ಈಶ್ವರಪ್ಪ ಹೇಳಿಕೆಗೆ ಮೇಲ್ಮನೆಯಲ್ಲಿ ಕೋಲಾಹಲ
ಪ್ರತಿಪಕ್ಷ ನಾಯಕರ ಹೇಳಿಕೆಯನ್ನು ಕಡತದಿಂದ ತೆಗೆಯಿರಿ ಎಂಬ ಸಭಾಪತಿಯವರ ಆದೇಶ ಮೇಲ್ಮನೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತಲ್ಲದೇ, ತೀವ್ರ ಗದ್ದಲದ....

ವಿಧಾನ ಪರಿಷತ್ : ಪ್ರತಿಪಕ್ಷ ನಾಯಕರ ಹೇಳಿಕೆಯನ್ನು ಕಡತದಿಂದ ತೆಗೆಯಿರಿ ಎಂಬ ಸಭಾಪತಿಯವರ ಆದೇಶ ಮೇಲ್ಮನೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತಲ್ಲದೇ, ತೀವ್ರ ಗದ್ದಲದ ನಡುವೆ ಕಲಾಪ ಶುಕ್ರವಾರಕ್ಕೆ ಮುಂದೂಡಲ್ಪಟ್ಟಿತು.
ಆಗಿದ್ದಿಷ್ಟು: `ರಾಜ್ಯದಲ್ಲಿ ಭಾರತ್ ಮಾತಾಕೀ ಜೈ ಎಂದವರನ್ನು ಪೊಲೀಸರು ಜೈಲಿಗೆ ಕಳುಹಿಸುತ್ತಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಎಂದವರಿಗೆ ಬೇಲ್ ಸಿಗುತ್ತಿದೆ, ಏನಾಗುತ್ತಿದೆ? ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾವೆಲ್ಲಾ ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿದ್ದಕ್ಕೆ ಜೈಲಿಗೆ ಕಳುಹಿಸಲಾಗಿತ್ತು' ಎಂದು ಪ್ರತಿಪಕ್ಷ ನಾಯಕ ಈಶ್ವರಪ್ಪ ಹೇಳಿದರು.
ಕೊಡಗು ಘಟನೆ ಖಂಡಿಸಿ ಹಾಸನದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತರೊಬ್ಬರು ಬೈಕ್ ರ್ಯಾಲಿ ನಡೆಸಲು ಮುಂದಾಗಿದ್ದರು. ಅವರು ಭಾರತ್ ಮಾತಾಕಿ ಜೈ ಘೋಷಣೆ ಕೂಗಿದ್ದಕ್ಕೆ ಅವರನ್ನು ಬಂಧಿಸಲಾಯಿತು. ಶಿವಮೊಗ್ಗದಲ್ಲಿ ಕೆಎಫ್ ಡಿ ಸಂಘಟನೆ ಸಮಾವೇಶದಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಘೋಷಣೆ ಕೂಗಿದವರಿಗೆ ಬೇಲ್ ಸಿಗುತ್ತದೆ ಎಂದು ವ್ಯಂಗ್ಯವಾಡಿದರು.
ಈ ವೇಳೆ ಕಾಂಗ್ರೆಸ್‍ನ ವಿ.ಎಸ್. ಉಗ್ರಪ್ಪ, ಈ ರೀತಿ ಹೇಳಿಕೆ ಸರಿಯಲ್ಲ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿದ್ದಕ್ಕಾಗಿ ಯಾರನ್ನೂ ಜೈಲಿಗೆ ಹಾಕಿಲ್ಲ. ಪ್ರತಿಪಕ್ಷ ನಾಯಕರು ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ಹೇಳಿಕೆ ನೀಡುತ್ತಿದ್ದಂತೆ, ಸಭಾಪತಿ ಸ್ಥಾನದಲ್ಲಿದ್ದ ಮರಿತಿಬ್ಬೇಗೌಡ ಅವರು, ಪ್ರತಿಪಕ್ಷ ನಾಯಕರು ಹೇಳಿದ ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿದ್ದಕ್ಕಾಗಿ ಪೊಲೀಸರು ಜೈಲಿಗೆ ಹಾಕಿದ್ದಾರೆ ಎಂಬ ಪದಗಳನ್ನು ಕಡತದಿಂದ ತೆಗೆಯುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಕ್ಷಣವೇ ಕೆರಳಿಬಿದ್ದ ಪ್ರತಿಪಕ್ಷ ಸದಸ್ಯರು, ಇದೇನು ಅಸಂವಿಧಾನಿಕ ಪದವಲ್ಲ. ಹೀಗೆ ಕಡತದಿಂದ ತೆಗೆಯುವುದಕ್ಕೆ ನಮ್ಮ ವಿರೋಧವಿದೆ ಎಂದು ಈಶ್ವರಪ್ಪ ನೇತೃತ್ವದಲ್ಲಿ ಸದನದ ಬಾವಿಗಿಳಿದು ಧರಣಿ ನಡೆಸಿದರು. ನಮ್ಮನ್ನು ಭಾರತ್ ಮಾತಾಕೀ ಜೈ ಎಂದಿದ್ದಕ್ಕಾಗಿಯೇ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಂಧಿಸಲಾಗಿತ್ತು ಎಂದು ಈಶ್ವರಪ್ಪ ಮತ್ತು ಪ್ರೊ. ಕೃಷ್ಣಭಟ್ ಹೇಳಿದರು.
