದರಿಂದ ರಾಜ್ಯದಲ್ಲಿ ಮತ್ತು ಹೈಕಮಾಂಡ್ ವಲಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸರಿಸಮನವಾಗಿರುವ ನಮ್ಮ ತಂದೆಯವರ ಪ್ರಭಾವ ಅಥವಾ ವರ್ಚಸ್ಸು ಕಡಿಮೆಯಾಗಿಲ್ಲ ಎಂದು...

ನಾನು ಮಂತ್ರಿಯಾಗಿದ್ದರಿಂದ ನಮ್ಮ ತಂದೆಯವರ ಪ್ರಾಬಲ್ಯ ಕಡಿಮೆಯಾಗಿಲ್ಲ: ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
Published On :
ನಾನು ಮಂತ್ರಿಯಾಗಿರುವುದರಿಂದ ರಾಜ್ಯದಲ್ಲಿ ಮತ್ತು ಹೈಕಮಾಂಡ್ ವಲಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸರಿಸಮನವಾಗಿರುವ ನಮ್ಮ ತಂದೆಯವರ ಪ್ರಭಾವ ಅಥವಾ ವರ್ಚಸ್ಸು ಕಡಿಮೆಯಾಗಿಲ್ಲ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರ ಪುತ್ರ ಹಾಗೂ ಪ್ರವಾಸೋದ್ಯಮ ಮತ್ತು ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕನ್ನಡಪ್ರಭ.ಕಾಮ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ನಿಮಗೆ ಸಚಿವ ಸ್ಥಾನ ನೀಡುವ ಮೂಲಕ ನಿಮ್ಮ ತಂದೆಯವರನ್ನು ಸೈಡ್ ಲೈನ್ ಮಾಡಿದರೆ?
ಇಲ್ಲ. ಇದೆಲ್ಲಾ ಮಾಧ್ಯಮ ಸೃಷ್ಟಿ. ನಮ್ಮ ತಂದೆಯವರು ಅವರದ್ದೇಯಾದ ವರ್ಚಸ್ಸನ್ನು ಹೊಂದಿದ್ದಾರೆ. ರಾಜ್ಯದಲ್ಲಿ ಅವರ ಪ್ರಭಾವ ಕಡಿಮೆಯಾಗಿಲ್ಲ. ನಾನು ಏನಾದರೂ ತಪ್ಪು ಮಾಡಿದರೆ ಮಾತ್ರ ತಂದೆಯ ವರ್ಚಸ್ಸು ಕಡಿಮೆಯಾಗುತ್ತಿದೆ. ಅಂತಹ ಯಾವುದೇ ಕೆಲಸ ನಾನು ಮಾಡಲ್ಲ. ತಂದೆ ವರ್ಚಸ್ಸನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತೇನೆ ಎಂದರು. 
ನೀವು ಸಚಿವರಾಗಿದ್ದರಿಂದ ದಲಿತ ಸಿಎಂ ಹೆಸರಿನಲ್ಲಿ ನಾಯಕತ್ವ ಬದಲಾವಣೆಯ ಕೂಗಿಗೆ ಬ್ರೇಕ್ ಬಿತ್ತಾ?
ನಾಯಕತ್ವ ಬದಲಾವಣೆ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಸದ್ಯ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ನಾನು ಸಚಿವನಾಗಿರುವುದಕ್ಕೂ ನಾಯಕತ್ವ ಬದಲಾವಣೆಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಿಮಗೆ ಸಚಿವ ಸ್ಥಾನ ಸಿಗಲು ನಿಮ್ಮ ತಂದೆಯ ಪ್ರಭಾವ ಕಾರಣವೇ?
