ಸಾವು ಭಾಗ್ಯದಿಂದ ರೈತರ ಪಾರು ಮಾಡಿ: ಜಗದೀಶ್ ಶೆಟ್ಟರ್
ಮಾನ್ಯ ಮುಖ್ಯಮಂತ್ರಿಗಳೇ ಕಬ್ಬು ಬೆಳೆಗಾರರಿಗೆ ಕಾರ್ಖಾನೆ ಮಾಲೀಕರಿಂದ ಬಾಕಿ ಕೊಡಿಸಿ, ಸಾವಿನ ಭಾಗ್ಯದಿಂದ ಅವರನ್ನು ಪಾರು ಮಾಡಿ...

ವಿಧಾನಸಭೆ: ಮಾನ್ಯ ಮುಖ್ಯಮಂತ್ರಿಗಳೇ ಕಬ್ಬು ಬೆಳೆಗಾರರಿಗೆ ಕಾರ್ಖಾನೆ ಮಾಲೀಕರಿಂದ ಬಾಕಿ ಕೊಡಿಸಿ, ಸಾವಿನ ಭಾಗ್ಯದಿಂದ ಅವರನ್ನು ಪಾರು ಮಾಡಿ.
ಹೀಗೆಂದು ಗುಡುಗಿದವರು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್. ಅವರು ಸದನದಲ್ಲಿ ರೈತರ ಸಮಸ್ಯೆ ಮತ್ತು ಆತ್ಮಹತ್ಯೆ ಪ್ರಕರಣ ಸಂಬಂಧ ನಿಯಮ 69ರ ಅನ್ವಯ ಸಾರ್ವಜನಿಕ ವ್ಯವಹಾರಗಳಿಗೆ ಸಂಬಂಧಿಸಿದ ತುರ್ತು ವಿಚಾರದ ಬಗ್ಗೆ ಪ್ರಸ್ತಾಪಿಸಿ, ಕಾರ್ಖಾನೆ ಮಾಲೀಕರು ಕೊಡಬೇಕಿರುವ ಬಾಕಿಯನ್ನು ಕೂಡಲೇ ಚುಕ್ತಾ ಮಾಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.
ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಕಬ್ಬು ಬೆಳೆಗಾರರಿಗೆ ಕೇವಲ ಭರವಸೆ ನೀಡುತ್ತಿದೆ. ವಾಸ್ತವದಲ್ಲಿ ಅವರ ಸಮಸ್ಯೆ ಹಾಗೆಯೇ ಇದೆ. ಮುಕ್ತ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಕಡಿಮೆ ಆಗಿದೆ ಎಂಬುದು ಕೇವಲ ನೆಪ. ಸಕ್ಕರೆ ಉದ್ಯಮ ನಷ್ಟದಲ್ಲಿದ್ದರೆ ಹೊಸದಾಗಿ 30 ಕಾರ್ಖಾನೆಗಳನ್ನು ಆರಂಭಿಸುವುದಕ್ಕೆ ಏಕೆ ಮುಂದಾಗುತ್ತಿದ್ದರು? ಸಕ್ಕರೆ ಕಾರ್ಖಾನೆ ಮಾಲೀಕರ ಜತೆಗಿನ ಶಾಮೀಲು ವ್ಯವಹಾರವನ್ನು ಸರ್ಕಾರ ನಿಲ್ಲಿಸಬೇಕು. ನಾನು ಹೊಡೆದಾಂಗ್ ಮಾಡ್ತೀನಿ, ನೀನ್ ಅತ್ತಂಗ್ ಮಾಡು ಎಂಬ ಡ್ರಾಮಾ ನಿಲ್ಲಿಸಿ, ಕುಂಭಕರ್ಣ ನಿದ್ರೆ ಹೊಡೆಯುವುದನ್ನು ಬಿಟ್ಟು ರೈತರಿಗೆ ಕಳೆದ ವರ್ಷದ ರು.960 ಕೋಟಿ ಬಾಕಿ ಹಣ ಕೊಡಿಸಿ ಎಂದು ಆಗ್ರಹಿಸಿದರು.
ರೈತರು ಕಬ್ಬು ಪೂರೈಕೆ ಮಾಡಿದ 14 ದಿನದೊಳಗೆ ಹಣ ಪಾವತಿ ಮಾಡದ ಕಾರ್ಖಾನೆ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಈ ಸದನ ಜಾರಿಗೆ ತಂದ ಎಸ್‍ಎಪಿ ಕಾಯ್ದೆ ಪ್ರಕಾರ ಅವಕಾಶವಿದೆ. ಆದರೆ, ನೀವು ಇದುವರೆಗೆ ಎಷ್ಟು ಜನರ ವಿರುದ್ಧ ಕ್ರಮ ತೆಗೆದುಕೊಂಡಿದ್ದೀರಿ? ನಿಯಮ ಉಲ್ಲಂಘಿಸಿದವರನ್ನು ಜೈಲಿಗೆ ಕಳುಹಿಸಬಹುದು. ಇಷ್ಟು ದಿನದಲ್ಲಿ ಎಷ್ಟು ಕಾರ್ಖಾನೆ ಮಾಲೀಕರನ್ನು ಜೈಲಿಗೆ ಕಳುಹಿಸಿದ್ದೀರಿ ಎಂದು ಪ್ರಶ್ನಿಸಿದರು.
ಸದನದಲ್ಲಿ ಮಂಡಿಸಿ: ರಾಜ್ಯದಲ್ಲಿ ಎಲ್ಲೆಡೆ ರೈತರ ಆತ್ಮಹತ್ಯೆ ಸರಣಿ ಪ್ರಾರಂಭವಾಗಿದೆ. ಇಂಥ ಸಂದರ್ಭದಲ್ಲಿ ಮುಖ್ಯಮಂತ್ರಿ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಜವಾಬ್ದಾರಿಯಿಂದ ವರ್ತಿಸುತ್ತಿಲ್ಲ. ಒಬ್ಬ ರೈತನ ಮನೆಗೆ ಹೋಗಿ ಸಾಂತ್ವನ ಹೇಳಿಲ್ಲ. ನನ್ನದು ಬಡವರು ಮತ್ತು ರೈತ ಪರ ಸರ್ಕಾರ ಎಂದು ಹೇಳುವ ನಿಮಗೆ ಕಿಂಚಿತ್ತಾದರೂ ನೈತಿಕ ಮೌಲ್ಯ ಇದ್ದಿದ್ದರೆ ರಾಜಿನಾಮೆ ಕೊಡಬೇಕಿತ್ತು. ಜನ ನಿಮಗೆ ಛೀ, ಥೂ ಎನ್ನುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


