ಊಸರವಳ್ಳಿಯಂತೆ ಬಿಜೆಪಿ: ರಾಮಲಿಂಗಾ ರೆಡ್ಡಿ
ಬಣ್ಣ ಬದಲಿಸುವ ವಿಚಾರದಲ್ಲಿ ಬಿಜೆಪಿ ಮುಖಂಡರು ಊಸರವಳ್ಳಿಯನ್ನು ಮೀರಿಸುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ..

ಬೆಂಗಳೂರು: ಬಣ್ಣ ಬದಲಿಸುವ ವಿಚಾರದಲ್ಲಿ ಬಿಜೆಪಿ ಮುಖಂಡರು ಊಸರವಳ್ಳಿಯನ್ನು ಮೀರಿಸುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ದಿನೇಶ್ ಗುಂಡೂರಾವ್ ಹಾಗೂ ಕೃಷ್ಣ ಬೈರೇಗೌಡರ ಜತೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಗೆ ಅನುಕೂಲವಾಗುವಾಗ ಒಂದು ರೀತಿ, ಅನನುಕೂಲವಾಗುವಾಗ ಒಂದು ರೀತಿ ವರ್ತಿಸುವ ಮೂಲಕ ಬಿಜೆಪಿ ಮುಖಂಡರು ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ. ಬಣ್ಣ ಬದಲಾಯಿಸುವುದರಲ್ಲಿ ಅವರು ಊಸರವಳ್ಳಿಯನ್ನು ಮೀರಿಸುತ್ತಾರೆ. ಈ ಹಿಂದೆ ಬಿಬಿಎಂಪಿ ಮೇಯರ್ ಆಯ್ಕೆ ಸಂದರ್ಭದಲ್ಲಿ ಬಿಜೆಪಿಯಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಮತ ಚಲಾವಣೆ ಮಾಡಿದ್ದನ್ನು ಮರೆತು ಬಿಟ್ಟಿದ್ದಾರೆಯೇ ಎಂದು ವ್ಯಂಗ್ಯವಾಡಿದ್ದಾರೆ.
ಕೆಎಂಸಿ ಕಾಯ್ದೆ ಪ್ರಕಾರ ಕಳೆದ 21 ವರ್ಷಗಳಿಂದ ಇವರೆಲ್ಲರೂ ಮೇಯರ್ ಆಯ್ಕೆಯಲ್ಲಿ ಮತದಾನ ಮಾಡುತ್ತಿದ್ದಾರೆ, ಈಗ ತಮಗೆ ಸಂಖ್ಯಾಬಲ ಇಲ್ಲ ಎಂಬ ಕಾರಣಕ್ಕೆ ಜನಾದೇಶವನ್ನು 198ಕ್ಕೆ ಸೀಮಿತ ಮಾಡಿ ಎಂದು ಹೇಳುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಜಗ್ಗೇಶ್‍ಗೆ ಎಷ್ಟು ಕೋಟಿ?: ವಿಧಾನ ಪರಿಷತ್ ಸದಸ್ಯ ಜಗ್ಗೇಶ್ ಅವರು ಕಾಂಗ್ರೆಸ್ ಪಕ್ಷವನ್ನು ಸನಿ ಲಿಯೋನ್‍ಗೆ ಹೋಲಿಸಿ ವ್ಯಂಗ್ಯ ಮಾಡಿದ್ದಾರೆ. 2008ರವರೆಗೆ ಅವರು ಕಾಂಗ್ರೆಸ್‍ನಲ್ಲೇ ಇದ್ದುಕೊಂಡು ಸನ್ನಿಲಿಯೋನ್ ಸುತ್ತ ಡ್ಯಾನ್ಸ್ ಮಾಡುತ್ತಿದ್ದರು. ಅವರನ್ನು ಒಳಗೊಂಡಂತೆ ಹಲವರನ್ನು ಆಪರೇಷನ್ ಕಮಲದ ಮೂಲಕ ಬಿಜೆಪಿ ತನ್ನತ್ತ ಸೆಳೆದುಕೊಂಡಿತು. ಆಗ ಎಷ್ಟು ಕೋಟಿ ನೀಡಿದ್ದರು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಅವರು ಆಗ್ರಹಿಸಿದರು. ಜಗ್ಗೇಶ್ ಅವರು ಇನ್ನೂ ತುರುವೆಕೆರೆಯ ಮಾಯಸಂದ್ರದ ಮತದಾರರಾಗಿದ್ದಾರೆ. ಆದರೆ, ಬಿಜೆಪಿ ಮುಖಂಡರು ಇದನ್ನು ಮುಚ್ಚಿಟ್ಟು ಉಗ್ರಪ್ಪ ಅವರ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಉಗ್ರಪ್ಪ ಅವರು ತಮ್ಮನ್ನು ಬೆಂಗಳೂರು ನಗರದ ಮತದಾರರಾಗಿ ನೋಂದಣಿ ಮಾಡುವಂತೆ ಕಾನೂನು ರೀತ್ಯ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜತೆಗೆ ತುಮಕೂರಿನಲ್ಲಿರುವ ತಮ್ಮ ಹೆಸರನ್ನು ತೆಗೆದು ಹಾಕುವಂತೆಯೂ ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿ ಯಾವುದೇ ರೀತಿಯಲ್ಲಿ ನಿಯಮ ಉಲ್ಲಂಘನೆಯಾಗಿಲ್ಲ ಎಂದರು.
ತ್ರಿವಿಭಜನೆ ಕೈಬಿಡುವ ಷರತ್ತಿಲ್ಲ: ಬಿಬಿಎಂಪಿ ತ್ರಿವಿಭಜನೆ ಪ್ರಸ್ತಾಪ ಕೈ ಬಿಡುವಂತೆ ಜೆಡಿಎಸ್ ವರಿಷ್ಠರು ಕಟ್ಟಳೆ ಹೇರಿಲ್ಲ. ದೇವೇಗೌಡರು ಕೆಲವಷ್ಟು ಸಲಹೆ ನೀಡಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಬೇಷರತ್ ಮೈತ್ರಿ ಸಾಧಿಸುತ್ತಿವೆ. ಕೆಪಿಸಿಸಿ ಅಧ್ಯಕ್ಷರಾದ ಡಾ. ಜಿ.ಪರಮೇಶ್ವರ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಮಾತುಕತೆ ಸಂದರ್ಭದಲ್ಲಿ ಸಣ್ಣಪುಟ್ಟ ವಿಚಾರಗಳನ್ನು ಬಗೆಹರಿಸಿಕೊಳ್ಳುತ್ತಾರೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