ನಾನು ಅವರ ಮಗ ನಿಜ. ಆದರೆ ಅವರ ಪ್ರಭಾವದಿಂದಲೇ ಸಚಿವ ಸ್ಥಾನ ಸಿಕ್ಕಿದೆ ಎಂದು ಹೇಳಿದರೆ ತಪ್ಪಾಗುತ್ತದೆ. ಕಳೆದ ಹಲವು ವರ್ಷಗಳಿಂದ ನಾನು ಪಕ್ಷದಲ್ಲಿ ಕ್ರಿಯಾಶೀಲನಾಗಿ ಕೆಲಸ ಮಾಡಿದ್ದೇನೆ. ಎನ್ಎಸ್ ಯುಗಾಗಿ ಕೆಲಸ ಮಾಡಿದ್ದೇನೆ. ನಾಲ್ವರು ಯುವ ಕಾಂಗ್ರೆಸ್ ಅಧ್ಯಕ್ಷರ ಕೆಳಗೆ ಕೆಲಸ ಮಾಡಿದ್ದೇನೆ. ಇದೆಲ್ಲಾ ಪಕ್ಷದ ಕೆಲಸ ಅಲ್ಲವೇ? ಮೊದಲ ಬಾರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದೇನೆ. ಸೋತರು ನಾನು ಕ್ಷೇತ್ರದ ಜನತೆಗಾಗಿ ಕೆಲಸ ಮಾಡಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಕಳೆದ ಮೂರು ವರ್ಷಗಳಿಂದ ಶಾಸಕನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಸಚಿವ ಸ್ಥಾನ ಸಿಗುವುದಕ್ಕೆ ನನ್ನ ಶ್ರಮವೂ ಇದೆ ಎಂದರು.
ನಮ್ಮದು ರಾಜಕೀಯ ಪರಂಪರೆ, ಅದರಿಂದ ದೂರವಿರಲು ಸಾಧ್ಯವಿಲ್ಲ. ಈ ಹಿಂದೆ ಸಚಿವರಾಗಿದ್ದ ದಿನೇಶ್ ಗುಂಡೂರಾವ್ ಹಾಗೂ ಈಗ ಸಚಿವರಾಗಿರುವ ಕೃಷ್ಣ ಬೈರೇಗೌಡ ಮತ್ತು ಎಚ್.ಕೆ.ಪಾಟೀಲ್ ಅವರಿಗೆ ಅವರ ತಂದೆಯ ಶ್ಯಾಡೋ ಇದೆ. ಆದರೆ ತಂದೆಯ ಪ್ರಭಾವದಿಂದಲೇ ರಾಜಯಕೀಯದಲ್ಲಿ ಎಲ್ಲರೂ ಬೆಳಯಲು ಸಾಧ್ಯವಿಲ್ಲ. ಜನ ನಮ್ಮ ಕೈಹಿಡಿದಾಗ ಮಾತ್ರ ರಾಜಕೀಯವಾಗಿ ಯಶಸ್ಸು ಗಳಿಸಲು ಸಾಧ್ಯ. ನಾನು ಸಚಿವನಾಗಿದ್ದೇನೆ ಎಂದು ಸುಮ್ಮನಿದ್ದರೆ ಜನ ಮುಂದಿನ ಬಾರಿ ನನ್ನನ್ನು ಆಯ್ಕೆ ಮಾಡಲ್ಲ. ಎರಡು ವರ್ಷಗಳ ಕಾಲ ನಾನು ಏನು ಕೆಲಸ ಮಾಡುತ್ತೇನೆ ಎಂಬುದರ ಮೇಲೆ ನನ್ನ ರಾಜಕೀಯ ಭವಿಷ್ಯ ನಿರ್ಧಾರವಾಗುತ್ತೆ.
ಅನುಭವದ ಆಧಾರದ ಮೇಲೆ ಸಚಿವ ಸ್ಥಾನ ನೀಡುವುದಾದರೆ ನಿಮಗಿಂತ ಸಾಕಷ್ಟು ಅನುಭವವಿರುವ ಹಿರಿಯ ಶಾಸಕರಿದ್ದರಲ್ಲವೇ?
