ದೆಹಲಿಗೆ ಇಂದು ಸಿದ್ದು, ಪರಂ; ಸಂಪುಟ ಪುನಾರಚನೆ ವಿಳಂಬ ಸಾಧ್ಯತೆ
ಸಚಿವ ಸಂಪುಟ ಪುನಾರಚನೆ ಪ್ರಕ್ರಿಯೆ ಮೇಲೆ ಬಿಹಾರ ವಿಧಾನಸಭೆ ಚುನಾವಣೆಯ ಮಂಜು ಕವಿದಿದ್ದು, ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಮುಕ್ತಾಯವಾಗುವವರೆಗೂ ಮುಂದೂಡಲ್ಪಡುವ ಸಾಧ್ಯತೆ ಇದೆ...

ಬೆಂಗಳೂರು: ಸಚಿವ ಸಂಪುಟ ಪುನಾರಚನೆ ಪ್ರಕ್ರಿಯೆ ಮೇಲೆ ಬಿಹಾರ ವಿಧಾನಸಭೆ ಚುನಾವಣೆಯ ಮಂಜು ಕವಿದಿದ್ದು, ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಮುಕ್ತಾಯವಾಗುವವರೆಗೂ ಮುಂದೂಡಲ್ಪಡುವ ಸಾಧ್ಯತೆ ಇದೆ.
ಕಾಂಗ್ರೆಸ್‍ನ ದೆಹಲಿ ಮೂಲಗಳ ಪ್ರಕಾರ ಸಂಪುಟ ಪುನಾರಚನೆ ಬಗ್ಗೆ ವರಿಷ್ಠರು ಇನ್ನೂ ಚಿಂತನೆ ನಡೆಸಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಈ ಉದ್ದೇಶಕ್ಕಾಗಿ ಚರ್ಚೆ ನಡೆಸಲು ದೆಹಲಿಗೆ ಬನ್ನಿ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರಿಗೆ ಸಮಯ ನೀಡಿಲ್ಲ. ಪುನಾರಚನೆಯ ಎಲ್ಲ ಜವಾಬ್ದಾರಿಗಳನ್ನು ಮೈಮೇಲೆ ಎಳೆದುಕೊಳ್ಳುವುದಕ್ಕೆ ಸಿದ್ದರಾಮಯ್ಯನವರೂ ಸಿದ್ದರಿಲ್ಲ. ಹೀಗಾಗಿ ವರಿಷ್ಠರ ಒಪ್ಪಿಗೆ ಇಲ್ಲದೇ ಈ ಪ್ರಕ್ರಿಯೆ ನಡೆಯುವುದು ಅನುಮಾನಾಸ್ಪದವಾಗಿದ್ದು, ಆಕಾಂಕ್ಷಿಗಳ ಮೂಗಿಗೆ ತುಪ್ಪಸವರಲು ಸಿದ್ದರಾಮಯ್ಯ ಈ ದಾಳ ಪ್ರಯೋಗಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆದಾಗಿಯೂ ಬುಧವಾರ ಬೆಳಗ್ಗೆ ಸಿದ್ದರಾಮಯ್ಯನವರು ದೆಹಲಿಗೆ ತೆರಳಲಿದ್ದು ಅಕ್ಟೋಬರ್ 25ರವರೆಗೂ ಅಲ್ಲಿಯೇ ವಾಸ್ತವ್ಯವಿರುತ್ತಾರೆ. ಕುತೂಹಲಕಾರಿ ಸಂಗತಿ ಎಂದರೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಮಾತ್ರ ಸಿದ್ದರಾಮಯ್ಯ ಅವರ ಜತೆಯಲ್ಲಿ ದೆಹಲಿಗೆ ಹೋಗುತ್ತಿಲ್ಲ. ಬುಧವಾರ ಮಧ್ಯಾಹ್ನದ ಬಳಿಕ ಅವರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಜತೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ 24 ರಂದು ಸ್ವದೇಶಕ್ಕೆ ವಾಪಾಸ್ ಆಗಲಿದ್ದಾರೆ.
ನನ್ನ ಜತೆ ಚರ್ಚಿಸಿಲ್ಲ
ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ನೀಡಿರುವ ಇನ್ನೊಂದು ಹೇಳಿಕೆ ಇಡೀ ಪ್ರಕ್ರಿಯೆ ಬಗ್ಗೆ ಅನುಮಾನ ಹುಟ್ಟಿಸುತ್ತಿದೆ. ಸಂಪುಟ ಪುನಾರಚನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ನನ್ನ ಜತೆ ಇದುವರೆಗೆ ಚರ್ಚೆಯನ್ನೇ ನಡೆಸಿಲ್ಲ. ದೆಹಲಿಗೆ ತೆರಳಿದ ಬಳಿಕ ಈ ಬಗ್ಗೆ ಮಾತುಕತೆ ನಡೆಸಬಹುದು ಎಂದು ಹೇಳಿದ್ದಾರೆ. ಈ ಮಧ್ಯೆ ಸಚಿವ ಸಚಿವಸ್ಥಾನ ಆಕಾಂಕ್ಷಿಗಳ ಬೆಂಬಲಿಗರ ಪ್ರತಿಭಟನೆ ಮತ್ತು ಮನವಿ ಸಲ್ಲಿಸುವಿಕೆ ಮಾತ್ರ ಮುಂದುವರಿದೆ. ಪುನಾರಚನೆ ಸಂದರ್ಭದಲ್ಲಿ ಐದು ಬಾರಿ ಶಾಸಕರಾಗಿರುವ ಬಾದಾಮಿಯ ಬಿ.ಬಿ.ಚಿಮ್ಮನಕಟ್ಟಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಅವರ ಬೆಂಬಲಿಗರು ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.
ಸಂಪುಟದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನ ನೀಡುವಂತೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಪರಮೇಶ್ವರ ಅವರಿಗೆ ಮನವಿ ಮಾಡಿದ್ದಾರೆ. ಮೈಸೂರು, ಮಂಡ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಚಿವ ಸ್ಥಾನಾಕಾಂಕ್ಷಿಗಳ ಬೆಂಬಲಿಗರಿಂದ ಪ್ರತಿಭಟನೆಯ ಬಿಸಿ ಎದುರಿಸಬೇಕಾಗಿದೆ.
ಯಾರವರು....?
ರಾಜ್ಯ ವಿಧಾನ ಮಂಡಲದ ಉಭಯ ಸದನದ ಸದಸ್ಯರಲ್ಲದ ವ್ಯಕ್ತಿಯೊಬ್ಬರು ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಚಿವರಾಗುತ್ತಾರೆಂಬ ಮಾತು ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಹಾಗಾದರೆ ಆ ವ್ಯಕ್ತಿ ಯಾರು ? ಎಂಬ ಪ್ರಶ್ನೆಗೆ ಮಾತ್ರ ಬಹಿರಂಗ ಉತ್ತರ ನೀಡುವುದಕ್ಕೆ ಯಾರು ಮುಂದಾಗುತ್ತಿಲ್ಲ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ತೀರಾ ಆಪ್ತರಾದವರೊಬ್ಬರು ಸಂಪುಟಕ್ಕೆ ಸೇರಬಹುದೆಂಬ ಮಾತು ಮಾತ್ರ ದಟ್ಟವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


