ಬಿಜೆಪಿ ಮುಕ್ತ ರಾಜ್ಯ ಸಿದ್ದು ಕನಸು: ಜಗದೀಶ ಶೆಟ್ಟರ್
ಬಿಜೆಪಿ ಮುಕ್ತ ಕರ್ನಾಟಕ ಮಾಡುವುದಾಗಿ ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾತಿನ ಸಮರ ಸಾರಿರುವ ಬಿಜೆಪಿ ಮುಖಂಡರು, ಬಿಜೆಪಿಯನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ...

ಹುಬ್ಬಳ್ಳಿ: ಬಿಜೆಪಿ ಮುಕ್ತ ಕರ್ನಾಟಕ ಮಾಡುವುದಾಗಿ ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾತಿನ ಸಮರ ಸಾರಿರುವ ಬಿಜೆಪಿ ಮುಖಂಡರು, ಬಿಜೆಪಿಯನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.
ಭಾನುವಾರ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್, ಸಿದ್ದರಾಮಯ್ಯ ಆಗಲೇ ಕರ್ನಾಟಕದಲ್ಲಿ ಕಾಂಗ್ರೆಸ್‍ಗೆ ನೆಲೆ ಇಲ್ಲದಂತೆ ಮಾಡಿದ್ದಾರೆ. ಇನ್ನು ಬಿಜೆಪಿ ಮುಕ್ತ ಕರ್ನಾಟಕ ಮಾಡುವ ಪ್ರಶ್ನೆ ಎಲ್ಲಿಂದ ಬಂತು ಎಂದು ವ್ಯಂಗ್ಯವಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಮುಕ್ತ ಕರ್ನಾಟಕ ಮಾಡುವುದಾಗಿ ಘೋಷಿಸಿರುವುದು ಹಾಸ್ಯಾಸ್ಪದ. ಸ್ವತಃ ಸಿದ್ದರಾಮಯ್ಯ ಮತ್ತವರ ಸಚಿವರಲ್ಲಿ ಬಹುಪಾಲು ಮಂದಿ ಬೇರೆ ಪಕ್ಷದಿಂದ ಬಂದವರೇ. ಸಿದ್ದರಾಮಯ್ಯ ಶುದ್ಧ ಕಾಂಗ್ರೆಸಿಗ ಎನ್ನುವಂತೆ ತೋರಿಸಿಕೊಳ್ಳುತ್ತಿದ್ದಾರೆ. ಮೂಲ ಕಾಂಗ್ರೆಸಿಗರು ಅವರ ಮಾತು ನಂಬುವ ಸ್ಥಿತಿಯಲ್ಲಿ ಇಲ್ಲ. ಅನುಮಾನವಿದ್ದರೆ ಎಸ್.ಎಂ. ಕೃಷ್ಣ ಬಳಿ ವಿಚಾರಿಸಿ ಕೊಳ್ಳಲಿ. ಬಿಜೆಪಿ ಮುಕ್ತ ಎನ್ನುವುದು ದುರಂಹಕಾರದ ಮಾತು ಎಂದು ಜೋಶಿ ಹೇಳಿದರು.
ಕಾಂಗ್ರೆಸ್ ಸಾಧನಾ ಸಮಾವೇಶವನ್ನು ಮೋದಿ ಹಾಗೂ ಬಿಜೆಪಿಯನ್ನು ಟೀಕಿಸಲು ಆಯೋಜಿಸಿದಂತಿತ್ತು. ಕೇಂದ್ರದ ಜತೆ ಬಾಂಧವ್ಯ ಚೆನ್ನಾಗಿದೆ, ನರೇಂದ್ರ ಮೋದಿ ಸಹಕಾರ ನೀಡುತ್ತಿದ್ದಾರೆ ಎನ್ನುವ ಸಿದ್ದರಾಮಯ್ಯ, ಚೀನಾ ಪ್ರವಾಸಕ್ಕೆ ಹೋಗಲಿಲ್ಲ. ಸಮಾವೇಶದಲ್ಲಿ ಮೋದಿಯನ್ನು ತೆಗಳಿದರು. ಅವರ ದ್ವಂದ್ವ ನಿಲುವು ಇದರಿಂದ ಸ್ಪಷ್ಟವಾಗುತ್ತದೆ ಎಂದು ಜೋಶಿ ಹೇಳಿದರು.
ಬಾಲಿಶ ಹೇಳಿಕೆ: ಸಿದ್ದರಾಮಯ್ಯ ಹೇಳಿಕೆ ಬಾಲಿಶತನದ್ದು ಎಂದು ಜಗದೀಶ ಶೆಟ್ಟರ್ ಹೇಳಿದರು. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯುತ್ತದೆ ಎನ್ನುವ ಭಯದಿಂದ ಕಾಂಗ್ರೆಸ್ ಮುಖಂಡರು ಇಂಥ ಕ್ಷುಲ್ಲಕ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಗೆ ಶಿಸ್ತು ಎನ್ನುವುದೇ ಇಲ್ಲ. ಬಡವರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ 2 ವರ್ಷದಲ್ಲಿ ಶೂನ್ಯ ಸಾಧನೆ ಮಾಡಿದೆ. ಅದಕ್ಕೊಂದು ಸಮಾವೇಶ ಬೇರೆ ಕೇಡು ಎಂದು ಶೆಟ್ಟರ್ ಗೇಲಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