ಒಂದು ಸಂಪುಟದಲ್ಲಿ ಯುವಕರು ಮತ್ತು ಹಿರಿಯರು ಇರುತ್ತಾರೆ. ಇಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವವರಿಗೆ ಸ್ಥಾನ ನೀಡಲಾಗಿದೆ. ಸಂಪುಟದಲ್ಲಿ ನಾನೊಬ್ಬನೇ ಮೊದಲ ಬಾರಿ ಆಯ್ಕೆಯಾದ ಶಾಸಕನಲ್ಲ. ಪ್ರಮೋದ್ ಮಧ್ವರಾಜ್ ಅವರು ಇದ್ದಾರೆ. ಅಲ್ಲದೆ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಸಿಎಂಗೆ ಬಿಟ್ಟ ವಿಚಾರ. ಈ ಬಗ್ಗೆ ನೀವು ಅವರನ್ನೇ ಕೇಳಬೇಕು.

Story image
ಪ್ರವಾಸೋದ್ಯಮ ಸಚಿವರಾಗಿ ಅತ್ಯಂತ ಹಿಂದೂಳಿದ ಹೈದರಾಬಾದ್ ಕರ್ನಾಟಕದಲ್ಲಿ ಪ್ರವಾಸೋದ್ಯಮವನ್ನು ಹೇಗೆ ಬೆಳೆಸುತ್ತೀರಿ?
ನಾನು ಬರೀ ಹೈದರಾಬಾದ್ ಕರ್ನಾಟಕಕ್ಕೆ ಮಾತ್ರ ಸಚಿವನಲ್ಲ. ಈಡೀ ರಾಜ್ಯಕ್ಕೆ ಸಚಿವ. ಆದರೆ ಆ ಭಾಗದ ಸಚಿವನಾಗಿ ಹೆಚ್ಚು ಜವಾಬ್ದಾರಿ ಇದೆ. ಹೀಗಾಗಿ ಆನೆಗುಂದಿ, ಯಾದಗಿರಿ ಕೋಟೆ, ಸುರಪುರ ಕೋಟೆ, ಹುಮ್ನಾಬಾದ್ ಜಂಗಲ್ ಲಾಡ್ಜ್ ಗಳು, ಚಿಂಚೋಳಿ ಕಾಯ್ದಿಟ್ಟ ಅರಣ್ಯ ಪ್ರದೇಶ ಹಾಗೂ ಸನ್ನತಿ ಸೇರಿದಂತೆ ಇತರೆ ಕೆಲವು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ವರದಿ ನೀಡುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲದೆ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಡಿ ಒಂದು ತಾತ್ಕಾಲಿಕ ಹೈದರಾಬಾದ್ ಕರ್ನಾಟಕ ಪ್ರವಾಸೋದ್ಯಮ ಸಮಿತಿಯನ್ನು ರಚಿಸಲಾಗುತ್ತಿದೆ. ಈ ಸಮಿತಿ ಹೈದರಾಬಾದ್ ಕರ್ನಾಟಕ ಭಾಗದ ಪ್ರವಾಸಿ ತಾಣಗಳ ಬಗ್ಗೆ ವರದಿ ನೀಡಲಿದೆ. ಆ ವರದಿಯನ್ನು ಆಧರಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು.
ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗೆ ಖರ್ಗೆ ಅವರ ಕೊಡುಗೆ ಶೂನ್ಯ ಎಂಬ ಆರೋಪ ಇದೆ?
ಈ ಆರೋಪ ಯಾವ ನಿಟ್ಟಿನಲ್ಲಿ ಮತ್ತು ಯಾವ ಸಂದರ್ಭದಲ್ಲಿ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಆ ಭಾಗಕ್ಕೆ 371, ಇಎಸ್ಐ ಆಸ್ಪತ್ರೆ ಹಾಗೂ ಯಾದಗಿರಿ ಜಿಲ್ಲೆಯಾಗುವುದಕ್ಕೆ ಬೇಕಾದ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಿದ್ದೇ ನಮ್ಮ ತಂದೆಯವರು. ಅಭಿವೃದ್ಧಿ ಮಾಡದೆಯೇ ಒಬ್ಬ ವ್ಯಕ್ತಿ 10ರಿಂದ 12 ಬಾರಿ ಆಯ್ಕೆಯಾಗಲು ಸಾಧ್ಯವೆ?