ಒಂದು ಹಂತದಲ್ಲಿ ಆಕ್ರೋಶಗೊಂಡ ಬಿಜೆಪಿ ಸದಸ್ಯ ನಾರಾಯಣ ಸಾ ಭಾಂಡಗೆ ಸಭಾಪತಿ ಪೀಠದ ಟೇಬಲ್ ಬಡಿದು ಅಸಮಾಧಾನ ವ್ಯಕ್ತಪಡಿಸಿ ಕ್ಷಮೆ ಕೋರಬೇಕೆಂದು ಪಟ್ಟು ಹಿಡಿದರು. ಕಾಂಗ್ರೆಸ್ ಸದಸ್ಯ ರು ಮತ್ತು ಬಿಜೆಪಿ ಸದಸ್ಯರು ಪ್ರತ್ಯೇಕವಾಗಿ ಘೋಷಣೆ ಮೊಳಗಿಸಿದ್ದರಿಂದ ಕೋಲಾಹಲ ಹೆಚ್ಚಿ ಸದನವನ್ನು 15 ನಿಮಿಷ ಮುಂದೂಡಲಾಯಿತು. ಸದನ ಪುನರಾರಂಭವಾದಾಗ ಉಪ ಸಭಾಪತಿ ಮರಿತಿಬ್ಬೇಗೌಡರು ತಮ್ಮ ವಾದವನ್ನು ಸಮರ್ಥಿಸಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಕೆ.ಎಸ್. ಈಶ್ವರಪ್ಪ, ನಿಮ್ಮ ಹೇಳಿಕೆಯನ್ನು ಖಂಡಿಸುವುದಾಗಿ ಹೇಳಿದರಲ್ಲದೇ, ತಮ್ಮ ಹೇಳಿಕೆಗೆ ಮತ್ತೆ ಬದ್ಧ ಎಂದು ಘೋಷಿಸಿದರು. ಇದರಿಂದ ಕ್ರುದ್ಧರಾದ ಮರಿತಿಬ್ಬೇಗೌಡ, ನೀವು ಎಷ್ಟೇ ಸರಿ ಹೇಳಿದರೂ ಕಡತದಿಂದ ತೆಗೆದು ಹಾಕಲಾಗುವುದು ಎಂದರು. ಮತ್ತೂ ಅಸಮಾಧಾನಗೊಂಡ ಈಶ್ವರಪ್ಪ, ನಾವು ನೂರಲ್ಲ ಸಾವಿರಬಾರಿ ಅದನ್ನೇ ಹೇಳುವುದು. ಜೈಲಿಗೆ ಕಳುಹಿಸಿದರೂ ಸರಿಯೇ ಎಂದು ಮತ್ತೆ ಧರಣಿ ಮುಂದುವರಿಸಿದರು.
ಪರಿಸ್ಥಿತಿ ಕೈಮೀರಿದ ಹಂತ ತಲುಪಿದಾಗ ಸದನವನ್ನು ಶುಕ್ರವಾರ ಬೆಳಗ್ಗೆಗೆ ಮುಂದೂಡಲಾಯಿತು. ಅಚ್ಚರಿ ಎಂದರೆ ಪ್ರತಿಪಕ್ಷದ ಕೆಲವು ಸದಸ್ಯರು ಸಭಾಪತಿಯವರ ವಿರುದ್ಧ ದಿಕ್ಕಾರದ ಘೋಷಣೆ ಕೂಗಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