ಕಲಂ 371 ಸಹ ಸರಿಯಾಗಿ ಜಾರಿಯಾಗಿಲ್ಲ ಮತ್ತು ಬಡ್ತಿಯಲ್ಲಿ 371 ಅಡಿ ಮೀಸಲಾತಿ ಜಾರಿಗೊಳಿಸಲು ಆ ಭಾಗದ ನಾಯಕರು ಹೆಚ್ಚು ಆಸಕ್ತಿ ವಹಿಸುತ್ತಿಲ್ಲ ಎಂಬ ಆರೋಪವಿದೆ?
371ನಿಂದಾಗಿ ಆ ಭಾಗದ ಜನತೆಗೆ ಸಾಕಷ್ಟು ಅನುಕೂಲವಾಗಿದೆ. ಇದರಿಂದ ಎಷ್ಟೋ ಜನಕ್ಕೆ ಉದ್ಯೋಗ ಸಿಕ್ಕಿದೆ. ಅದು ಸಂಪೂರ್ಣ ಜಾರಿಯಾಗಲು ಸ್ವಲ್ಪ ಸಮಯ ಬೇಕು. ನಾನು ಈಗಷ್ಟೇ ಸಚಿವನಾಗಿದ್ದೇನೆ. ಬಡ್ತಿಯಲ್ಲಿ ಮೀಸಲಾತಿ ಜಾರಿಯಾಗದ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಆ ಬಗ್ಗೆ ಪರಿಶೀಲನೆ ನಡೆಸುತ್ತೇನೆ.
ಐಟಿ, ಬಿಟಿಯನ್ನು ಹೈದರಾಬಾದ್ ಕರ್ನಾಟಕಕ್ಕೆ ಕೊಂಡೊಯ್ಯುವ ಉದ್ದೇಶ ಇದೆಯೇ?
ಅಂತಹ ಯಾವುದೇ ಉದ್ದೇಶ ಇಲ್ಲ. ಸುಮ್ಮನೆ 40-50 ಕೋಟಿ ಖರ್ಚು ಮಾಡಿ ಐಟಿ ಪಾರ್ಕ್ ಮಾಡಿದರೆ ಏನು ಪ್ರಯೋಜನೆ. ಈಗಾಗಲೇ ಕಲಬುರ್ಗಿಯಲ್ಲಿ ಒಂದು ಐಟಿ ಪಾರ್ಕ್ ಇದೆ. ಆದರೆ ಅಲ್ಲಿ ಇನ್ಫೋಸಿಸ್, ವಿಪ್ರೋದಂತಹ ದೊಡ್ಡ ದೊಡ್ಡ ಕಂಪನಿಗಳು ಬರಬೇಕಾದರೆ, ವಿಮಾನ ನಿಲ್ದಾಣ, ಉತ್ತಮ ಸಾರಿಗೆ ಸೇರಿದಂತೆ ಇತರೆ ಮೂಲಸೌಕರ್ಯಗಳು ಇರಬೇಕಾಗುತ್ತದೆ. ಅದಕ್ಕೆ ಹೆಚ್ಚು ಕಾಲಾವಕಾಶ ಬೇಕು. ಈಗ ಸದ್ಯಕ್ಕೆ ಆ ಭಾಗದ ಇಂಜಿನಿಯರಿಂಗ ಪದವಿಧರರಿಗೆ ಉದ್ಯೋಗಾವಕಾಶ ಕಲ್ಪಿಸಿಲು ಉದ್ಯೋಗ ಮೇಳ ನಡೆಸುವ ಉದ್ದೇಶ ಹೊಂದಿದ್ದೇವೆ.
ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ನಿಮ್ಮ ಮುಂದಿರುವ ಹೊಸ ಯೋಜನೆಗಳೇನು?
ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಕೆಲವು ಹೊಸ ಹೊಸ ಯೋಜನೆಗಳನ್ನು ಪ್ರಕಟಿಸಲು ಚಿಂತನೆ ನಡೆಸಿದ್ದೇವೆ. ಆ ಬಗ್ಗೆ ಮುಂದಿನ ವಾರ ಪತ್ರಿಕಾಗೋಷ್ಠಿ ಕರೆದು ವಿವರ ನೀಡುತ್ತೇನೆ.
- ಲಿಂಗರಾಜ್ ಬಡಿಗೇರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.